Advertisement

ಪ್ರೀತಿಸುವ ನಾಟಕವಾಡಿ ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ: 7 ಮಂದಿಗೆ 10 ವರ್ಷ ಶಿಕ್ಷೆ

09:34 PM Jan 31, 2023 | Team Udayavani |

ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ, ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ಅಪಹರಿಸಿ, ಅತ್ಯಾಚಾರ ನಡೆಸಿದ ಆರೋಪದ ಪ್ರಮುಖ ಆರೋಪಿ ಗೆ ಹಾಗೂ ಇದಕ್ಕೆ ಸಹಕರಿಸಿದ ಇನ್ನುಳಿದ ಆರು ಮಂದಿಗೆ ನಗರದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್‌ಸ್ ನ್ಯಾಯಾಲಯ ಪೋಕ್ಸೋ ಕಾಯ್ದೆಯನ್ವಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

Advertisement

ನಗರದ ಕ್ರಿಶ್ಚಿಯನ್ ಕಾಲೋನಿ ನಿವಾಸಿ ಮಹಮದ್ ಮೀನಜ್ ಖಾನ್ (24) ಅತ್ಯಾಚಾರ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಪೋಕ್ಸೋ ಕಾಯ್ದೆ ಕಲಂ 6ರ ಅನ್ವಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ನಗರದ ಎ.ಪಿ. ಮೊಹಲ್ಲಾ ನಿವಾಸಿ ಸಲ್ಮಾನ್ ಖಾನ್ (24), ಮಂಡ್ಯ ನಗರದ ಶಾರುಖ್ ಖಾನ್ (22), ಬೆಂಗಳೂರಿನ ಬೊಮ್ಮನಹಳ್ಳಿಯ ವಹೀದ್ ಅಹಮದ್ (18), ಮಂಡ್ಯದ ವಿ.ವಿ. ಬಡಾವಣೆಯ ಮಹಮದ್ ಅಮೀರ್ (24), ನಗರದ ಕ್ರಿಶ್ಚಿಯನ್ ಕಾಲೋನಿ ನಿವಾಸಿ ಮುಸ್ತಾಖಿಮ್ ಖಾನ್ (28) ಮೈಸೂರಿನ ಶಾಂತಿ ನಗರದ ಸಯ್ಯದ್ ಉಮರ್ (29) ಎಂಬುವರು ಪ್ರಕರಣಕ್ಕೆ ಸಹಕರಿಸಿದ ಹಿನ್ನೆಲೆಯಲ್ಲಿ ಇವರೆಲ್ಲರಿಗೂ ಪೋಕ್ಸೋ ಕಾಯ್ದೆ ಕಲಂ 17ರ ಅನ್ವಯ ತಲಾ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ವಿವರ: 2016ರಲ್ಲಿ ಈ ಪ್ರಕರಣ ನಡೆದಿದ್ದು, ಮೊದಲ ಆರೋಪಿ ಮೀನಜ್‌ಖಾನ್ ಎಂಬಾತ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ, ಆಕೆಯ ಖಾಸಗಿ ಫೋಟೋಗಳನ್ನು ಸೆರೆಹಿಡಿದು, ತನ್ನ ಜೊತೆ ಬಾರದೇ ಹೋದರೆ, ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬ್ಯ್ಲಾಕ್ ಮೇಲ್ ಮಾಡಿದ್ದ. ಬಳಿಕ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದ. ಬಾಲಕಿಯ ಇಷ್ಟಕ್ಕೆ ವಿರುದ್ಧವಾಗಿ ಅತ್ಯಾಚಾರ ನಡೆಸಿದ್ದ. ಈ ಹಿನ್ನೆಲೆಯಲ್ಲಿ ತಮ್ಮ ಮಗಳನ್ನು ಹುಡುಕಿಕೊಡುವಂತೆ ಬಾಲಕಿಯ ತಂದೆ ಪಟ್ಟಣ ಠಾಣೆಗೆ ದೂರು ನೀಡಿದ್ದರು.

ಅಂದು ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಆಗಿದ್ದ ಪ್ರಸ್ತುತ ನಗರದ ಪೂರ್ವ ಠಾಣೆ ಇನ್‌ಸ್ಪೆಕ್ಟರ್ ಆಗಿರುವ ಆರ್. ಶ್ರೀಕಾಂತ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಬಾಲಕಿಯನ್ನು ಅಪಹರಿಸಿ ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ಬಚ್ಚಿಡಲಾಗಿತ್ತು. ಇದಕ್ಕೆ ಮೊದಲ ಆರೋಪಿಗೆ ಉಳಿದ ಆರು ಮಂದಿ ಆರೋಪಿಗಳು ಸಹಕರಿಸಿದ್ದರು. ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಶ್ರೀಕಾಂತ್ ಅವರು ಆರೋಪಿಗಳನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳವಾರ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್‌ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎ.ಸಿ. ನಿಶಾರಾಣಿಯವರು ಅಪರಾಧಿಗಳಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರವನ್ನು 30 ದಿನಗಳೊಳಗೆ ನೀಡಬೇಕೆಂದು ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ  ಕೆ. ಯೋಗೇಶ್ ವಾದ ಮಂಡಿಸಿದ್ದರು.

Advertisement

ಇದನ್ನೂ ಓದಿ: ಡಿಕೆಶಿ, ರಮೇಶ್,‌ ಲಕ್ಷ್ಮೀ ವೈಯಕ್ತಿಕ ನಿಂದನೆ ಬಿಡಲಿ: ಬಾಲಚಂದ್ರ ಜಾರಕಿಹೊಳಿ ಮನವಿ

Advertisement

Udayavani is now on Telegram. Click here to join our channel and stay updated with the latest news.

Next