ಚಾಮರಾಜನಗರ: ಜಿಲ್ಲೆಯಲ್ಲಿ ಇಂದು ಕೋವಿಡ್ ಸೋಂಕಿನಿಂದ ಓರ್ವರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ಮೂರಕ್ಕೇರಿದೆ. ಇದೇ ವೇಳೆ ಜಿಲ್ಲೆಯಲ್ಲಿ ಇಂದು ಕೇವಲ ಒಂದು ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ಧಾರೆ.
ರೋಗಿ ಸಂಖ್ಯೆ ಪಿ.25133 ಗುಂಡ್ಲುಪೇಟೆ ಪಟ್ಟಣದ ನಿವಾಸಿ 64 ವರ್ಷದ ವೃದ್ಧ ಮೃತಪಟ್ಟವರು. ಕೋವಿಡ್ ಸೋಂಕಿತರಾಗಿದ್ದ ಇವರು, ಜು. 6ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ತಡರಾತ್ರಿ ನಿಧನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯ ಪ್ರಕಾರ ನಗರದ ಮುಸ್ಲಿಂ ರುದ್ರಭೂಮಿಯಲ್ಲಿ ಪಿಎಫ್‌ಐ ಕಾರ್ಯಕರ್ತರು ನೆರವೇರಿಸಿದರು.
ಜಿಲ್ಲೆಯಲ್ಲಿಂದು ಕೇವಲ 1 ಪ್ರಕರಣ: ಸಮಾಧಾನಕರ ವಿಷಯವೆಂದರೆ ಜಿಲ್ಲೆಯಲ್ಲಿ ಇಂದು ಕೇವಲ ಒಂದು ಕೋವಿಡ್ ಪ್ರಕರಣ ಮಾತ್ರ ವರದಿಯಾಗಿದೆ. ಜಿಲ್ಲೆಯ ಆರ್‌ಟಿ-ಪಿಸಿಆರ್ ಪ್ರಯೋಗಾಲಯದಲ್ಲಿ ಒಟ್ಟು 613 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಅದರಲ್ಲಿ 613 ಮಾದರಿಗಳು ಸಹ ನೆಗೆಟಿವ್ ಆಗಿವೆ! ಪಾಸಿಟಿವ್ ಆಗಿರುವ ಒಂದು ಪ್ರಕರಣದ ಮಾದರಿಯನ್ನು ಮೈಸೂರಿನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿತ್ತು.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 188 ದೃಢೀಕೃತ ಪ್ರಕರಣಗಳಿದ್ದು, ಇದರಲ್ಲಿ 111 ಮಂದಿ ಬಿಡುಗಡೆಯಾಗಿದ್ದಾರೆ. 74 ಸಕ್ರಿಯ ಪ್ರಕರಣಗಳಿವೆ. 4 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ವರದಿಯಾಗಿರುವ ಒಂದು ಪ್ರಕರಣ ಕೊಳ್ಳೇಗಾಲ ಪಟ್ಟಣದ 62 ವರ್ಷದ ವೃದ್ಧೆಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು ಅವರನ್ನು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೃದ್ಧೆಗೆ 29079 ಸಂಖ್ಯೆ ರೋಗಿಯ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ.