Advertisement

ಚಾಮರಾಜನಗರ: ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ

01:03 PM Sep 28, 2022 | Team Udayavani |

ಚಾಮರಾಜನಗರ: ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು, ಆಕೆಯ ಇಷ್ಟಕ್ಕೆ ವಿರುದ್ಧವಾಗಿ ತಾಳಿಕಟ್ಟಿ ಮದುವೆಯಾಗಿ ಲೈಂಗಿಕ ಕಿರುಕುಳ ನೀಡಿದಾತನಿಗೆ 3 ವರ್ಷ ಜೈಲು ಶಿಕ್ಷೆ, ಇದಕ್ಕೆ ಸಹಕರಿಸಿದವರಿಗೆ 1 ವರ್ಷಕಠಿಣ ಶಿಕ್ಷೆ ವಿಧಿಸಿ, ಮಕ್ಕಳ ಸ್ನೇಹಿ ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಇದನ್ನೂ ಓದಿ:ಇದೆಂಥಾ ಮೋಸ! ಆರ್ಡರ್‌ ಮಾಡಿದ್ದು ದುಬಾರಿ ಲ್ಯಾಪ್‌ ಟಾಪ್‌ , ಬದಲಿಗೆ ಬಂದದ್ದು…

ಯಳಂದೂರು ತಾಲೂಕು ಗಣಿಗನೂರು ಗ್ರಾಮದ ಕೆಎಸ್‌ ಆರ್‌ಟಿಸಿ ಕಂಡಕ್ಟರ್‌ ಎಂ.ರವಿಕುಮಾರ್‌ ಬಾಲಕಿಯನ್ನು ಬಲವಂತವಾಗಿ ಮದುವೆಯಾದ ಅಪರಾಧಿಯಾಗಿದ್ದು, ಮದುವೆ ಮಾಡಿಸಿದ ಮೈಸೂರು ಜಯನಗರದ ಕೆ.ಎನ್‌. ಚಂದ್ರಶೇಖರ (ಕೆ.ಎನ್‌.ಶಾಸ್ತ್ರಿ), ಮೈಸೂರಿನ ಹೆಬ್ಬಾಳದ ರಾಜೇಶ್ವರ ಶಾಸ್ತ್ರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಾಲೇಜಿಗೆ ಬರುತ್ತಿದ್ದ ಬಾಲಕಿಯನ್ನು ನಿರ್ವಾಹಕ ರವಿಕುಮಾರ್‌ ಪರಿಚಯ ಮಾಡಿಕೊಂಡು, 2017ರ ಅ.23ರಂದು ಬಸ್‌ಗೆ ಕಾಯುತ್ತಿದ್ದ ಬಾಲಕಿಯನ್ನು ಬಲವಂತವಾಗಿ ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ಶ್ರೀರಂಗ ಪಟ್ಟಣದ ಗೋಸಾಯಿಘಾಟ್‌ನಲ್ಲಿ ಶೆಡ್‌ವೊಂದರಲ್ಲಿ ಬಲವಂತವಾಗಿ ತಾಳಿ ಕಟ್ಟಿದ್ದ.

ಈ ಬಾಲ್ಯವಿವಾಹಕ್ಕೆ ಚಂದ್ರಶೇಖರ ಶಾಸ್ತ್ರಿ ಹಾಗೂ ರಾಜೇಶ್ವರ ಶಾಸ್ತ್ರಿ ಸಹಕಾರ ನೀಡಿ ಮದುವೆ ಮಾಡಿಸಿದ್ದರು. ಮದುವೆ ಆಗಿರುವ ವಿಚಾರವನ್ನು ಯಾರಿಗಾದರೂ ಹೇಳಿದರೆ, ನಿನ್ನನ್ನು ಹೊಳೆಗೆ ತಳ್ಳಿ ಕೊಲೆ ಮಾಡುವುದಾಗಿ ರವಿಕುಮಾರ ಬಾಲಕಿಗೆ ಬೆದರಿಕೆ ಹಾಕಿದ್ದ. ಈ ಸಂಬಂಧ ಗುಂಡ್ಲುಪೇಟೆ ತಾಲೂಕಿನ ಬೇಗೂರು ಎಸ್‌ಐ ಅವರು ಪೋಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು.

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ನಿಶಾರಾಣಿ ಅವರು ರವಿಕುಮಾರ್‌ಗೆ ಪೋಕ್ಸೋ ಕಾಯ್ದೆಯಡಿ 3 ವರ್ಷ ಶಿಕ್ಷೆ ವಿಧಿಸಿದ್ದಾರೆ. ಇನ್ನಿಬ್ಬರು ಅಪರಾಧಿಗಳಿಗೆ 1 ವರ್ಷ ಕಠಿಣ ಶಿಕ್ಷೆ ನೀಡಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದಿಂದ ಬಾಲಕಿಗೆ 1ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್‌ ವಾದ ಮಂಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next