Advertisement

ಚಾಮರಾಜನಗರ 2020 ಹಿನ್ನೋಟ : ಜನರ ತಲ್ಲಣಗೊಳಿಸಿದ 2020

01:51 PM Dec 30, 2020 | Team Udayavani |

ಜಿಲ್ಲೆಯನ್ನು ಕರಾಳಛಾಯೆಯನ್ನಾಗಿಸಿ, ಜನರನ್ನು ತತ್ತರಿಸುವಂತೆ ಮಾಡಿದ್ದ ಕಂಡರಿಯದ 2020 ವರ್ಷ ಅಂತ್ಯಕ್ಕೆ ಒಂದು ದಿನ ಮಾತ್ರ ಬಾಕಿಯಿದೆ. ಸಾರಿಗೆ, ಶಿಕ್ಷಣ ಕ್ಷೇತ್ರ, ಪ್ರವಾಸೋದ್ಯಮ, ಕೈಗಾರಿಕೆ, ವ್ಯಾಪಾರ ವಹಿವಾಟು ಸೇರಿದಂತೆ ಇಡೀ ವ್ಯವಸ್ಥೆಯೇ ಸ್ತಬ್ಧವಾಗಿತ್ತು. ಶಾಲಾ ಕಾಲೇಜುಗಳು, ದೇವಾಲಯಗಳು, ಪ್ರವಾಸಿ ತಾಣಗಳು ಜನರಿಲ್ಲದೇ ಬಣಗುಟ್ಟಿದವು. ಆರ್ಥಿಕ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗಿ ಇದೀಗ ಚೇತರಿಕೆಯ ಹಾದಿ ಕಾಣುತ್ತಿದೆ. ಬಹುತೇಕವಾಗಿ ಕಹಿಯೇ ಆವರಸಿಕೊಂಡು ಈ ವರ್ಷವನ್ನು ಎಂದೆಂದಿಗೂ ಮರೆಯಲಾಗದು.

Advertisement

2020ನೇ ವರ್ಷವಿಡೀ ಪ್ರಪಂಚವನ್ನೇ ಕಾಡಿಸಿ ಕಂಗೆಡಿಸಿದ ಕೋವಿಡ್ ವೈರಸ್‌, ಚಾಮರಾಜನಗರ ಜಿಲ್ಲೆಯನ್ನೂ ಅಷ್ಟೇ ತಲ್ಲಣಗೊಳಿಸಿತು. ವರ್ಷಾಂತ್ಯದವರೆಗೆ ಸುಮಾರು 6741 ಜನರಿಗೆ ಕೋವಿಡ್‌ ಸೋಂಕು ತಗುಲಿದೆ. ಇವರಲ್ಲಿ 6515 ಮಂದಿ ಗುಣಮುಖರಾಗಿದ್ದಾರೆ.
ಈ ಮಹಾಮಾರಿ ಜಿಲ್ಲೆಯಲ್ಲಿ ಇದುವರೆಗೆ ಅಮೂಲ್ಯ 131 ಜೀವಗಳನ್ನು ಬಲಿತೆಗೆದುಕೊಂಡಿದೆ. ಇವರಲ್ಲಿ ನಾಲ್ವರು ಕೋವಿಡ್‌ ಯೋಧರೂ ಇದ್ದಾರೆ.

ರಾಜ್ಯದಲ್ಲಿ ಮೊದಲ ಕೋವಿಡ್‌ ಪ್ರಕರಣ ಮಾರ್ಚ್‌ನಲ್ಲಿ ವರದಿಯಾದರೂ ಜೂನ್‌ 9ರಂದು ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಪ್ರಕರಣ ವರದಿಯಾಯಿತು. ಇಡೀ ರಾಜ್ಯದಲ್ಲಿ ಕೋವಿಡ್‌ ಸೋಂಕು ಮುಕ್ತ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಜೂ. 9 ರವರೆಗೂ ಚಾಮರಾಜನಗರ ಕಾಯ್ದುಕೊಂಡಿತ್ತು!

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಸಿಮ್ಸ್‌) ಕಾರ್ಯನಿರ್ವಹಿಸುತ್ತಿರುವ ಆರ್‌.ಟಿ.ಪಿ.ಸಿ.ಆರ್‌. ಕೋವಿಡ್‌-19 ಸುಸಜ್ಜಿತ ಪ್ರಯೋಗಾಲಯವು ಈವರೆಗೆ 1 ಲಕ್ಷಕ್ಕೂ ಹೆಚ್ಚು ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಯಿತು. ಸಿಮ್ಸ್‌ನಲ್ಲಿ ಮೇ ತಿಂಗಳಲ್ಲಿ ಈ ಪ್ರಯೋಗಾಲಯವನ್ನು ಆರಂಭಿಸಲಾಗಿತ್ತು. ಈ ಸಾಧನೆಗಾಗಿ ಡಿ.29ರಂದು ಜಿಲ್ಲಾಡಳಿತದಿಂದ ಲ್ಯಾಬ್‌ ಸಿಬ್ಬಂದಿಗೆ ಅಭಿನಂದನಾ ಸಮಾರಂಭವನ್ನೂ ನಡೆಸಲಾಯಿತು.

ಈ ಕೋವಿಡ್‌ ಆತಂಕದ ನಡುವೆಯೂ ಈ ವರ್ಷ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮವೊಂದನ್ನು ಜಿಲ್ಲಾಡಳಿತ ರೂಪಿಸಿತು. ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳು ಹಾಗೂ ಅವಕಾಶಗಳನ್ನು ಬಳಸಿಕೊಂಡು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೈಗೊಳ್ಳಲಿರುವ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾದರು.

Advertisement

ಪ್ರತಿ ವರ್ಷ ಬರ ಪೀಡಿತ ತಾಲೂಕುಗಳಲ್ಲಿ ಜಿಲ್ಲೆಯ ಎರಡು ತಾಲೂಕುಗಳು ಇರುತ್ತಿದ್ದವು. ಆದರೆ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಬರಪೀಡಿತ ತಾಲೂಕು ಘೋಷಣೆಯಾಗಲಿಲ್ಲ ಎಂಬುದು ಈ ವರ್ಷದ ವಿಶೇಷ.

ಅಲ್ಲದೇ ಉತ್ತಮ ಮಳೆಯಿಂದಾಗಿ ಜಿಲ್ಲೆಯ ಅರಣ್ಯಗಳಲ್ಲಿ ಈ ವರ್ಷ ಕಾಡ್ಗಿಚ್ಚು ಕಾಣಿಸಿಕೊಳ್ಳದಿರುವುದು ಸಹ ವಿಶೇಷ. ಬೇಸಿಗೆ ಆರಂಭದ ಫೆಬ್ರವರಿ, ಮಾರ್ಚ್‌, ಏಪ್ರಿಲ್‌ನಲ್ಲೇ ಮಳೆ ಆರಂಭವಾಗಿದ್ದು, ವರ್ಷಾಂತ್ಯದ ನವೆಂಬರ್‌ನಲ್ಲೂ ಮಳೆ ಸುರಿದಿದ್ದು ಕಾಡಿನಲ್ಲಿ ಹಸಿರು ಉಳಿಯಲು ಸಹಾಯಕವಾಯಿತು.
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ, ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲಿಲ್ಲ ಎಂಬ

ಆರೋಪ ಕೇಳಿಬಂದವು. ಮಹದೇಶ್ವರ ಬೆಟ್ಟದಲ್ಲಿ 110 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಿದರು.
ಚಾಮರಾಜನಗರ ಸಮೀಪದ ಮಲ್ಲಯ್ಯನಪುರ ಬಳಿ ಒಂದೇ ಪ್ರದೇಶದಲ್ಲಿ 7 ಬಗೆಯ ಖನಿಜಗಳು ಪತ್ತೆಯಾದ ಕಾರಣ, ಅಲ್ಲಿ ಜಿಯಾಲಜಿಕಲ್‌ ಮ್ಯೂಸಿಯಂ ಸ್ಥಾಪಿಸಲು ಉದ್ದೇಶಿಸಲಾಗಿದೆ. ಆಗಸ್ಟ್‌ ತಿಂಗಳಲ್ಲಿ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿದ್ದರು. ನಂತರ ಭೂವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಶೋಧನೆ ನಡೆಸಿದರು.

ಕೋವಿಡ್ ದಿಂದ ಜಿಲ್ಲೆಗಾದ ಹೊಡೆತ : 

ಕೋವಿಡ್ ದಿಂದ ಇಡೀ ದೇಶವೇ ತೀವ್ರ ಹಾನಿ ಅನುಭವಿಸಿದಂತೆ ಜಿಲ್ಲೆಯೂ ಹೊಡೆತ ಅನುಭವಿಸಿತು. ಮುಖ್ಯವಾಗಿ ಕಾರ್ಮಿಕ ವರ್ಗದವರು ಹಿಂದೆಂದೂ ಕಂಡು ಕೇಳರಿಯದ ರೀತಿ ಕಷ್ಟಪಡಬೇಕಾಯಿತು. ಜಿಲ್ಲೆಯಲ್ಲಿ ಕಟ್ಟಡಗಳ ಕೆಲಸವನ್ನೇ ನಂಬಿಕೊಂಡಿರುವ ಗಾರೆ ಕಾರ್ಮಿಕರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಸಾವಿರಾರು ಮಂದಿ ಪ್ರತಿ ನಿತ್ಯ ರೈಲಿನಲ್ಲಿ ಮೈಸೂರಿಗೆ ಗಾರೆ ಕೆಲಸಕ್ಕೆ ಹೋಗುತ್ತಾರೆ.
ಇಂಥವರು ಕೋವಿಡ್‌ ಲಾಕ್‌ಡೌನ್‌ನಿಂದಾಗಿ ತೀವ್ರ ರೀತಿಯ ತೊಂದರೆಗೊಳಾದರು. ಲಾಕ್‌ ಡೌನ್‌ ಸಂಕಷ್ಟದಲ್ಲಿ ಕೆಲಸವೇ ಇಲ್ಲದೇ ಮನೆಯಲ್ಲಿರಬೇಕಾಯಿತು. ಇವರಲ್ಲಿ ಬಹುತೇಕ ಮಂದಿ ಅಂದಂದಿನ ಕೂಲಿಯನ್ನೇ ಬದುಕುವ ಜನರು. ಇಂಥವರಿಗೆ ಉದ್ಯೋಗವಿಲ್ಲದೇ, ಕೈಯಲ್ಲಿ ಕಾಸಿಲ್ಲದೇ ಪಡಿಪಾಟಲು ಅನುಭವಿಸಬೇಕಾಯಿತು.

ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು, ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನೆಡೆಯಾಯಿತು. ಜಿಲ್ಲೆಯ ಭರಚುಕ್ಕಿ ಜಲಪಾತ ಈ ಬಾರಿ ಆಗಸ್ಟ್‌ನಲ್ಲಿ ತುಂಬಿ ಭೋರ್ಗರೆದಿದ್ದರೂ, ಕೋವಿಡ್‌ ಕಾರಣದಿಂದಾಗಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ನಂತರ ನಿರ್ಬಂಧ ತೆರವು ಗೊಳಿಸಲಾಯಿತಾದರೂ ಜನರ ಭೇಟಿ ಹೆಚ್ಚಿರಲಿಲ್ಲ. ಇನ್ನೊಂದೆಡೆ ಬಂಡೀಪುರ, ಹಿಮವದ್‌ಗೋಪಾಸ್ವಾಮಿ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಧಾರ್ಮಿಕ ತಾಣವಾದ ಮಲೆ ಮಹದೇಶ್ವರ ಬೆಟ್ಟಕ್ಕೂ ಜನರು ಎಂದಿನಂತೆ ಭೇಟಿ ನೀಡಲಾಗಲಿಲ್ಲ. ಹೀಗಾಗಿ ಇವುಗಳ ಆದಾಯ ತೀವ್ರ ರೀತಿಯಲ್ಲಿ ಕುಸಿತ ಕಂಡಿತು. ಮಲೆ ಮಹದೇಶ್ವರ ಬೆಟ್ಟದಲ್ಲಿ ಹಿಂದೆಂದೂ ಘಟಿಸದ ರೀತಿಯಲ್ಲಿ ಯುಗಾದಿ ಮತ್ತು ದೀಪಾವಳಿ ಮಹಾ ರಥೋತ್ಸವ ರದ್ದಾಯಿತು.

ಕೋವಿಡ್‌ನಿಂದ ಜಿಲ್ಲೆಗಾದ ಪಾಸಿಟಿವ್‌ : 
ಕೋವಿಡ್‌ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಸ್ಪತ್ರೆಯನ್ನು ನವೀಕರಿಸಲಾಯಿತು. ಕೋವಿಡ್‌ ನೆಪದಲ್ಲಿ ಹಳೆಯ ಕಟ್ಟಡ ನವೀಕೃತವಾಯಿತು. ಕೇವಲ ಖಾಸಗಿ ಆಸ್ಪತ್ರೆಗಳಿಗೆ ಸೀಮಿತವಾಗಿದ್ದ ವೆಂಟಿಲೇಟರ್‌ ಸೌಲಭ್ಯ ಜಿಲ್ಲಾಸ್ಪತ್ರೆಗೂ ಕಾಲಿಟ್ಟಿತು.

1.79 ಕೋಟಿ ರೂ. ವೆಚ್ಚದಲ್ಲಿ ಅತ್ಯುನ್ನತ ಗುಣಮಟ್ಟದ ಕೋವಿಡ್‌ ಲ್ಯಾಬೊರೇಟರಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಸಿಮ್ಸ್‌ ನಲ್ಲಿ ನಿರ್ಮಿಸಲಾಯಿತು. ಇದು ಕೋವಿಡ್‌ ನಂತರದ ದಿನಗಳಲ್ಲಿಯೂ ಇನ್ನಿತರ ಅವಶ್ಯಕತೆಗಳಿಗೆ ಅತ್ಯುನ್ನತ ಪ್ರಯೋಗಾಲಯವಾಗಿ ಮುಂದುವರೆಯಲಿದೆ.

ಜಿಲ್ಲಾಸ್ಪತ್ರೆಯಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೊರರೋಗಿಗಳ ವಿಭಾಗವನ್ನು, 8 ಲಕ್ಷ ರೂ. ವೆಚ್ಚದಲ್ಲಿ ತುರ್ತುಚಿಕಿತ್ಸಾ ಘಟಕವನ್ನು ನವೀಕರಿಸಲಾಯಿತು. ರೋಗಿಗಳ ದಾಖಲೆಯನ್ನು ಸಮರ್ಪಕವಾಗಿ ಮಾಡಲು ಇ-ಆಸ್ಪತ್ರೆಯನ್ನು ಜಾರಿಗೊಳಿಸಲಾಯಿತು.

ಪ್ರಮುಖ ವಿವಾದ :

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸಿ ನಡೆಸಿರುವ ನಾಲ್ಕು ಸಭೆಗಳಲ್ಲಿ ಮೂರು ಸಭೆಗಳಿಗೆ ನಮ್ಮನ್ನು ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್‌ನ ಇಬ್ಬರು ಶಾಸಕರು ಹಾಗೂ ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಆಕ್ಷೇಪಿಸಿ ವಾಗ್ವಾದ ನಡೆಸಿದ ಘಟನೆ ವಿವಾದ ಸೃಷ್ಟಿಸಿತ್ತು.

ಜುಲೈ 15 ರಂದು ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ ಅವರು ಜಿಲ್ಲೆಗೆ ಆಗಮಿಸಿ, ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳೊಡನೆ ವಿವಿಧ ಸಭೆಗಳನ್ನು ನಡೆಸಿದರು. ಕೊನೆಯ ಸಭೆ ಆರಂಭವಾದಾಗ ಕಾಂಗ್ರೆಸ್‌ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್‌. ನರೇಂದ್ರ, ಜಿ.ಪಂ. ಅಧ್ಯಕ್ಷೆ ಅಶ್ವಿ‌ನಿ, ಉಪಾಧ್ಯಕ್ಷೆ ಶಶಿಕಲಾ ಮತ್ತು ಜಿ.ಪಂ.ನ ಕೆಲವು ಸದಸ್ಯರು ಕೆಡಿಪಿ ಸಭಾಂಗಣಕ್ಕೆ ಧಾವಿಸಿ ಬಂದು, ಒಂದು ಸಭೆಗೆ ಮಾತ್ರ ಆಹ್ವಾನಿಸಿದ್ದೀರಿ. ಇನ್ನುಳಿದ ಮೂರು ಅಧಿಕೃತ ಸಭೆಗಳಿಗೆ ನಮ್ಮನ್ನು ಆಹ್ವಾನಿಸಿಲ್ಲ. ಈ ಥರ ಮಾಡುವುದು ಸರಿಯಲ್ಲ. ಶಾಸಕರ ಅಗತ್ಯವಿಲ್ಲ ಎಂದು ಹೇಳಿ ಬಿಡಿ. ನಾವು ಬರುವುದೇ ಇಲ್ಲ ಎಂದು ಆಕ್ಷೇಪಿಸಿದ್ದರು.

ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌, ನಾನು 35 ಸಲ ಚಾಮರಾಜನಗರಕ್ಕೆ ಬಂದಿದ್ದೇನೆ. ಪ್ರತಿ ಬಾರಿ ಕೊಳ್ಳೇಗಾಲದಿಂದ ಶಾಸಕ ನರೇಂದ್ರ ಅವರ ಜೊತೆಯೇ ಬರುತ್ತಿದ್ದೆ. ಈ ಬಾರಿ ಈ ರೀತಿ ಆಗಿರುವುದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ಇದು ಪ್ರಮುಖವಾದ ಸಭೆ. ನೀವೆಲ್ಲ ಭಾಗವಹಿಸಿ ಎಂದು ಮನವಿ ಮಾಡಿದ್ದರು.

ಮಳೆ ಬೆಳೆ, ಕೆರೆ ಕಟ್ಟೆ ಭರ್ತಿ : 
ಈ ಬಾರಿ ಜಿಲ್ಲೆಗೆ ಉತ್ತಮ ಮಳೆ ಆಯಿತು. ಆಗಸ್ಟ್‌ ತಿಂಗಳಲ್ಲಿ ಜಿಲ್ಲೆಯ ಪ್ರಮುಖ ಜಲಪಾತ ಭರಚುಕ್ಕಿ ತುಂಬಿ ಹರಿಯಿತು. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿತು. ಬಹು ದಿನಗಳ ಬೇಡಿಕೆಯಂತೆ ಜಿಲ್ಲೆಯ ವಡ್ಡಗೆರೆ ಹಾಗೂ ರಾಘವಾಪುರ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಿವಾದಕ್ಕೆ ಸಿಲುಕಿದ್ದ ವಡ್ಡಗೆರೆ ಕೆರೆಗೆ ನೀರು ಹರಿಸಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ ಹಾಗೂ ಶಾಸಕ ನಿರಂಜನಕುಮಾರ್‌ ಅವರು ಆಸಕ್ತಿ ವಹಿಸಿ ವಡ್ಡಗೆರೆ ಕೆರೆಗೆ ನೀರು ತುಂಬಿಸಿದರು. ಹೀಗಾಗಿ ಆ ಭಾಗದ ರೈತರು ಸಂಭ್ರಮಿಸಿದರು.

ಕೈಕೊಟ್ಟ ಹಿಂಗಾರು: ತುಂಬದ ಚಿಕ್ಕಹೊಳೆ, ಸುವರ್ಣಾವತಿ ಪ್ರತಿ ಬಾರಿ ಹಿಂಗಾರು ಮಳೆಗೆ ಭರ್ತಿಯಾಗುತ್ತಿದ್ದ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳು ಈ ಬಾರಿ ಭರ್ತಿಯಾಗಲಿಲ್ಲ. ಕಾರಣ ಈ ಬಾರಿ ಹಿಂಗಾರು ಮಳೆ ಕೈಕೊಟ್ಟಿದ್ದು.

