Advertisement

ಶಾಸಕ ಹೆಬ್ಬಾರಗೆ ವಾಯವ್ಯ ಸಾರಿಗೆ ಚಾಲನೆ ಸವಾಲು!

10:52 AM Jan 30, 2019 | |

ಹುಬ್ಬಳ್ಳಿ: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ನಲುಗುತ್ತಿರುವ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದು, ಸಾಕಷ್ಟು ಸವಾಲುಗಳು ಅವರ ಮುಂದಿದೆ.

Advertisement

ಉತ್ತರ ಕರ್ನಾಟಕದ ಜನರ ಸಾರಿಗೆಯ ಜೀವನಾಡಿಯಾಗಿರುವ ವಾಯವ್ಯ ಸಾರಿಗೆ ವರ್ಷದಿಂದ ವರ್ಷಕ್ಕೆ ನಷ್ಟದ ಕೂಪಕ್ಕೆ ಜಾರುತ್ತಿದೆ. ಇಂತಹ ಸಂಸ್ಥೆಯ ಸದೃಢತೆಗಾಗಿ ಸವಾಲುಗಳನ್ನು ಸ್ವೀಕರಿಸಿ ಶಾಸಕ ಶಿವರಾಮ ಹೆಬ್ಬಾರ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಪಕ್ಷಗಳ ಕಾರ್ಯಕರ್ತರಿಗೆ ಸೀಮಿತವಾಗಿದ್ದ ಸಂಸ್ಥೆಯ ಅಧ್ಯಕ್ಷಗಿರಿ ಶಾಸಕರಿಗೆ ದೊರಕಿದ್ದು, ಸಂಸ್ಥೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಅಧಿಕಾರಿಗಳು, ಕಾರ್ಮಿಕರು ಹೊಸ ನಿರೀಕ್ಷೆ ಹೊಂದಿದ್ದಾರೆ.

ಅಧ್ಯಕ್ಷರಿಗೆ ಸವಾಲುಗಳು: ಸಂಸ್ಥೆಯ ತೀವ್ರ ಆರ್ಥಿಕ ಅಧೋಗತಿಯೇ ಅಧ್ಯಕ್ಷರ ಮುಂದೆ ದೊಡ್ಡ ಸವಾಲು. ನಿತ್ಯ ಸಂಚರಿಸುವ ಬಸ್‌ಗಳಲ್ಲಿ ಯಾವುದೇ ವ್ಯತ್ಯಯ ಇರದಿದ್ದರೂ ಹತ್ತು ಹಲವು ಕಾರಣಗಳಿಂದ ನಿತ್ಯವೂ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಸರಕಾರದಿಂದ ಬರಬೇಕಾದ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ದೊರೆಯದಿರುವುದು ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಸಾರಿಗೆ ಸಂಸ್ಥೆಗಳ ಬಗ್ಗೆ ಸರಕಾರದ ನಿರ್ಲಕ್ಷ್ಯ ಮನಸ್ಥಿತಿ ಇರುವಾಗ ಸಂಸ್ಥೆಯ ಪ್ರಗತಿಗೆ ಸರಕಾರದಿಂದ ಅನುದಾನ ಪಡೆಯುವುದು ಅಧ್ಯಕ್ಷರಿಗಿರುವ ಸವಾಲು.

ಹಿಂದಿನ ಬಿಜೆಪಿ ಸರಕಾರ ಐದು ವರ್ಷಗಳ ಕಾಲ ಸಂಸ್ಥೆಗೆ ಮೋಟಾರ್‌ ವಾಹನ ವಿನಾಯಿತಿ ನೀಡಿತ್ತು. ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ 50 ಕೋಟಿ ರೂ. ವಿಶೇಷ ಅನುದಾನ ನೀಡಿದ್ದರು. ಆದರೆ ಹಿಂದಿನ ಕಾಂಗ್ರೆಸ್‌ ಸರಕಾರ ಸಂಕಷ್ಟದಲ್ಲಿದ್ದ ಸಂಸ್ಥೆಗೆ ಮೋಟಾರ್‌ ವಾಹನ ರಿಯಾಯಿತಿ ವಿಸ್ತರಣೆಗೆ ಸುತಾರಾಮ್‌ ಒಪ್ಪಲಿಲ್ಲ. ವಿಶೇಷ ಅನುದಾನ ದೂರದ ಮಾತು. ಇದೀಗ ಕಳೆದ ಒಂದು ವರ್ಷದಿಂದ ಮೋಟಾರ್‌ ವಾಹನ ವಿನಾಯಿತಿ ನೀಡುವಂತೆ ಸಂಸ್ಥೆ ಅಧಿಕಾರಿಗಳು ಸರಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಿದ್ದರೂ ಫ‌ಲಿತಾಂಶ ಮಾತ್ರ ಶೂನ್ಯವಾಗಿದೆ. ಹಲವು ವರ್ಷಗಳ ನಂತರ ಶಾಸಕರನ್ನು ಅಧ್ಯಕ್ಷ ಸ್ಥಾನಕ್ಕೆ ಸರಕಾರ ನೇಮಕ ಮಾಡಿದ್ದು, ಸವಾಲುಗಳನ್ನು ಮೆಟ್ಟಿ ಸಂಸ್ಥೆ ಬೆಳೆಸುವಲ್ಲಿ ಅಧ್ಯಕ್ಷರು ಯಶಸ್ವಿಯಾಗುತ್ತಾರಾ ಅಥವಾ ಅಧಿಕಾರ ಅನುಭವಿಸಿ ತೆರಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

