ಮ್ಯಾನೇಜಿಂಗ್ ಡೈರೆಕ್ಟರ್ ಅವರು ನಾಲ್ವರ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
Advertisement
ಮೈಸೂರಿನ ಪಿನಿಕಲ್ ಆಸ್ಪತೆ ಮ್ಯಾನೇಜಿಂಗ್ ಡೈರೆಕ್ಟರ್ ಶಂಕರ್ ( ಮೂಲ ಸ್ಥಳ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎಲದಳ್ಳಿ) ಎಂಬುವರು, ಶ್ರೀರಂಗಪಟ್ಟಣದ ಮೂಷಾ, ಮತೀನ್, ತೆಳ್ಳನೂರು ಗ್ರಾಮದ ಶಿವು ಹಾಗೂ ಕಣ್ಣೂರು ಗ್ರಾಮದ ಮಹೇಶ್ ವಿರುದ್ಧ ವಂಚನೆ ಪ್ರಕರಣದ ದೂರು ನೀಡಿದ್ದಾರೆ.
ಅಕ್ಟೋಬರ್‌ನಲ್ಲಿ ಮತೀನ್ ಎಂಬ ವ್ಯಕ್ತಿ ಪರಿಚಯವಿದ್ದು, ಆತನಿಗೆ 40 ಲಕ್ಷ ರೂ. ನೀಡಿದರೆ, ಅದರ ಬದಲಿಗೆ 1 ಕೋಟಿ ನೀಡುತ್ತಾರೆ ಎಂದು ತಿಳಿಸಿದರು. ಇದನ್ನು ನಂಬಿ ನಾವು ಹಣ ನೀಡಿದೆವು ಎಂದು ದೂರುದಾರರು ತಿಳಿಸಿದ್ದಾರೆ. ದೂರಿನ ಸಾರಾಂಶ ಇಂತಿದೆ: 2021ರ ಡಿಸೆಂಬರ್ 7 ರಂದು ಶ್ರೀರಂಗಪಟ್ಟಣಕ್ಕೆ ಹೋಗಿ ಮೂಷಾ ಮತ್ತು ಮತಿನ್ ಅವರನ್ನು ಭೇಟಿಯಾಗಿ ಅವರಿಗೆ 10 ಲಕ್ಷ ರೂ. ನೀಡಿದೆವು. ಅವರು 50 ಸಾವಿರ ರೂ. ನೀಡಿ ಇದನ್ನು ಖರ್ಚು ಮಾಡಿ ಎಂದು ಹೇಳಿದರು. ನಂತರ ಡಿ. 15ರಂದು ನಾನು ಮತ್ತು ಚಾಲಕ ರಘು 25 ಲಕ್ಷ ರೂ. ಹಣ ಸಿದ್ಧಪಡಿಸಿಕೊಂಡು ಮತಿನ್‌ಗೆ ಫೋನ್ ಮಾಡಿದೆವು. ಆತ ಕೊಳ್ಳೇಗಾಲಕ್ಕೆ ಬರಲು ಸೂಚಿಸಿದ. ಅಲ್ಲಿ ಶಿವು ಮತ್ತು ಮಹೇಶ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ತಮಿಳುನಾಡಿನ ಸತ್ಯಮಂಗಲ ಮಾರ್ಗ ಬಣ್ಣಾರಿ ದೇವಾಲಯಕ್ಕೆ ಬರಲು ತಿಳಿಸಿದ.
ಅಲ್ಲಿಗೆ ಹೋದ ಬಳಿಕ ಒಂದು ದಿನ ಕಾಯಿಸಿ, ಮತ್ತೆ ಮಧುವನಹಳ್ಳಿಗೆ ಬನ್ನಿ ಎಂದ.
Related Articles
Advertisement
ಮಧುವನಹಳ್ಳಿ ಗ್ರಾಮದ ಹೊರವಲಯದಲ್ಲಿ ಕಾರನ್ನು ನಿಲ್ಲಿಸಿಕೊಂಡು ನಿಂತಿದ್ದೆವು. ಎರಡು ಪ್ರತ್ಯೇಕ ಕಾರಿನಲ್ಲಿ ಬಂದ ಮತಿನ್ ಹಾಗೂ ಮೂಷಾ ನಮ್ಮಿಂದ 25 ಲಕ್ಷ ರೂ. ಪಡೆದು ಕಾರಿನಲ್ಲಿಟ್ಟರು. ಉಳಿಕೆ 5 ಲಕ್ಷ ರೂ.ಗಳಿಗೆ ಚೆಕ್ ಪಡೆದರು. ಆ ಹಣವನ್ನು ಮತಿನ್ ತೆಗೆದುಕೊಂಡ ಹೋದ.
ಮೂಷಾ, ಹಣವನ್ನು ಇಲ್ಲಿ ಲೆಕ್ಕ ಹಾಕಲಾಗುವುದಿಲ್ಲ, ಮುಂದೆ ನಿರ್ಜನ ಪ್ರದೇಶಕ್ಕೆ ಬನ್ನಿ ಎಂದು ಕಾರಿನಲ್ಲಿ ಹೋದರು. ನಾವು ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೆವು. ಆಗ 3 ಮಂದಿ ಪೊಲೀಸ್ ಸಮವಸ್ತ್ರದ ಮಾರು ವೇಷದಲ್ಲಿ ಬಂದು, ಮೂಷಾ ಕಾರನ್ನು ಅಡ್ಡಗಟ್ಟಿ, ಬಳಿಕ ನಮ್ಮನ್ನು ಪರಿಶೀಲಿಸುವ ನಾಟಕ ಆಡಿ, ಸ್ಟೇಷನ್‌ಗೆ ನಡೆಯಿರಿ ಎಂದು ಮೂಷಾನ ಕಾರನ್ನು ಹತ್ತಿ ಎಲ್ಲರೂ ಪರಾರಿಯಾದರು. ಬಳಿಕ ಮತಿನ್ ಫೋನ್ ಮಾಡಿದಾಗ, ಪೊಲೀಸರಿಗೆ ಈ ವಿಚಾರ ಹೇಳಿದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ತಡವಾಗಿ ದೂರು ನೀಡುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.