ಜಿಲ್ಲೆಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ : 
ಜಿಲ್ಲೆಯಲ್ಲಿ ಈ ಮುಂಚೆ ಕಾಂಗ್ರೆಸ್‌ ಪಕ್ಷ ಎಲ್ಲ ಹಂತಗಳಲ್ಲೂ ಅಧಿಕಾರದಲ್ಲಿತ್ತು. ನಗರ ಸ್ಥಳೀಯ ಸಂಸ್ಥೆಗಳು ಸಹ ಕಾಂಗ್ರೆಸ್‌ ವಶದಲ್ಲಿದ್ದವು. ಆದರೆ ಈ ವರ್ಷ ನಡೆದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ, ಬಿಜೆಪಿ ಮೇಲುಗೈ ಸಾಧಿಸಿದ್ದು ಈ ವರ್ಷದ ಜಿಲ್ಲೆಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ.

ಚಾಮರಾಜನಗರ ನಗರಸಭೆಯಲ್ಲಿ ಕಳೆದ ಅವಧಿಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಈ ಬಾರಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಆಶಾ ನಟರಾಜು, ಉಪಾಧ್ಯಕ್ಷರಾಗಿ ಬಿ. ಸುಧಾ ಆಯ್ಕೆಯಾದರು.

ಕೊಳ್ಳೇಗಾಲ ನಗರಸಭೆಯಲ್ಲಿ ಬಿಜೆಪಿ -ಬಿಎಸ್‌ಪಿ ಮೈತ್ರಿ ಅಧಿಕಾರ ಹಿಡಿಯಿತು. ಅಧ್ಯಕ್ಷರಾಗಿ ಬಿಎಸ್‌ಪಿಯ ಗಂಗಮ್ಮ, ಉಪಾಧ್ಯಕ್ಷರಾಗಿ ಬಿಜೆಪಿಯ ಕವಿತಾ ಅಧಿಕಾರ ಹಿಡಿದರು. ಇಲ್ಲಿ ಬಿಎಸ್‌ಪಿ ಪಕ್ಷ ಹೆಸರಿಗೆ ಮಾತ್ರ. ಶಾಸಕ ಮಹೇಶ್‌ ಬಿಎಸ್‌ಪಿಯಿಂದ ಉಚ್ಛಾಟಿತರಾಗಿದ್ದು, ಪಕ್ಷೇತರರಾಗಿ ಉಳಿದಿದ್ದಾರೆ. ಬಿಎಸ್‌ಪಿ ಹೆಸರಿನಿಂದ ಗೆದ್ದಿರುವ ನಗರಸಭಾ ಸದಸ್ಯರು ಶಾಸಕರ ಬೆಂಬಲಿಗರಾಗಿದ್ದಾರೆ.

ಗುಂಡ್ಲುಪೇಟೆ ಪುರಸಭೆಯಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರ ವಹಿಸಿಕೊಂಡಿತು. ಅಧ್ಯಕ್ಷರಾಗಿ ಬಿ. ಗಿರೀಶ್‌ ಹಾಗೂ ಉಪಾಧ್ಯಕ್ಷರಾಗಿ ಅಶ್ವಿ‌ನಿ ಅವಿರೋಧ ಆಯ್ಕೆಯಾದರು. ಈ ಹಿಂದೆ ಗುಂಡ್ಲುಪೇಟೆ ಪುರಸಭೆ ಪುರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು.
ಹನೂರು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಬಿಜೆಪಿ ಮೈತ್ರಿ ಇರುವುದು ವಿಶೇಷ! ಅಧ್ಯಕ್ಷರಾಗಿ ಬಿಜೆಪಿಯ ಚಂದ್ರಮ್ಮ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಹರೀಶ್‌ಕುಮಾರ್‌ ಚುನಾಯಿತರಾಗಿದ್ದಾರೆ.

ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಮಾತ್ರ ಕಾಂಗ್ರೆಸ್‌ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಅಧ್ಯಕ್ಷರಾಗಿ ಶಾಂತಮ್ಮ, ಉಪಾಧ್ಯಕ್ಷರಾಗಿ ಲಕ್ಷ್ಮಿ ಅವಿರೋಧ ಆಯ್ಕೆಯಾದರು.

ಗಮನ ಸೆಳೆದ ಹಾಗೂ ಫ‌ಲಶ್ರುತಿಗೆ ಕಾರಣವಾದ 10 ಉದಯವಾಣಿ ಸುದ್ದಿಗಳು :

