Advertisement
ಚಾಮರಾಜನಗರ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದ ನಟ ಪುನೀತ್ ರಾಜ್‌ಕುಮಾರ್ ಅವರ ಮಾನವೀಯ ಸೇವಾ ಕಾರ್ಯಗಳು ಸದಾ ಸ್ಮರಣೀಯವಾದದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪುನೀತ್ ರಾಜ್ ಕುಮಾರ್ ಅವರ ನೇತ್ರದಾನದ ಆದರ್ಶವನ್ನಿಟ್ಟುಕೊಂಡು ನವೆಂಬರ್ ಅಂತ್ಯದೊಳಗೆ 10 ಸಾವಿರ ಜನರನ್ನು ನೇತ್ರದಾನಕ್ಕಾಗಿ ನೊಂದಾಯಿಸುವ ಕಾರ್ಯದ ಗುರಿಯನ್ನು ಹೊಂದಿದೆ. ಪುನೀತ್ ರಾಜ್‌ಕುಮಾರ್ ಅವರು 46ನೇ ವಯಸ್ಸಿನಲ್ಲಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 46 ಸಾವಿರ ಜನರನ್ನು ನೇತ್ರದಾನಕ್ಕಾಗಿ ನೋಂದಾಯಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ.
Related Articles
Advertisement
ಇದನ್ನೂ ಓದಿ : ದಲಿತ ನಾಯಕರು ಹೊಟ್ಟೆಪಾಡಿಗೆ ಬಿಜೆಪಿಗೆ ಹೋಗಿದ್ದು ನೂರಕ್ಕೆ ನೂರು ಸತ್ಯ : ತಂಗಡಗಿ
ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಚಾಮರಾಜನಗರ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಹಾಗೂ ತವರೂರಿನ ನಟ ಆಗಿದ್ದ ಪುನೀತ್ ರಾಜ್‌ಕುಮಾರ್ ಅವರಿಗೆ ಜಿಲ್ಲೆಯ ವತಿಯಿಂದ ಗೌರವಪೂರ್ವಕ ಸ್ಮರಣೀಯ ಕಾರ್ಯವನ್ನು ಹಮ್ಮಿಕೊಳ್ಳಬೇಕಿದೆ. ಯಾವುದೇ ವ್ಯಕ್ತಿ ಮರಣ ಹೊಂದಿದ ನಂತರ ಕಣ್ಣುಗಳು ಮಣ್ಣಾಗಬಾರದು. ಆ ಕಣ್ಣುಗಳು ಜೀವಂತವಿದ್ದು ಇತರೆ ಅಂಧರಿಗೆ ದಾರಿದೀಪವಾಗಬೇಕು. ಪುನೀತ್ ರಾಜ್‌ಕುಮಾರ್ ಅವರ ನೇತ್ರದಾನ ಆದರ್ಶ ಎಲ್ಲರಲ್ಲಿಯೂ ಬರಬೇಕು. ಇದಕ್ಕಾಗಿ ಜಿಲ್ಲೆಯಾದ್ಯಂತ ನೇತ್ರದಾನ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ಜನರನ್ನು ಜಾಗೃತಗೊಳಿಸಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ನೇತ್ರದಾನ ಅಭಿಯಾನ ಹಮ್ಮಿಕೊಳ್ಳುವ ಉದ್ದೇಶದಿಂದ ಎಲ್ಲಾ ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಕಲಚೇತನರ ಇಲಾಖೆಯ ವರದಿಯನ್ವಯ ಜಿಲ್ಲೆಯಲ್ಲಿ 3500 ಮಂದಿ ಅಂಧರಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ಮಂದಿ ಅಂಧರಿದ್ದಾರೆ ಎಂಬುದನ್ನು ಸರ್ವೇ ಕಾರ್ಯ ಆರಂಭಿಸುವ ಅಗತ್ಯವಿದೆ. ಇದಕ್ಕಾಗಿ ವ್ಯವಸ್ಥಿತವಾದ ಗುರಿ ನಿಗದಿಪಡಿಸಿಕೊಳ್ಳಬೇಕು. ಜಿಲ್ಲಾಡಳಿತ ಭವನದಲ್ಲಿಯೂ ಸಹ ಒಂದು ದಿನದ ಶಿಬಿರವನ್ನು ಆಯೋಜಿಸಲಾಗುವುದು. ನೇತ್ರದಾನ ಶಿಬಿರದಲ್ಲಿ ದೃಷ್ಠಿದಾನಕ್ಕಾಗಿ ನೋಂದಾಯಿತರಾದವರಿಗೆ ನೀಡಲು ಅರ್ಜಿ ನಮೂನೆ, ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು ಸಿದ್ದಪಡಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಜಿಲ್ಲೆಯಲ್ಲಿ ಕಣ್ಣಿನ ಆಸ್ಪತ್ರೆಯ ಅವಶ್ಯವಿದ್ದು, ಈಗಾಗಲೇ ಜಾಗ ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಾಗ ಲಭ್ಯವಿಲ್ಲದಿದ್ದರೆ ಸರ್ಕಾರದಿಂದಲೇ ಸ್ಥಳ ನೀಡಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಿರುವ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನಿಧಿ ಕೇಂದ್ರ (ಐ ಬ್ಯಾಂಕ್) ವನ್ನು ಸ್ಥಾಪಿಸಲಾಗುವುದು ಜಿಲ್ಲೆಯಲ್ಲಿ ನಿರ್ಮಾಣ ಮಾಡುವ ಕಣ್ಣಿನ ಆಸ್ಪತ್ರೆಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನೇ ಇಡೆಉವ ಮೂಲಕ ಜಿಲ್ಲಾಡಳಿತ ಗೌರವ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಸಂಜೀವ್, ಜಿಲ್ಲಾಸ್ಪತ್ರೆಯ ನೋಡೆಲ್ ಅಧಿಕಾರಿ, ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ. ಮಹೇಶ್, ಜಿಲ್ಲಾ ಸರ್ವೇಲೆನ್‌ಸ್ ಘಟಕದ ಅಧಿಕಾರಿ ಡಾ. ನಾಗರಾಜು ಇತರರು ಸಭೆಯಲ್ಲಿ ಹಾಜರಿದ್ದರು.