Advertisement
ಜಿಲ್ಲಾಧಿಕಾರಿ ಡಾ. ಎಂ. ರವಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈರುಳ್ಳಿ ಸಾಗಾಣಿಕೆ ಮಾಡುವ ಈ ಚಾಲಕ ತಮಿಳುನಾಡಿಗೆ ಈ ವಾರದಲ್ಲಿ ಮೂರು ಬಾರಿ ಹೋಗಿ ಬಂದಿದ್ದ. ಜೂ. 18ರಂದು ಕೆಮ್ಮಿನ ಕಾರಣ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದು, ಅಲ್ಲಿ ಈತನ ಗಂಟಲು ದ್ರವ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂ. 19ರಂದು ಪ್ರಕರಣ ದೃಢಪಟ್ಟಿದೆ ಎಂದು ತಿಳಿಸಿದರು.
Related Articles
Advertisement
ಕಂಟೈನ್‌ಮೆಟ್ ವಲಯದಲ್ಲಿರುವ ಜನರಿಗೆ ಎಲ್ಲ ರೀತಿಯ ಮೂಲಸೌಕರ್ಯಗಳು, ದಿನಬಳಕೆಯ ವಸ್ತುಗಳು, ಔಷಧಿಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತೇವೆ. ಅಂಗಡಿಗಳನ್ನು ಮುಚ್ಚಿಸಲಾಗಿದೆ. ಈ ಪ್ರದೇಶದೊಳಕ್ಕೆ ಸಾರ್ವಜನಿಕರು ಹೋಗುವಂತಿಲ್ಲ. ಅವರು ಈ ವಲಯದಿಂದ ಈಚೆ ಬರುವಂತಿಲ್ಲ. ಕಂಟೈನ್‌ಮೆಂಟ್ ವಲಯದಲ್ಲಿರುವವರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುವುದು. ಮಕ್ಕಳು, 60 ವರ್ಷ ಮೇಲ್ಪಟ್ಟವರಿದ್ದು ಅವರಿಗೆ ಗಂಭೀರ ಕಾಯಿಲೆ ಇರುವವರನ್ನು ಪರಿಶೀಲನೆ ನಡೆಸಲಾಗುವುದು ಎಂದು ಡೀಸಿ ವಿವರಿಸಿದರು.
ಮುಂಬೈ ಸೋಂಕಿತ ಗುಣಮುಖ: ಮುಂಬೈನಿಂದ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿ ಕೋವಿಡ್‌ನಿಂದ ಸಂಪೂರ್ಣ ಗುಣಮುಖನಾಗಿ ಜಕ್ಕಳ್ಳಿಯ ತಮ್ಮ ಬಂಧುವಿನ ಮನೆಗೆ ಹೋಗಿದ್ದಾರೆ. ಆತನ ತಾಯಿ ಮತ್ತು ಸೋದರ ಸಹ ಅಲ್ಲೇ ಇದ್ದಾರೆ. 14 ದಿನಗಳ ಕ್ವಾರಂಟೈನ್ ಮುಗಿಸಿದ ನಂತರ ಮುಂಬೈಗೆ ಕಳುಹಿಸಿಕೊಡಲಾಗುವುದು ಎಂದು ಡಾ. ರವಿ ತಿಳಿಸಿದರು.
ಎಸ್ಪಿ ಆನಂದಕುಮಾರ್ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿ ನಮ್ಮ ಜಿಲ್ಲೆಗೆ ಮುಂಬೈಯಿಂದ ಮಾಹಿತಿ ನೀಡದೇ ಬಂದಿದ್ದು ಅಪರಾಧವಾಗಿದೆ. ಇವರನ್ನು ಸೋದರಮಾವ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಕರೆದುಕೊಂಡು ಬಂದಿದ್ದಾರೆ. ಅನುಮತಿ ಪಡೆಯದೇ ಅನ್ಯ ರಾಜ್ಯದ ವ್ಯಕ್ತಿಗಳನ್ನು ಕರೆದುಕೊಂಡು ಬಂದಿದ್ದರಿಂದ ಹಾಗೂ ವಾಸಸ್ಥಳದ ಬಗ್ಗೆ ತಪ್ಪು ಮಾಹಿತಿ ನೀಡಿದ್ದರಿಂದ, ಜಾಗೇರಿಯ ನಿವಾಸಿಯಾದ ಸೋದರಮಾವನ ವಿರುದ್ಧ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.