ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮಹತ್ವದ ಕುರಿತು ಖುದ್ದು ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದರು.
ನಗರದ ಜೈಭುವನೇಶ್ವರಿ ವೃತ್ತ, ಸಂತೇಮರಹಳ್ಳಿ ಹೋಬಳಿ ಕೇಂದ್ರದ ಪ್ರಮುಖ ವೃತ್ತಗಳಲ್ಲಿ ಸೋಮವಾರ ಜಿಲ್ಲಾಧಿಕಾರಿಯವರು ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿದರು.
ಮಾಸ್ಕ್ ಧರಿಸದೇ ವಾಹನದಲ್ಲಿ ಸಂಚರಿಸುತ್ತಿದ್ದವರು, ಕಾಲ್ನಡಿಗೆಯಲ್ಲಿ ಹೋಗುತ್ತಿದ್ದವರನ್ನು ಮಾತನಾಡಿಸಿ ಸೋಂಕು ತಡೆಗಟ್ಟಲು ಮಾಸ್ಕ್ ಧರಿಸಲೇಬೇಕಾದ ಸದುದ್ದೇಶ ಕುರಿತು ಮನವರಿಕೆ ಮಾಡಿಕೊಟ್ಟರು. ಆರೋಗ್ಯ ಕಾಳಜಿಯಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡುವ ಮೂಲಕ ಜನರಲ್ಲಿ ಜಿಲ್ಲಾಧಿಕಾರಿಯವರು ಅರಿವು ಮೂಡಿಸಿದರು.
ಇದನ್ನೂ ಓದಿ :ಟೋಲ್ ಕೇಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯ : ಐದು ಮಂದಿ ವಶಕ್ಕೆ
ಪ್ರಮುಖ ವೃತ್ತಗಳಲ್ಲಿ ಬಹಳ ಹೊತ್ತು ನಿಂತು ಮಾಸ್ಕ್ ಧರಿಸುವಿಕೆ ಬಗ್ಗೆ ವ್ಯಾಪಕವಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ವೃತ್ತಗಳಲ್ಲಿ ಕರ್ತವ್ಯ ನಿಯೋಜಿತರಾಗಿದ್ದ ಪೊಲೀಸ್, ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರು ಮಾಸ್ಕ್ ಧರಿಸಬೇಕಾದ ಮಹತ್ವದ ಬಗ್ಗೆ ಮೈಕ್ ಮೂಲಕ ತಿಳುವಳಿಕೆ ನೀಡಬೇಕು. ಸಾಕಷ್ಟು ಎಲ್ಲಾ ಕಡೆ ಮಾಸ್ಕ್ ಧರಿಸಲೇಬೇಕೆಂಬ ಬಗ್ಗೆ ಜನರಿಗೆ ಹೆಚ್ಚು ಅರಿವು ಮೂಡಿಸಬೇಕು. ಮಾಸ್ಕ್ ಧರಿಸದೇ ಇರುವುದು ಕಂಡುಬಂದಲ್ಲಿ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ಅಧಿಕಾರಿಗಳಿಗೆ ಸೂಚನೆ ನೀಡಿದರು.