Advertisement

ಚಾಮರಾಜನಗರ ಬಂದ್‌ ಸಂಪೂರ್ಣ ಯಶಸ್ವಿ

09:14 PM Jun 25, 2019 | Lakshmi GovindaRaj |

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಕಟ್ಟೆಯಲ್ಲಿ ನಡೆದ ದಲಿತ ಯುವಕನ ಬೆತ್ತಲೆ ಮೆರವಣಿಗೆ ಹಾಗೂ ಸಂತೆಮರಹಳ್ಳಿ ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಎಸ್‌ಐಟಿಗೆ ವಹಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಚಾಮರಾಜನಗರ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

Advertisement

ಬಿಕೋ ಎಂದ ರಸ್ತೆಗಳು: ಬೆಳಗ್ಗೆಯಿಂದಲೇ ನಗರದ ಅಂಗಡಿ ಮುಂಗಟು ಹೋಟೆಲ್‌ಗ‌ಳು ಮುಚ್ಚಿದ್ದವು. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ನಗರದ ಒಳ ಬರಲಿಲ್ಲ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಅನೇಕ ಶಾಲಾ ಕಾಲೇಜುಗಳು ಮೊದಲೇ ರಜೆ ಘೋಷಿಸಿದ್ದವು. ಕೆಲವು ಶಾಲೆಗಳು ವಿದ್ಯಾರ್ಥಿಗಳು ಬಂದ ಬಳಿಕ ರಜೆ ಘೋಷಿಸಿದವು. ಹೀಗಾಗಿ ಶಾಲೆಗೆ ತೆರಳಿದ್ದ ವಿದ್ಯಾರ್ಥಿಗಳು ಮನೆಗೆ ಹಿಂದಿರುಗಿದರು.

ಮುಚ್ಚಿದ ಪೆಟ್ರೋಲ್‌ ಬಂಕ್‌: ಬ್ಯಾಂಕ್‌ಗಳು ಮುಚ್ಚಿದ್ದವು. ಹಲವಾರು ಸರ್ಕಾರಿ ಕಚೇರಿಗಳು ಬಂದ್‌ ಆಗಿದ್ದವು. ತಹಶೀಲ್ದಾರ್‌ ಕಚೇರಿ ತೆರೆದಿತ್ತಾದರೂ ಬಳಿಕ ಸಂಘಟನೆಗಳ ಮನವಿ ಮೇರೆಗೆ ಮುಚ್ಚಲಾಯಿತು. ಪೆಟ್ರೋಲ್‌ ಬಂಕ್‌ಗಳು ಕಾರ್ಯನಿರ್ವಹಿಸಲಿಲ್ಲ. ಚಿತ್ರಮಂದಿರಗಳು ಎರಡು ಪ್ರದರ್ಶನಗಳನ್ನು ರದ್ದುಗೊಳಿಸಿದ್ದವು.

ಎಸ್‌ಡಿಪಿಐ ಬೆಂಬಲ: ಅನೇಕ ಬಂದ್‌ಗಳು ನಡೆದಾಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗುಂಡ್ಲುಪೇಟೆ ವೃತ್ತ ಪ್ರದೇಶದಲ್ಲಿ ಅಂಗಡಿ, ಹೋಟೆಲ್‌ಗ‌ಳು ತೆರೆದಿರುತ್ತಿದ್ದವು. ಆದರೆ ಮಂಗಳವಾರದ ಬಂದ್‌ಗೆ ಎಸ್‌ಡಿಪಿಐ ಬೆಂಬಲ ನೀಡಿದ್ದರಿಂದ ಈ ಪ್ರದೇಶಗಳಲ್ಲೂ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಊಟಕ್ಕಾಗಿ ಪರದಾಟ: ಬಹಳಷ್ಟು ಮಂದಿ ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಸಾರ್ವಜನಿಕರು ನಗರಕ್ಕೆ ಆಗಮಿಸಿ, ಕಚೇರಿ, ಶಾಲೆ ಮುಚ್ಚಿದ ಬಳಿಕ ತಮ್ಮ ಊರು ಹಾಗೂ ಮನೆಗಳಿಗೆ ತೆರಳಲು ಬಹಳ ಪ್ರಯಾಸ ಪಡಬೇಕಾಯಿತು. ಹೋಟೆಲ್‌ಗ‌ಳು ಬಂದ್‌ ಆಗಿದ್ದರಿಂದ ಹೊರ ಊರಿನಿಂದ ಬಂದವರು ಊಟ ತಿಂಡಿಗಾಗಿ ಪರದಾಡಬೇಕಾಯಿತು.

Advertisement

ಬಂದ್‌ ಹಿನ್ನೆಲೆಯಲ್ಲಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್‌ ಅಧೀಕ್ಷಕ ಆನಂದ್‌ಕುಮಾರ್‌, ಡಿವೈಎಸ್‌ಪಿ ಜಯಕುಮಾರ್‌ ಬಂದೋಬಸ್ತ್ ನ ಉಸ್ತುವಾರಿ ವಹಿಸಿದ್ದರು.

ಟೈಯರ್‌ ಸುಟ್ಟು ಆಕ್ರೋಶ: ಯಾವಾಗಲೂ ಜನಜಂಗುಳಿಯಿಂದ ಕೂಡಿರುವ ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ ಬಿಕೋ ಎನ್ನುತ್ತಿದ್ದವು. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಜನ ಸಂಚಾರ ಕಡಿಮೆಯಾಗಿತ್ತು. ವಾಹನಗಳ ಓಡಾಟ ವಿರಳವಾಗಿತ್ತು. ಬೆಳಗಿನ 7 ಗಂಟೆಯಿಂದಲೇ ದಲಿತ ಸಂಘಟನೆಗಳ ಪ್ರಮುಖರು ರಸ್ತೆಗಳಿದು ಟೈಯರ್‌ ಸುಟ್ಟು ಪ್ರತಿಭಟನೆ ಮಾಡುವ ಜೊತೆಗೆ ಸ್ವಯಂ ಪ್ರೇರಿತ ಬಂದ್‌ಗೆ ಜಿಲ್ಲೆಯ ಜನ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next