ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ 13 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಬಹುತೇಕ ಪ್ರಕರಣಗಳು ಬೆಂಗಳೂರಿಗೆ ಪ್ರಯಾಣ ಮಾಡಿ ಬಂದವರದ್ದಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 33 ಮಂದಿ ಸೋಂಕಿತರಿದ್ದಾರೆ. ಓರ್ವ ಗುಣಮುಖನಾಗಿದ್ದು, 32 ಸಕ್ರಿಯ ಪ್ರಕರಣಗಳಿವೆ.
ಓರ್ವ ರೋಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಬಂದ ಫಲಿತಾಂಶದಲ್ಲಿ ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದ ಚಾಲಕನಿಂದ ಸಂಪರ್ಕಿತರಾದ ಮತ್ತೆ 3 ಜನರು, ಚಾಮರಾಜನಗರ ಪಟ್ಟಣ ಮತ್ತು ತಾಲೂಕು ಸೇರಿ ಒಟ್ಟು 8, ಕೊಳ್ಳೇಗಾಲ ತಾಲೂಕಿನ 2 ಮಂದಿಗೆ ಸೋಂಕು ದೃಢಪಟ್ಟಿದೆ. ಚಾಮರಾಜನಗರ ತಾಲೂಕಿನಲ್ಲಿ ಗುರುತಿಸಿರುವ 4 ಪ್ರಕರಣಗಳ ರೋಗಿಗಳು ಒಂದೇ ಕುಟುಂಬದವರಾಗಿದ್ದು, ಮೂಲತಃ ಯಳಂದೂರು ತಾಲೂಕಿನ ಗೌಡಹಳ್ಳಿಯವರು.
ಆದರೆ ಅವರು ಬಂದಿಗೌಡನಹಳ್ಳಿಯ ಸಂಬಂಧಿಕರ ಮನೆಯಲ್ಲಿದ್ದರಿಂದ ಅವರನ್ನು ಚಾಮರಾಜನಗರ ತಾಲೂಕಿನವರೆಂದು ಪರಿಗಣಿಸಲಾಗಿದೆ. ನಿಗಾವಣೆಯಲ್ಲಿರುವ ಒಟ್ಟು ಪ್ರಾಥಮಿಕ ಸಂಪರ್ಕಿತರ ಸಂಖ್ಯೆ 186 ಆಗಿದ್ದು, ಶನಿವಾರ 56 ಮಂದಿಯನ್ನು ನಿಗಾವಣೆಯಲ್ಲಿರಿಸಲಾಗಿದೆ. ಒಟ್ಟು 206 ಜನರು ನಿಗಾವಣೆಯಲ್ಲಿರುವ ದ್ವಿತೀಯ ಸಂಪರ್ಕಿತರಾಗಿದ್ದಾರೆ. ಶನಿವಾರ 34 ಜನರನ್ನು ನಿಗಾವಣೆಯಲ್ಲಿರಿಸಲಾಗಿದೆ. ಇದುವರೆಗೆ ಒಟ್ಟಾರೆ 5,158 ಜನರನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 5124 ಪ್ರಕರಣಗಳು ನೆಗೆಟಿವ್ ಆಗಿದೆ.
ಲ್ಯಾಬ್ ಟೆಕ್ನಿಷಿಯನ್‌ಗೆ ಕೋವಿಡ್ 19 ಸೋಂಕು!: ಕೋವಿಡ್ 19 ಶಂಕಿತರ ಮಾದರಿಗಳನ್ನು ಟೆಸ್ಟ್ ಮಾಡುತ್ತಿದ್ದ ಪ್ರಯೋಗಾಲಯ ತಂತ್ರಜ್ಞರೋರ್ವರಿಗೆ (ಲ್ಯಾಬ್ ಟೆಕ್ನಿಷಿಯನ್) ಪಾಸಿಟಿವ್ ಬಂದಿದೆ. ಅಲ್ಲದೇ, ತಂತ್ರಜ್ಞೆಯ ಪತಿಗೂ ಸೋಂಕು ತಗುಲಿದೆ. ನಗರದ ಸರ್ಕಾರ ವೈದ್ಯಕೀಯ ಕಾಲೇಜು ಕಟ್ಟಡದಲ್ಲಿ ಕೋವಿಡ್ ತಪಾಸಣಾ (ಆರ್‌ಟಿಪಿಸಿಆರ್) ಪ್ರಯೋಗಾಲಯವನ್ನು ಕೆಲ ದಿನಗಳ ಹಿಂದಷ್ಟೇ ಆರಂಭಿಸಲಾಗಿದೆ.
ಅಲ್ಲಿ ಶಂಕಿತರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆ ಮಾಡುತ್ತಿದ್ದ 29 ವರ್ಷದ ಪ್ರಯೋಗಾಲಯ ತಂತ್ರಜ್ಞೆಯೋರ್ವರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ, ನಗರದ ಜಿಲ್ಲಾಸ್ಪತ್ರೆಯ ಸಮೀಪದ ಫ್ಯಾನ್ಸಿ ಸ್ಟೋರ್ ಹೊಂದಿರುವ ಆಕೆಯ ಪತಿಗೂ (32ವರ್ಷ) ಸೋಂಕು ತಗುಲಿರುವುದು ದೃಢಪಟ್ಟಿದೆ.