  • ನವೆಂಬರ್‌ 26ರಂದು ಉದಯವಾಣಿಯಲ್ಲಿ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯೇ ಇಲ್ಲ ಎಂಬ ವರದಿ ಪ್ರಕಟ. ಅಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ಆ ವರದಿ ಗಮನಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಸ್ತುತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವುದಾಗಿ ಪ್ರಕಟಿಸಿದರು.
  • ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಶೀಘ್ರವೇ ಬಿಜೆಪಿ ಸೇರುತ್ತಾರೆಂಬ ಅಪರೂಪದ ರಾಜಕೀಯ ಬೆಳವಣಿಗೆಯ ಸುದ್ದಿ ಮೊದಲು ಪ್ರಕಟವಾಗಿದ್ದು ಉದಯವಾಣಿಯಲ್ಲಿ. ಡಿಸೆಂಬರ್‌ 3 ರ ಸಂಚಿಕೆಯಲ್ಲಿ ಈ ಸುದ್ದಿ ಪ್ರಕಟಗೊಂಡಿತು. ಸುದ್ದಿ ಪ್ರಕಟವಾದ ಬಳಿಕ ಸಂಕ್ರಾಂತಿ ವೇಳೆಗೆ ಶುಭ ಸುದ್ದಿ ನೀಡುತ್ತೇನೆ ಎಂದು ಶಾಸಕ ಎನ್‌. ಮಹೇಶ್‌ ತಿಳಿಸಿದರು.
  • ಅಕ್ಟೋಬರ್‌ 9 ರಂದು ಮಹದೇಶ್ವರ ಬೆಟ್ಟದ ಅನ್ನ ದಾಸೋಹ ಮತ್ತು ಲಾಡು ತಯಾರಿಕೆಗೆ ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಎಫ್ಎಸ್‌ಎಸ್‌ಎಐ ಲೈಸೆನ್ಸ್‌ ದೊರೆತಿರುವ ಎಕ್ಸ್‌ಕ್ಲುಸಿವ್‌ ಸುದ್ದಿ ಮೊದಲು ಉದಯವಾಣಿಯಲ್ಲಿ ಪ್ರಕಟವಾಯಿತು.
  • ಫೆಬ್ರವರಿ 6ರಂದು ಹನೂರು ತಾಲೂಕಿನ ಕಾಡಂಚಿನ ಗ್ರಾಮ ಪಚ್ಚೆ ದೊಡ್ಡಿಯ ವಿದ್ಯಾರ್ಥಿಗಳು ಐದಾರು ಕಿ.ಮೀ. ನಡೆದು ಶಾಲೆಗೆ ಹೋಗಬೇಕೆಂಬ ಸುದ್ದಿ ಪ್ರಕಟ. ಇದನ್ನು ಗಮನಿಸಿದ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರು ಫೆ. 10ರಂದು ಗ್ರಾಮದಲ್ಲಿ ವಾಸ್ತವ್ಯ ಹೂಡಿದರು. ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಿಂದ ವಾಹನ ವ್ಯವಸ್ಥೆ ಕಲ್ಪಿಸಲಾಯಿತು.
  • ಜೂನ್‌ 11ರಂದು, ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳಿದ್ದರೂ ಹನೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಥಳಾಂತರ ಸುದ್ದಿ ಪ್ರಕಟವಾಯಿತು. ಈ ವರದಿ ಗಮನಿಸಿ ಸ್ಥಳಾಂತರ ಮಾಡದಂತೆ ಒತ್ತಾಯ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜುಲೈ 21ರಂದು ಸ್ಥಳಾಂತರ ಆದೇಶ ರದ್ದು ಮಾಡಿತು.
  • ನವೆಂಬರ್‌ 3 ರಂದು ಬಿಸಿಯೂಟ ಪಡಿತರ ವಿತರಣೆಗೆ ಸರ್ಕಾರ ತಡೆ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಯಿತು.  ಉದಯವಾಣಿ ಮಾಡಿದ ಈ ಸರಣಿ ಸುದ್ದಿಯಿಂದಾಗಿ ರಾಜ್ಯ ಸರ್ಕಾರ ತಡೆ ನೀಡಿದ್ದ, ಬಿಸಿಯೂಟ ಪಡಿತರ ವಿತರಣೆ ಕಾರ್ಯಕ್ರಮವನ್ನು ಮತ್ತೆ  ಆರಂಭಿಸಿತು.  ಇದರಿಂದ ಜಿಲ್ಲೆಯ 81, 474 ವಿದ್ಯಾರ್ಥಿಗಳಿಗೆ  ಬಿಸಿಯೂಟದ ಪಡಿತರ ಮತ್ತೆ ದೊರಕುವಂತಾಯಿತು.
  • ರಾಜ್ಯದಲ್ಲೇ ಚಿಕ್ಕ ತಾಲೂಕಾದರೂ ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಷಡಕ್ಷರ ದೇವ, ಮುಪ್ಪಿನ ಷಡಕ್ಷರಿ, ಸಂಚಿಯ ಹೊನ್ನಮ್ಮ, ಅಗರಂ ರಂಗಯ್ಯ, ನಾಟಕಕಾರ ಸಂಸ, ಪತ್ರಕರ್ತ ವೈಯೆನ್ಕೆ ಅವರನ್ನು ನೀಡಿದ್ದು ಯಳಂದೂರು. ಆದರೆ ಈ ದಿಗ್ಗಜರನ್ನು ಸ್ಮರಿಸುವ ಯಾವುದೇ ಸ್ಮಾರಕ ವಿಲ್ಲ ಎಂಬ ವರದಿ ನವೆಂಬರ್‌ 1 ರಾಜ್ಯೋತ್ಸವ ದಿನದಂದು ಪ್ರಕಟವಾಗಿ ಗಮನ ಸೆಳೆಯಿತು.
  • ಬಿಳಿಗಿರಿರಂಗನಬೆಟ್ಟದ ಕಾಡಿನೊಳಗೆ ಹಳ್ಳವೊಂದರಲ್ಲಿ ಕಾರಿನ ಚಕ್ರ ಸಿಲುಕಿ, ರಾತ್ರಿ ಸುಮಾರು 6 ಗಂಟೆ ಕಾಲ ವನ್ಯಜೀವಿಗಳ ಭಯದಿಂದ ಕಾರಿನಲ್ಲೇ ಕಳೆದ ಬೆಂಗಳೂರಿನ ಉದ್ಯಮಿಯ ಕುಟುಂಬವನ್ನು ಇನ್ಸ್‌ಪೆಕ್ಟರ್‌ ಮಹದೇವಶೆಟ್ಟಿ ರಕ್ಷಿಸಿದ ವರದಿ ಸೆ. 23ರಂದು ಮೊದಲು ಪ್ರಕಟವಾಗಿ ಗಮನಸೆಳೆಯಿತು.
  • ಕೊಳ್ಳೇಗಾಲ ತಾಲೂಕಿನ ಕಾಮಗೆರೆಯ ಹೋಲಿಕ್ರಾಸ್‌ ನರ್ಸಿಂಗ್‌ ಸ್ಕೂಲಿನ 15 ವಿದ್ಯಾರ್ಥಿನಿಯರಿಗೆ ಸಾಮೂಹಿಕವಾಗಿ ಕೋವಿಡ್‌ ತಗುಲಿದ ಸುದ್ದಿ ನವೆಂಬರ್‌ 24ರಂದು ಎಕ್ಸ್‌ಕ್ಲುಸಿವ್‌ ಆಗಿ ಉದಯವಾಣಿಯಲ್ಲಿ ಪ್ರಕಟವಾಯಿತು.
  • ಮೈಸೂರು ಜಿಲ್ಲೆಯ ತಲಕಾಡಿನಲ್ಲಿ ಪಂಚಲಿಂಗ ದರ್ಶನ ನಡೆಯುವ ಸಮಯಗಳಲ್ಲೇ ಚಾಮರಾಜನಗರ ಜಿಲ್ಲೆಯ ಯಳಂದೂರಲ್ಲೂ ಉಂಟು ಪಂಚಲಿಂಗ ದರ್ಶನ! ಎಂಬ ಅಪರೂಪದ ಮಾಹಿತಿಯನ್ನು ನೀಡುವ ಎಕ್ಸ್‌ಕ್ಲೂಸಿವ್‌ ಸುದ್ದಿ ಡಿಸೆಂಬರ್‌ 13 ರ ಸಂಚಿಕೆಯಲ್ಲಿ ಪ್ರಕಟವಾಯಿತು.

ಗಣ್ಯರ ನಿಧನ : 

ಮಾಜಿ ಶಾಸಕ ಸಿ. ಗುರುಸ್ವಾಮಿ ಕೋವಿಡ್‌ನಿಂದ ನಿಧನ : 

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿಜೆಪಿ ಮುಖಂಡ ಸಿ. ಗುರುಸ್ವಾಮಿ ಅವರು ಕೋವಿಡ್‌ ಸೋಂಕಿನಿಂದ ಆಗಸ್ಟ್‌ 19ರಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.

