Advertisement

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

01:18 PM Apr 18, 2024 | Team Udayavani |

ಉದಯವಾಣಿ ಸಮಾಚಾರ
ಯಳಂದೂರು: ಈಗ ಬಿರು ಬಿಸಿಲು ಹೆಚ್ಚಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಕಬ್ಬಿನ ತೊಂಡೆಯನ್ನು ಈ ಭಾಗದ ಹೈನುಗಾರರು ಹೆಚ್ಚು ಅವಲಂಬಿಸಿದ್ದಾರೆ. ಆದರೆ, ಈ ಬಾರಿ ತಾಲೂಕಿನಲ್ಲಿ ಕಬ್ಬಿನ ಬೆಳೆಯೂ ಕಡಿಮೆಯಾಗಿದ್ದು, ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಾಗಿದೆ.

Advertisement

ಈ ಹಿಂದೆ ಕಬ್ಬಿನ ತೊಂಡೆಯನ್ನು ಕಬ್ಬು ಕಟಾವು ಮಾಡುವ ವೇಳೆ ಕಂತೆಗೆ 10 ರೂ.ನಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈಗ ಹೈನುಗಾರರೇ ಕಬ್ಬು ಕಟಾವು ಮಾಡುವ ಸ್ಥಳಕ್ಕೆ ತೆರಳಿ, ತಮ್ಮ ವಾಹನಗಳನ್ನು ಇಲ್ಲಿಗೆ ತಂದು ಕಂತೆಗೆ 50 ರೂ. ಹಣ ನೀಡಿ ಇದನ್ನು ತುಂಬಿಸಿಕೊಂಡು ತಮ್ಮ ಜಾನುವಾರುಗಳಿಗೆ ಮೇವು ತರುವ ಸವಾಲು ಎದುರಾಗಿದೆ.

ಮೇವಿಗೆ ಹೈನುಗಾರರ ಪರದಾಟ: ತಮ್ಮ ಮನೆಗಳಲ್ಲಿ ರಾಸು ಸಾಕಿರುವ ಅನೇಕ ಹೈನುಗಾರರಿಗೆ ಸ್ವಂತ ಜಮೀನು ಇಲ್ಲ. ಇಂತಹವರು ನಿತ್ಯ ಕಾಡಂಚಿನ ಸ್ಥಳಗಳು, ಗೋಮಾಳಗಳಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲು ಹೋಗುತ್ತಿದ್ದರು.ಆದರೆ, ಈಗ ಬಿರು ಬಿಸಿಲಿನಿಂದ ಮೇವು ಒಣಗಿದೆ.

ಜಾನುವಾರುಗಳಿಗೆ ಸಮೃದ್ಧವಾಗಿ ಆಹಾರ ಲಭಿಸುತ್ತಿಲ್ಲ. ಜಮೀನು ಇರುವ ಕೆಲವರು ತಮ್ಮ ಜಮೀನಿನಲ್ಲಿ ರಾಸುಗಳಿಗೆ ಬೇಕಿರುವ ಮೇವನ್ನು ಬೆಳೆದುಕೊಂಡು ಸಾಕಿದರೆ, ಅನೇಕರು ದುಬಾರಿ ಬೆಲೆಗೆ ಮೇವು ಖರೀದಿಸಿ ತಮ್ಮ ರಾಸುಗಳನ್ನು ಸಾಕುವುದು ಅನಿವಾರ್ಯವಾಗಿದೆ.

