Advertisement

ಚಾಮರಾಜನಗರ: ಜು. 20ರಂದು ಅಮ್ ಆದ್ಮಿ ಪಾರ್ಟಿ ಗ್ರಾಮ ಸಂಪರ್ಕ ಅಭಿಯಾನ

08:52 PM Jul 18, 2022 | Team Udayavani |

ಚಾಮರಾಜನಗರ: ಅಮ್ ಆದ್ಮಿ ಪಾರ್ಟಿಯಿಂದ ನಗರದಲ್ಲಿ ಗ್ರಾಮ ಸಂಪರ್ಕ ಅಭಿಯಾನ ಹಾಗೂ ಜಿಲ್ಲಾ ಕಾರ್ಯಕರ್ತರ ಸಮಾವೇಶವನ್ನು ಜು. 20ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಸಂಪರ್ಕ ಅಭಿಯಾನದ ಮೂಲಕ ಎಲ್ಲ ಹಳ್ಳಿಗಳಿಗೂ ಆಪ್ ತಲುಪಬೇಕು ಎಂಬುದು ನಮ್ಮ ಉದ್ದೇಶ. ಪ್ರತಿ ಜಿಲ್ಲೆಯಲ್ಲೂ ಗ್ರಾಮಸಂಪರ್ಕ ಅಭಿಯಾನ ನಡೆಸಲಾಗುತ್ತಿದೆ. ಹಾಗೆಯೇ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11ಕ್ಕೆ ಸಮಾವೇಶ ನಡೆಯಲಿದ್ದು ಜಿಲ್ಲೆ ಯಲ್ಲಿ ಪಕ್ಷ ಸಂಘಟನೆಯ ರೂಪುರೇಷೆ ಕುರಿತು ಚರ್ಚೆ ಹಾಗೂ ಗ್ರಾಮ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡ ಲಾಗುತ್ತದೆ ಎಂದು ತಿಳಿಸಿದರು.

ಕಳೆದ ಫೆಬ್ರವರಿಯಲ್ಲಿ ನಡೆದ ಪಂಜಾಬ್, ಗೋವಾ ಮತ್ತು ಉತ್ತರಾಖಂಡ ರಾಜ್ಯದ ಚುನಾವಣೆಯಲ್ಲಿ ಅಮ್ ಆದ್ಮಿ ಪಾರ್ಟಿ ಅಭೂತಪೂರ್ವ ಸಾಧನೆ ಮಾಡಿದೆ. ದೆಹಲಿ ಮತ್ತು ಪಂಜಾಬ್ ಸರ್ಕಾರದ ಮಾದರಿ ದೇಶದೆಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಇತ್ತೀಚೆಗೆ ದೇಶದಾದ್ಯಂತ ನಡೆದ ಅನೇಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಅತ್ಯಂತ ಉತ್ತಮ ಸಾಧನೆ ಮಾಡಿದ್ದು ಮುಂಬರುವ ದಿನಗಳಲ್ಲಿ ಇಡೀ ದೇಶಾದ್ಯಂತ ಪರ್ಯಾಯ, ಜನಪರ ರಾಜಕಾರಣ ಹಬ್ಬುತ್ತಿರುವ ಮುನ್ಸೂಚನೆ ಇದಾಗಿದೆ ಎಂದರು.

ಕರ್ನಾಟಕದಲ್ಲಿಯೂ ಈ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾತೀತ ಚುನಾವಣೆಯಾಗಿದ್ದು, ಇಲ್ಲಿ ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ಒಲವಿರುವಂತಹ ಅನೇಕ ಪ್ರಾಮಾಣಿಕ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಂತಹ ಅಭ್ಯರ್ಥಿಗಳು ಆಮ್ ಆದ್ಮಿ ಪಕ್ಷದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

ಕೇಜ್ರಿವಾಲ್ ಅವರ ನಿರ್ದೇಶನದ ಮೇರೆಗೆ ರಾಜ್ಯದ ಪ್ರತಿ ಗ್ರಾಮಗಳಿಗೂ, ಮನೆಮನೆಗೂ ಆಮ್ ಆದ್ಮಿ ಪಕ್ಷದ ಚಿಂತನೆ ಹಾಗೂ ದೆಹಲಿ ಹಾಗೂ ಪಂಜಾಬ್ ಸರ್ಕಾರದ ಸಾಧನೆಗಳನ್ನು ಮುಟ್ಟಿಸುವಂತೆ ಯೋಜಿಸಲಾಗಿದ್ದು ಈ ನಿಟ್ಟಿನಲ್ಲಿ ಗ್ರಾಮಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಜಿಲ್ಲೆಗಳಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಪಕ್ಷ ಸಂಘಟನೆ ಹಾಗೂ ಮುಂಬರುವ ದಿನಗಳಲ್ಲಿ ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಚರ್ಚೆ ನಡೆಯಲಿದೆ ಎಂದು ಹೇಳಿದರು.

Advertisement

ಕರ್ನಾಟಕ ಒಂದು ಉತ್ತಮ ರಾಜ್ಯವಾಗಿದ್ದು, ಇಲ್ಲಿನ ಜನರು ಪ್ರಜ್ಞಾವಂತರು. ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಉತ್ತಮ ಆಡಳಿತ ನಡೆಸಲು ಆಪ್ ಅನ್ನು ಬೆಂಬಲಿಸಲಿದ್ದಾರೆ. ಚಾಮರಾಜನಗರ ಜಿಲ್ಲೆಯನ್ನು ಎಲ್ಲ ಪಕ್ಷಗಳು ಕಡೆಗಣಿಸಿವೆ. ಈ ಜಿಲ್ಲೆ ಪ್ರಾಕೃತಿಕ ಸೊಬಗಿನಿಂದ ಕೂಡಿದೆ. ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಾರೆ. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇನೆ. ತನ್ನ ರಾಜ್ಯದ ಒಂದು ಊರಿಗೆ ಮುಖ್ಯಮಂತ್ರಿ ಬರುವುದಿಲ್ಲ ಎಂದರೆ ಅರ್ಥವೇನು?ಎಂದು ದರ್ಶನ್ ಪ್ರಶ್ನಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಅಮ್ ಆದ್ಮಿ ಪಾರ್ಟಿ ಬಿಜೆಪಿಯ ಬಿ ಟೀಮ್ ಎಂಬುದು ವಿರೋಧಿಗಳ ಅಪಪ್ರಚಾರ. ದೇಶದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಇರುವುದು ಆಪ್ ಗೆ ಮಾತ್ರ. ಆಪ್‌ನ ಶಾಸಕರು ಬಿಜೆಪಿಗೆ ಮಾರಾಟವಾಗಿಲ್ಲ ಎಂದರು.

ಆಪ್‌ನ ವಿಚಾರಧಾರೆ ಬಗ್ಗೆ ಒಲವಿರುವ ಇಲ್ಲಿನ ನಿಯಮಕ್ಕೆ ಬದ್ದರಾಗಿರುವ ಯಾರು ಬೇಕಾದರೂ ಪಕ್ಷ ಸೇರಬಹುದು. ಜಿಲ್ಲಾಕಾರ್ಯಕರ್ತರ ಸಮಾವೇಶ ನಡೆದ ನಂತರ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಆಪ್‌ನ ಚಾಮರಾಜನಗರ ಸಾಮಾಜಿಕ ಜಾಲತಾಣ ಸಂಯೋಜಕ ಸಯ್ಯದ್, ಮೈಸೂರು ವಲಯ ಸಂಯೋಜಕ ಅಬ್ದುಲ್ ರಜಾಕ್, ಮುಖಂಡ ಷರೀಫ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next