ವೃತ್ತಿಯಲ್ಲಿ ವಕೀಲರಾಗಿದ್ದ ಸಿ. ಗುರುಸ್ವಾಮಿಯವರು ಜನತಾ ಪಕ್ಷ, ಜನತಾದಳದಿಂದ ರಾಜಕೀಯ ಜೀವನ ಆರಂಭಿಸಿದ್ದರು. ಅವಿಭಜಿತ ಮೈಸೂರು ಜಿಲ್ಲೆಯ ಜಿಲ್ಲಾ ಪರಿಷತ್‌ ಸದಸ್ಯರಾಗಿದ್ದರು. 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಾಮರಾಜನಗರ ಕ್ಷೇತ್ರದಿಂದ ಗೆದ್ದು ಬಂದರು. ಎರಡು ಅವಧಿಗೆ ಗೆದ್ದು ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಅವರನ್ನು ಗುರುಸ್ವಾಮಿಯವರು ಸೋಲಿಸಿದ್ದು ಆಗ ದಾಖಲೆಯಾಗಿತ್ತು. ಕ್ಷೇತ್ರದ ಮೊದಲ ಹಾಗೂ ಏಕೈಕ ಬಿಜೆಪಿ ಶಾಸಕರೆಂಬ ಹೆಗ್ಗಳಿಕೆಯೂ ಅವರದೇ ಆಗಿತ್ತು. ಜಿ.ಪಂ. ಮಾಜಿ ಅಧ್ಯಕ್ಷೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್‌ ಗುರುಸ್ವಾಮಿಯವರ ಪುತ್ರಿ.

ಕೊಳ್ಳೇಗಾಲ ಪುರಸಭೆ ಮಾಜಿ ಉಪಾಧ್ಯಕ್ಷ ಡಿ. ಸಿದ್ದರಾಜು : 

ಕೊಳ್ಳೇಗಾಲ ಪಟ್ಟಣದ ಪುರಸಭೆ ಮಾಜಿ ಉಪಾಧ್ಯಕ್ಷ, ದಲಿತ ಮುಖಂಡ ಡಿ. ಸಿದ್ದರಾಜು (71) ಕೋವಿಡ್‌ 19 ಸೋಂಕಿನಿಂದ ಆಗಸ್ಟ್‌ 5ರಂದು ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯಲ್ಲಿ ನಿಧನರಾದರು.

ಸಿದ್ಧರಾಜು ಅವರು ಜು.29ರಂದು ಕೋವಿಡ್‌ ಸೋಂಕು ದೃಢಪಟ್ಟು ನಗರದ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಸಿದ್ದರಾಜು ಉದಯವಾಣಿ ಪತ್ರಿಕೆಯ ಕೊಳ್ಳೇಗಾಲ ತಾಲೂಕು ವರದಿಗಾರ ಡಿ. ನಟರಾಜು ಅವರ ಸಹೋದರ. ಅವರು ಸಂಸದ ಶ್ರೀನಿವಾಸಪ್ರಸಾದ್‌ ಅವರ ಒಡನಾಡಿಯಾಗಿದ್ದರು.

ಹನೂರು ಪಟ್ಟಣ ಪಂಚಾಯಿತಿ ಸದಸ್ಯ ನಾಗರಾಜು : 

ಕೋವಿಡ್‌ನಿಂದಾಗಿ ಹನೂರು ಪಟ್ಟಣ ಪಂಚಾಯಿತಿ 2ನೇ ವಾರ್ಡಿನ ಸದಸ್ಯ ನಾಗರಾಜು (55) ಸೆಪ್ಟೆಂಬರ್‌ 21 ರಂದು ಮೃತಪಟ್ಟರು. ಇವರು ಬಿಜೆಪಿ ಪಕ್ಷದಿಂದ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದರಿಂದ ಆ ಸ್ಥಾನದ ಆಕಾಂಕ್ಷಿಯಾಗಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಯುವ ಮುಂಚೆಯೇ ಮೃತಪಟ್ಟರು.

ಕೊಳ್ಳೇಗಾಲ ತಾ.ಪಂ. ಸದಸ್ಯ ರಾಜು : 

ಕೊಳ್ಳೇಗಾಲ ತಾಲೂಕಿನ ಕಾಮ ಗೆರೆ ಗ್ರಾಮದ ನಿವಾಸಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಾಜು (35) ಕೋವಿಡ್‌ ಸೋಂಕಿನಿಂದ ಡಿಸೆಂಬರ್‌ 18 ರಂದು ಮೃತಪಟ್ಟರು.

ಕಾಂಗ್ರೆಸ್‌ ಪಕ್ಷದ ಮುಖಂಡರಾಗಿದ್ದ ರಾಜು ಅವರು 2016 ರಲ್ಲಿ ಕೊಳ್ಳೇಗಾಲ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದರು. ಪ್ರಸ್ತುತ ಸದಸ್ಯರಾಗಿ ಮುಂದುವರೆದಿದ್ದರು. ಡಿ. 16ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫ‌ಲಕಾರಿಯಾಗದೇ ಡಿ. 18ರಂದು ಮೃತಪಟ್ಟರು.

ಟಾಪ್‌ 10 ಸುದ್ದಿ : 

1. ಕರ್ನಾಟಕದ ಕೋವಿಡ್‌ ಮುಕ್ತ ಏಕೈಕ ಜಿಲ್ಲೆ! : 
ದಕ್ಷಿಣ ಭಾರತದಲ್ಲೇ ಕೋವಿಡ್‌ ಮುಕ್ತ ಎರಡು ಜಿಲ್ಲೆಗಳ ಪೈಕಿ ಒಂದು ಹಾಗೂ ರಾಜ್ಯದಲ್ಲೇ ಏಕೈಕ ಕೋವಿಡ್‌ ಮುಕ್ತ ಜಿಲ್ಲೆ ಎಂಬ ಪ್ರಶಂಸೆಗೆ ಚಾಮರಾಜನಗರ ಪಾತ್ರವಾಯಿತು. ಮಾರ್ಚ್‌ ತಿಂಗಳಲ್ಲೇ ರಾಜ್ಯಕ್ಕೆ ಕೋವಿಡ್‌ ಕಾಲಿಟ್ಟರೂ, 100 ದಿನಗಳ ಕಾಲ ಕೋವಿಡ್‌ ಮುಕ್ತ ಜಿಲ್ಲೆಯಾಗಿ ಉಳಿದ ಹೆಗ್ಗಳಿಕೆ ಜಿಲ್ಲೆಯದಾಯಿತು. ಜೂ.9ರವರೆಗೂ ದಕ್ಷಿಣ ಭಾರತದಲ್ಲಿ ಕೋವಿಡ್‌ ಮುಕ್ತ ಜಿಲ್ಲೆಗಳು ಎಂಬ ಹೆಸರನ್ನು ಕರ್ನಾಟಕದ ಚಾಮರಾಜನಗರ ಹಾಗೂ ತೆಲಂಗಾಣದ ವಾರಂಗಲ್‌ ಗ್ರಾಮಾಂತರ ಜಿಲ್ಲೆ ಪಡೆದುಕೊಂಡಿದ್ದವು.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಅವರಿಗೆ ದೂರವಾಣಿ ಕರೆ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದರು.

