Advertisement

ಚಾಮರಾಜನಗರ: ದ್ವಿತೀಯ ಪಿಯುಸಿ ಶೇ. 69.29 ಫಲಿತಾಂಶ

05:28 PM Jul 14, 2020 | Hari Prasad |

ಚಾಮರಾಜನಗರ: ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ. 69.29ರಷ್ಟು ಫಲಿತಾಂಶ ದೊರೆತಿದೆ.

Advertisement

ಈ ಮೂಲಕ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಒಂದಾಗಿರುವ ಚಾಮರಾಜನಗರವು ಒಟ್ಟಾರೆ ಫಲಿತಾಂಶದಲ್ಲಿ ರಾಜ್ಯದಲ್ಲಿ 12 ನೇ ಸ್ಥಾನವನ್ನು ಪಡೆದುಕೊಂಡಿದೆ.

ಜಿಲ್ಲೆಯಲ್ಲಿ 5,686 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 3,940 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಸಲ 12ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿಯೂ ಅದೇ ಸ್ಥಾನವನ್ನು ಕಾಯ್ದುಕೊಂಡಿದೆ.

ಬಾಲಕಿಯರೇ ಮೇಲುಗೈ:
ಈ ಸಲವೂ ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅಲ್ಲದೇ ಬಾಲಕರಿಗಿಂತ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಬರೆದಿದ್ದರೂ ಎಂಬುದೂ ವಿಶೇಷ. ಶೇ. 69.57ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ. 52.84ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ.

3119 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 1648 ಮಂದಿ ಉತ್ತೀರ್ಣರಾಗಿದ್ದಾರೆ. 3674 ಮಂದಿ ಬಾಲಕಿಯರು ಪರೀಕ್ಷೆಗೆ ಕುಳಿತಿದ್ದು, ಇದರಲ್ಲಿ 2556 ಮಂದಿ ತೇರ್ಗಡೆಯಾಗಿದ್ದಾರೆ.

Advertisement

ಪಟ್ಟಣ ಪ್ರದೇಶದ ವಿದ್ಯಾರ್ಥಿಗಳ ಮುನ್ನಡೆ:
ಪಟ್ಟಣ ಪ್ರದೇಶದ 3,876 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 2,764 ಮಂದಿ ತೇರ್ಗಡೆಯಾಗಿದ್ದಾರೆ (ಶೇ. 71.31). ಗ್ರಾಮೀಣ ಪ್ರದೇಶದ 1810 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 1176 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 64.97).

ಜಿಲ್ಲೆಯಲ್ಲಿ ಈ ಬಾರಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ. (ಶೇ. 79.73) ವಿಜ್ಞಾನ ವಿಭಾಗ ಎರಡನೇ ಸ್ಥಾನ ಶೇ. (75.83) ಹಾಗೂ ಕಲಾ ವಿಭಾಗ (ಶೇ.53.71) ಮೂರನೇ ಸ್ಥಾನ ಪಡೆದಿದೆ.

ವಾಣಿಜ್ಯ ವಿಭಾಗದಿಂದ 2,329 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 1857 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಿಂದ 1266 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಇವರಲ್ಲಿ 960 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಿಂದ 2091 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರ ಪೈಕಿ 1123 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಾರಕವಾದ ಲಾಕ್‌ ಡೌನ್: ಇಂಗ್ಲಿಷ್‌ನಲ್ಲಿ ಹೆಚ್ಚು ಫೇಲ್
ಮಾರ್ಚ್ ತಿಂಗಳಲ್ಲಿ ಬಂದ ಲಾಕ್‌ ಡೌನ್ ಕಲಾ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶಕ್ಕೆ ತೊಡಕಾಯಿತೇ? ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಅನುತ್ತೀಣರಾಗಿರುವ ವಿದ್ಯಾರ್ಥಿಗಳ ಶೇಕಡಾವಾರು ನೋಡಿದರೆ ಹೀಗನಿಸದೇ ಇರದು.

ಜಿಲ್ಲೆಯಲ್ಲಿ ಕಳೆದ ವರ್ಷ ಜಿಲ್ಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ. 83.18ರಷ್ಟು, ಕಲಾ ವಿಭಾಗದಲ್ಲಿ ಶೇ. 69.18 ಹಾಗೂ ವಿಜ್ಞಾನ ವಿಭಾಗದಲ್ಲಿ 59.50 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ವಿಜ್ಞಾನ ವಿಭಾಗ ನಿರೀಕ್ಷೆಗೂ ಮೀರಿ ಉತ್ತಮ ಫಲಿತಾಂಶ ದಾಖಲಿಸಿದೆ. ಕಲಾ ವಿಭಾಗ ತೀವ್ರ ಕುಸಿತ ಕಂಡಿದ್ದು, ಕಳೆದ ವರ್ಷ ಶೇ.  69.18 ರಿಂದ 53.71ಕ್ಕೆ ಕುಸಿದಿದೆ. ಇದಕ್ಕೆ ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣರಾಗಿರುವವರ ಸಂಖ್ಯೆ ಹೆಚ್ಚಿರುವುದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next