ತೊಂಡೆ ಪಡೆಯಲು ಪೈಪೋಟಿ: ಕಂತೂರು ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯನ್ನು ವಾರ್ಷಿಕ ನಿರ್ವಹಣೆ ಮಾಡಲು ಮುಚ್ಚಲಾಗಿದೆ. ಹೀಗಾಗಿ, ಜಮೀನಿನಲ್ಲಿರುವ  ಕಬ್ಬನ್ನು ರೈತರು ಕಟಾವು ಮಾಡುತ್ತಿಲ್ಲ. ತಮಿಳುನಾಡಿನ ಕಾರ್ಖಾನೆಯೊಂದು ಇಲ್ಲಿನ ಕೆಲ ರೈತರ ಜಮೀನಿನಲ್ಲಿ ಕಬ್ಬು ಖರೀದಿ ಮಾಡುತ್ತಿದೆ. ಆದರೆ, ಇದರ ಪ್ರಮಾಣ ಕಡಿಮೆಯಾಗಿದ್ದು, ಇದನ್ನೇ ಕಾದು ಕುಳಿತು ರೈತರು ಕಬ್ಬಿನಿಂದ ಬೇರ್ಪಟ್ಟ ತೊಂಡೆಯನ್ನು ಮೇವಿಗಾಗಿ ಪಡೆದುಕೊಳ್ಳಲು ಪೈಪೋಟಿ ನಡೆಸುತ್ತಿ ದ್ದಾರೆ. ಅಲ್ಲದೆ, ಆಲೆಮನೆಗಳಲ್ಲಿ ಬೆಲ್ಲ ತಯಾರಿಸಲು ಕಬ್ಬು ಕಟಾವು ಮಾಡುವ ಸಂದರ್ಭವನ್ನು ಅನುಸರಿಸಿ ಮೇವನ್ನು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕೆರೆಕಟ್ಟೆಗಳಿಗೆ ಕಿಡಿಗೇಡಿಗಳಿಂದ ಬೆಂಕಿ: ತಾಲೂಕಿನಲ್ಲಿ ಪ್ರತಿ ಗ್ರಾಮದಲ್ಲೂ ಒಂದೊಂದು ಕೆರೆ ಇದೆ.ಈ ಕೆರೆಗಳಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಆದರೆ, ಈ ಬಾರಿ ಬಹುತೇಕ ಕೆರೆಗಳು ಬತ್ತಿ ಹೋಗಿವೆ. ಬತ್ತಿ ಹೋಗಿರುವ ಕೆರೆಗಳಲ್ಲಿ ಇರುವ ಗಿಡಗಳಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿ ಇದನ್ನು ನಾಶ ಮಾಡುವುದರಿಂದ ಇಲ್ಲಿದ್ದ ಅಲ್ಪ ಪ್ರಮಾಣದ ಮೇವು ಕೂ ಡ ಸುಟ್ಟು ಕರಕಲಾಗಿದ್ದು, ದನಗಾಹಿಗಳ ನಿದ್ದೆಗೆಡಿಸಿದೆ.

ಪಶು ಇಲಾಖೆ ಮೇವು ಕಲ್ಪಿಸಲಿ: ತಾಲೂಕಿನಲ್ಲಿ 15 ಸಾವಿರಕ್ಕಿಂತಲೂ ಹೆಚ್ಚಿನ ಜಾನುವಾರುಗಳಿವೆ. ಪ್ರಸ್ತುತ ಹಸಿರು ಮೇವಿನ ಕೊರತೆ ಹೆಚ್ಚಾಗಿದೆ. ಈಗಾಗಲೇ ಮೇವಿನ ಬೀಜದ ಪ್ಯಾಕೇಟ್‌ಗಳನ್ನು ಹಲವರಿಗೆ ಪಶು ಇಲಾಖೆಯಿಂದ ವಿತರಿಸಲಾಗಿದೆ. ಆದರೆ, ಜಮೀನು ಇಲ್ಲದ ಹೈನುಗಾರರು ಇದನ್ನು ಬೆಳೆಯಲು ಸಾಧ್ಯವಾಗಿಲ್ಲ. ಇದರೊಂದಿಗೆ ಪಂಪ್‌ ಸೆಟ್‌ ಇಲ್ಲದ ರೈತರೂ ಇದನ್ನು ಬೆಳೆಯಲು ನೀರಿನ ಅಭಾವದಿಂದ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಹಸಿರು ಮೇವನ್ನು ಹೈನುಗಾರರಿಗೆ ರಿಯಾಯಿತಿ ದರದಲ್ಲಿ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಮಲ್ಲಿಕಾರ್ಜುನ, ಮನು ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.

ನಮ್ಮ ಇಲಾಖೆ ವತಿಯಿಂದ 320ಕ್ಕೂ ಹೆಚ್ಚಿನ ಜನರಿಗೆ ಮೇವಿನ ಬಿತ್ತನೆ ಬೀಜದ ಕಿಟ್‌ ವಿತರಿಸಲಾಗಿದೆ. ಈಗಾಗಲೇ ಇದು ಕಟಾವಿನ ಹಂತಕ್ಕೆ ಬಂದಿದೆ. ನಮ್ಮ ಭಾಗದಲ್ಲಿ ಮೇವಿನ ಕೊರೆತ ಹೆಚ್ಚಾಗಿಲ್ಲ. ಹೈನುಗಾರರು ಆತಂಕಪಡುವ ಅಗತ್ಯವಿಲ್ಲ.
ಡಾ.ಶಿವರಾಜ್‌, ಸಹಾಯಕ ನಿರ್ದೇಶಕರು,
ಪಶು ಇಲಾಖೆ

*ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next