2. ದೇಗುಲಗಳಲ್ಲಿ ಕನ್ನಡದಲ್ಲಿ ಮಂತ್ರಘೋಷ ಡೀಸಿ ಸುತ್ತೋಲೆ! : 
ಜಿಲ್ಲೆಯ ಮುಜರಾಯಿ ದೇವಾಲಯಗಳಲ್ಲಿ ಕನ್ನಡದಲ್ಲೇ ಮಂತ್ರಗಳನ್ನು ಉತ್ಛರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಆದೇಶ ಹೊರಡಿಸಿದ್ದು ಈ ವರ್ಷ ಗಮನ ಸೆಳೆದ ಸುದ್ದಿಗಳಲ್ಲೊಂದು. ಈ ಬಗ್ಗೆ ಅವರು ಹೊರಡಿಸಿದ ಸುತ್ತೋಲೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೂ ಕಾರಣವಾಯಿತು. ಮಂತ್ರಗಳು ಸಂಸ್ಕೃತದಲ್ಲಿದ್ದರೆ ಪೂರಕ ಎಂದು ಒಂದು ವರ್ಗ ಹಾಗೂ ಕನ್ನಡದಲ್ಲಿದ್ದರೆ ಭಕ್ತನಾದವನಿಗೆ ಅರ್ಥವಾಗುತ್ತದೆ ಎಂದು ಇನ್ನೊಂದು ವರ್ಗ ವಾದಿಸಿತು. ನವೆಂಬರ್‌ 30ರಂದು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್‌ ಅವರನ್ನು ಆಹ್ವಾನಿಸಿ ಜಿಲ್ಲಾಡಳಿತ ಭವನದಲ್ಲಿ ಮುಜರಾಯಿ ಅರ್ಚಕರಿಗೆ ಕಾರ್ಯಾಗಾರವನ್ನೂ ನಡೆಸಲಾಯಿತು.

3. ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ರಾಯಭಾರಿ : 
ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳು ಹಾಗೂ ಅವಕಾಶಗಳನ್ನು ಬಳಸಿಕೊಂಡು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೈಗೊಳ್ಳಲಿರುವ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಖ್ಯಾತ ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ಜಿಲ್ಲಾ ರಾಯಭಾರಿಯನ್ನಾಗಿ ಮಾಡಿದ್ದು ಈ ವರ್ಷದ ಇನ್ನೊಂದು ವಿಶೇಷ. ಜಿಲ್ಲೆಯ ರಾಯಭಾರಿಯಾಗಿ ಮೂಲತ: ಚಾಮರಾಜನಗರ ಜಿಲ್ಲೆಯವರೇ ಆದ ನಟ ಪುನೀತ್‌ ರಾಜ್‌ಕುಮಾರ್‌ ಮುಂದೆ ಬಂದದ್ದು ಗಮನ ಸೆಳೆಯಿತು.

ಮಾರ್ಚ್‌ 7ರಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಅವರ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ‌ ಎಸ್‌. ಸುರೇಶ್‌ಕುಮಾರ್‌ ಹಾಗೂ ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ ಪುನೀತ್‌ ರಾಜ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಲು ಸಮ್ಮತಿಸಿದ್ದಕ್ಕೆ ಅಭಿನಂದಿಸಿದರು. ನವೆಂಬರ್‌ 13ರಂದು ಜಿಲ್ಲೆಯ ಪ್ರವಾಸಿ ತಾಣಗಳ ವೈಶಿಷ್ಟé ಸಾರುವ ವಿಡಿಯೋ ಬಿಡುಗಡೆಯಾಯಿತು. ಅದರಲ್ಲಿ ಪುನೀತ್‌ ಕಾಣಸಿಕೊಂಡರು.

4. ನಾಲ್ವರು ಕೋವಿಡ್ ಯೋಧರ ಸಾವು : 
ಕೋವಿಡ್‌ನಿಂದಾಗಿ ಜಿಲ್ಲೆಯ ಮೂವರು ಪೊಲೀಸರು ಹಾಗೂ ನಗರಸಭೆಯ ಇಂಜಿನಿಯರ್‌ ಮೃತಪಟ್ಟರು. ಸೆ. 30ರಂದು ಎಎಸ್‌ಐ ಪರಮೇಶ್ವರಪ್ಪ, ಆ. 30ರಂದು ಪೇದೆ ಕೆ.ಎನ್‌. ಸುರೇಶ್‌ಕುಮಾರ್‌, ಅ.5ರಂದು ಮುಖ್ಯ ಪೇದೆ ರವಿಕುಮಾರ್‌ ಮೃತಪಟ್ಟರು. ಅ.11ರಂದು ಚಾಮರಾಜನಗರ ನಗರಸಭೆ ಕಿರಿಯ ಇಂಜಿನಿಯರ್‌ ಸುಬ್ರಮಣಿ ಮೃತ ಹೊಂದಿದರು.

5. ಮಹದೇಶ್ವರ ಬೆಟ್ಟದಲ್ಲಿ 110 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ : 
ನವೆಂಬರ್‌ 26ರಂದು ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, 110 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದು ಈ ಬಾರಿಯ ಇನ್ನೊಂದು ಪ್ರಮುಖ ಸುದ್ದಿ. ಅಂದು ಮಹದೇಶ್ವರ ಬೆಟ್ಟದಲ್ಲಿ 14 ಕೋಟಿ ರೂ.ಗಳ ಕಾಮಗಾರಿಯನ್ನು ಉದ್ಘಾಟಿಸಿ, 110 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

