ಚಾಮರಾಜನಗರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮಾ. 12ರಂದು ನಡೆದ ಲೋಕ್ ಅದಾಲತ್‌ನಲ್ಲಿ 4912 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವರಿಗೂ ನ್ಯಾಯ ಒದಗಿಸುವ ಪರಿಕಲ್ಪನೆಯಡಿಯಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಶೀಘ್ರವಾಗಿ ಹಾಗೂ ಖರ್ಚುರಹಿತವಾಗಿ ಪ್ರಕರಣವನ್ನು ಇತ್ಯರ್ಥಪಡಿಸುವ ಸಲುವಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು.
ಲೋಕ್ ಅದಾಲತ್‌ನಲ್ಲಿ ಸಿವಿಲ್, ರಾಜಿಯಾಗಬಹುದಾದ ಕ್ರಿಮಿನಲ್ ಹಾಗೂ ಇನ್ನಿತರೆ ಪ್ರಕರಣಗಳಲ್ಲಿ ರಾಜೀ ಸಂಧಾನದ ಮೂಲಕ 4654 ಹಾಗೂ 258 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 4912 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದರು. ಒಟ್ಟು 22701 ಪ್ರಕರಣಗಳ ಪೈಕಿ ರಾಜಿಯಾಗ ಬಹುದಾದ 5000 ಪ್ರಕರಣಗಳ ಇತ್ಯರ್ಥಕ್ಕೆ ಗುರಿ ಹೊಂದಲಾಗಿತ್ತು. ಚಾಮರಾಜನಗರ ತಾಲೂಕು ನ್ಯಾಯಾಲಯದಲ್ಲಿ 1967, ಕೊಳ್ಳೇಗಾಲ 1627, ಗುಂಡ್ಲುಪೇಟೆ 987 ಹಾಗೂ ಯಳಂದೂರು ನ್ಯಾಯಾಲಯದಲ್ಲಿ 331 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ವಿಲೇವಾರಿಯಾದ 4912 ಪ್ರಕರಣಗಳಿಂದ ರಾಜಿಯಾದ ಮೊತ್ತ 6,95,40,948 ರೂ. ಗಳನ್ನು ಪರಿಹಾರ ಹಾಗೂ ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಲೋಕ್ ಅದಾಲತ್ ಯಶಸ್ಸಿಗೆ ಸಹಕಾರ ನೀಡಿದ ಜಿಲ್ಲಾಡಳಿತ, ಪೊಲೀಸ್, ವಿವಿಧ ಇಲಾಖೆಗಳು, ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರು, ವಕೀಲರು, ವಿಮಾ ಕಂಪನಿಗಳು, ಬ್ಯಾಂಕ್ ಪ್ರತಿನಿಧಿಗಳಿಗೆ ಜಿಲ್ಲಾ ನ್ಯಾಯಾಧೀಶರು ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎಂ. ಶ್ರೀಧರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಕಾರ್ಯದರ್ಶಿ ವಿರೂಪಾಕ್ಷ ಇದ್ದರು.