ಚಾಮರಾಜನಗರ: ಕೇಂದ್ರ ಸರ್ಕಾರದ ಮಾದರಿಯ (ಸಿಜಿಎಚ್‌ಎಸ್) ವೇತನ ಶ್ರೇಣಿ ನೀಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ವೈದ್ಯರು ಮಂಗಳವಾರ ಸಾಂಕೇತಿಕ ಮುಷ್ಕರ ನಡೆಸಿದರು. ಈ ಹಿನ್ನೆಲೆಯಲ್ಲಿ ಮಂಗಳವಾರದ ಜಿಲ್ಲಾ ಕೋವಿಡ್ ಅಂಕಿ ಅಂಶಗಳನ್ನು ಆರೋಗ್ಯ ಇಲಾಖೆ ನೀಡಲಿಲ್ಲ.
ರಾಜ್ಯ ಸರ್ಕಾರದ ವೈದ್ಯಾಧಿಕಾರಿಗಳ ಸಂಘವು ಹಲವು ಬಾರಿ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಜುಲೈ 22ರಂದು ಮನವಿ ಸಲ್ಲಿಸಿದೆ. ಈ ಬೇಡಿಕೆಗಳನ್ನು ಆ. 15ರೊಳಗೆ ಸರ್ಕಾರ ಈಡೇರಿಸದಿದ್ದಲ್ಲಿ ಹಂತ ಹಂತವಾಗಿ ಮುಷ್ಕರ ನಡೆಸುವುದಾಗಿ ತಿಳಿಸಲಾಗಿತ್ತು. ಆದರೂ ತಮ್ಮ ಬೇಡಿಕೆಗಳು ಈಡೇರದ ಕಾರಣ ಸೆ. 15ರಿಂದ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.
ಅದರಂತೆ ಸೆ. 15ರಿಂದ ಮೊದಲ ಹಂತವಾಗಿ ಇಲಾಖೆಯ ವರದಿಗಳನ್ನು ಸರ್ಕಾರಕ್ಕೆ ನೀಡುವುದನ್ನು ಸ್ಥಗಿತಗೊಳಿಸಲಾಗುತ್ತಿದೆ. ಹಾಗಾಗಿ ಜಿಲ್ಲೆಯ ಕೋವಿಡ್ ಅಂಕಿ ಅಂಶಗಳನ್ನು ಆರೋಗ್ಯ ಇಲಾಖೆ ಮಂಗಳವಾರ ನೀಡಿಲ್ಲ.
ಇದನ್ನೂ ಓದಿ:5 ಮಂದಿ ಯುವಕರ ಬೆನ್ನಟ್ಟಿದ ಪೊಲೀಸರು: ರಕ್ಷಣೆಗಾಗಿ ನದಿಗೆ ಜಿಗಿದ ಯುವಕರು! ಮುಂದೇನಾಯ್ತು?
ಸೆ. 20ರೊಳಗೆ ಬೇಡಿಕೆ ಈಡೇರದಿದ್ದಲ್ಲಿ ಸೆ. 21ರಿಂದ ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲಾ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾ ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಸಂಘದ ಅಧ್ಯಕ್ಷ ಡಾ. ಸೋಮಣ್ಣ, ಡಾ. ಕೃಷ್ಣಪ್ರಸಾದ್, ಡಾ. ಎಂ.ಸಿ. ರವಿ, ಡಾ. ವಿಶ್ವೇಶ್ವರಯ್ಯ, ಡಾ. ಮಹೇಶ್, ಡಾ. ರವಿಶಂಕರ್, ಡಾ. ನಾಗರಾಜು, ಡಾ. ಶಶಿರೇಖಾ, ಡಾ. ಶಿವಸ್ವಾಮಿ ಮತ್ತಿತರ ವೈದ್ಯರು ಎಡೀಸಿಯವರಿಗೆ ಮನವಿ ಸಲ್ಲಿಸಿದರು.