6. ಸುಳ್ವಾಡಿ ದೇವಾಲಯ ಪುನಾರಂಭ : 
2018ರ ಡಿಸೆಂಬರ್‌ 14ರಂದು ನಡೆದ ವಿಷಪ್ರಸಾದ ದುರಂತದಲ್ಲಿ 17 ಮಂದಿ ಮೃತಪಟ್ಟು 120ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಕಾರಣ, ಹನೂರು ತಾಲೂಕಿನ ಸುಳ್ವಾಡಿಯ ಕಿಚ್‌ಗುತ್‌ ಮಾರಮ್ಮ ದೇವಾಲಯದ ಬಾಗಿಲು ಮುಚ್ಚಲಾಗಿತ್ತು. ಅಲ್ಲದೇ ಖಾಸಗಿ ಆಡಳಿತದಲ್ಲಿದ್ದ ದೇವಾಲಯದ ಆಡಳಿತವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು. 22 ತಿಂಗಳ ಕಾಲ ಸಂಪೂರ್ಣವಾಗಿ ಮುಚ್ಚಿದ್ದ ಕಿಚ್‌ಗುತ್‌ ಮಾರಮ್ಮ ದೇವಸ್ಥಾನವನ್ನು ಅಕ್ಟೋಬರ್‌ 24ರಿಂದ ಭಕ್ತಾದಿಗಳ ದರ್ಶನಕ್ಕೆ ತೆರೆಯಲಾಯಿತು.

7. ಸಾಲೂರು ಮಠಕ್ಕೆ ನೂತನ ಪೀಠಾಧಿಪತಿ : 
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ನೂತನ ಪೀಠಾಧಿಪತಿಯವರನ್ನು ಆಗಸ್ಟ್‌ 8ರಂದು ಪಟ್ಟಾಭಿಷೇಕ ಮಾಡಲಾಯಿತು. ಇದುವರೆಗೆ ಪಟ್ಟದ ಗುರುಸ್ವಾಮಿಯವರು ಮಠಾಧ್ಯಕ್ಷರಾಗಿದ್ದರು. ನೂತನವಾಗಿ ಬಂಡಳ್ಳಿ ಗ್ರಾಮದ ನಾಗೇಂದ್ರ ಎಂಬ ವಟುವನ್ನು ಶಾಂತ ಮಲ್ಲಿಕಾರ್ಜುನಸ್ವಾಮಿ ಎಂದು ನಾಮಕರಣ ಮಾಡಿ ಪಟ್ಟಾಭಿಷೇಕ ನೆರವೇರಿಸಲಾಯಿತು. ಸುತ್ತೂರು ಶ್ರೀ, ಸಿದ್ಧಗಂಗಾ ಶ್ರೀ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

8. ಹನೂರು ನೂತನ ತಾಲೂಕು ಪಂಚಾಯಿತಿ ಅಸ್ತಿತ್ವಕ್ಕೆ : 
ಹನೂರು ನೂತನ ತಾಲೂಕಾಗಿ ಘೋಷಣೆಯಾದ ಬಳಿಕ, ನೂತನ ತಾಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂತು. ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸದಸ್ಯರಾಗಿದ್ದ 17 ಮಂದಿಯನ್ನು ಹನೂರಿಗೆ ವಿಭಜಿಸಿ ನೂತನ ತಾಲೂಕು ಪಂಚಾಯಿತಿಯನ್ನು ರಚಿಸಲಾಯಿತು. ಕಾಂಗ್ರೆಸ್‌ ಪಕ್ಷ ಪ್ರಥಮ ತಾ.ಪಂ.ನ ಅಧಿಕಾರ ಹಿಡಿಯಿತು. ಅಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷದ ಸವಿತಾ, ಉಪಾಧ್ಯಕ್ಷರಾಗಿ ಲೊಕ್ಕನಹಳ್ಳಿಯ ರುಕ್ಮಿಣಿ ಚುನಾಯಿತರಾದರು.

9. ಮಹದೇಶ್ವರ ಬೆಟ್ಟದಲ್ಲಿ ದಾಖಲೆಯ ಚಿನ್ನ ಬೆಳ್ಳಿ ಸಂಗ್ರಹ! : 
ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ದೇವಾಲಯದ ಗೋಲಕದಲ್ಲಿ ಸಾರ್ವಕಾಲಿಕ ದಾಖಲೆಯ 170 ಗ್ರಾಂ. ಚಿನ್ನ, 3.85 ಕೆ.ಜಿ. ಬೆಳ್ಳಿ ಸಂಗ್ರಹವಾಯಿತು. ದೇವಾಲಯದ ಇತಿಹಾಸದಲ್ಲಿ ಒಂದೇ ಬಾರಿಗೆ ಹುಂಡಿಯಲ್ಲಿ ಇಷ್ಟೊಂದು ಬೆಲೆಯ ಚಿನ್ನ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿರಲಿಲ್ಲ. ಇದು 43 ದಿನಗಳ ಅವಧಿಯಲ್ಲಿ ಭಕ್ತಾದಿಗಳಿಂದ ಬಂದ ಕಾಣಿಕೆ. ಕೋವಿಡ್‌ ನಡುವೆಯೂ ಈ ಪ್ರಮಾಣದಲ್ಲಿ ದಾಖಲಾಗಿದ್ದು ವಿಶೇಷ. ಶ್ರೀಕ್ಷೇತ್ರದಲ್ಲಿ ಬೆಳ್ಳಿ ರಥ ನಿರ್ಮಾಣಕ್ಕೆ ಭಕ್ತಾದಿಗಳು ಚಿನ್ನ, ಬೆಳ್ಳಿ, ಹಣ ನೀಡಿ ಸಹಕರಿಸಬೇಕೆಂದು ಶ್ರೀಕ್ಷೇತ್ರದ ಪ್ರಾಧಿಕಾರ ಮನವಿ ಮಾಡಿತ್ತು. ಇದಕ್ಕೆ ಭಕ್ತಾದಿಗಳು ನೀಡಿದ ಸ್ಪಂದನೆ ಇದಕ್ಕೆ ಕಾರಣ.

10. ಜಿಲ್ಲೆಯ ಇಬ್ಬರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ : 
ಜಿಲ್ಲೆಯ ಯಕ್ಷಗಾನ ಕಲಾವಿದ ಬಂಗಾರಾಚಾರ್‌ ಮತ್ತು ಭಾಷಾ ಶಾಸ್ತ್ರಜ್ಞ ಡಾ. ಆರ್‌. ರಾಮಕೃಷ್ಣ ಅವರು ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು. ಕಬ್ಬಹಳ್ಳಿ ಗ್ರಾಮದ ಬಂಗಾರಾಚಾರ್‌ ಅವರು ಮೂಡಲಪಾಯ ಯಕ್ಷಗಾನ ಭಾಗವತರಾಗಿ ಸಲ್ಲಿಸಿದ ಸೇವೆಗೆ ಹಾಗೂ ರಾಮಸಮುದ್ರದ ಡಾ. ರಾಮಕೃಷ್ಣ ಅವರು ಭಾಷಾ ಶಾಸ್ತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿತು.

 

-ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next