ಬಲ ತುಂಬುತ್ತಾರಾ ಅಧ್ಯಕ್ಷರು?
ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗೆ ಸರಕಾರದ ವಿಶೇಷ ಅನುದಾನವೇ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಶಾಸಕರಾಗಿರುವ ಶಿವರಾಮ ಹೆಬ್ಬಾರ ಅಧ್ಯಕ್ಷರಾಗಿ ಸರಕಾರದಿಂದ ವಿಶೇಷ ಅನುದಾನಕ್ಕೆ ಗುದ್ದಾಡಬೇಕಿದೆ. ಹೆಸ್ಕಾಂ, ಜಲಮಂಡಳಿಯಂತೆ ಈ ಸಂಸ್ಥೆಗೆ ನಿರ್ದಿಷ್ಟ ಬಜೆಟ್ ಅನುದಾನ ಸರಕಾರದಿಂದ ಇಲ್ಲ. ಪ್ರತಿ ವರ್ಷವೂ ಇಂತಿಷ್ಟು ಅನುದಾನ ಬಜೆಟ್‌ನಲ್ಲಿ ಮೀಸಲಿಡುವಂತೆ ಸರಕಾರದ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕಿದೆ. ಮುಖ್ಯಮಂತ್ರಿಗಳ ಮನವೊಲಿಸಿ ಬಿಎಂಟಿಸಿಗೆ ಸರಕಾರ ನೀಡಿರುವ 100 ಕೋಟಿ ವಿಶೇಷ ಅನುದಾನದಂತೆ ಈ ಸಂಸ್ಥೆಗೂ ಅನುದಾನ ಪಡೆಯುವ ಹೊಣೆಗಾರಿಕೆ ಅಧ್ಯಕ್ಷರ ಮೇಲಿದೆ.

Advertisement

ಯೋಜನೆ ಯೋಚನೆ
ಸಂಸ್ಥೆಯ ನಿತ್ಯದ ಆದಾಯ 4.93 ಕೋಟಿ ರೂ. ಇದ್ದರೆ ಖರ್ಚು 5.71 ಕೋಟಿ ರೂ.ಇದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಅಧ್ಯಕ್ಷರು ವಿಶೇಷ ಯೋಜನೆ ಕಾರ್ಯ ಯೋಜನೆ ರೂಪಿಸಬೇಕಾಗಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕಾಗಿದೆ. ಸಂಸ್ಥೆಯಲ್ಲಿನ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳಿಗೆ ಬ್ರೇಕ್‌ ಹಾಕುವ ಕೆಲಸ ಆಗಬೇಕಿದೆ. ಇದರೊಂದಿಗೆ ಸಂಸ್ಥೆಯ ಕಾರ್ಮಿಕರ ಹಿತಚಿಂತನೆಯೂ ಪ್ರಮುಖವಾಗಿದೆ.

ಅಧಿಕಾರಿಗಳ ಕೊರತೆ
ಆರ್ಥಿಕ ಸಮಸ್ಯೆಯಂತೆ ಸಂಸ್ಥೆ ಅಧಿಕಾರಿಗಳ ಕೊರತೆ ಅನುಭವಿಸುತ್ತಿದೆ. ಕೇಂದ್ರ ಕಚೇರಿಯ ಪ್ರಮುಖ ಹುದ್ದೆಗಳೇ ಪ್ರಭಾರಿಯಲ್ಲಿ ನಡೆಯುತ್ತಿರುವುದು ಸಂಸ್ಥೆಯ ದುರಂತವೇ ಸರಿ. ವಿಭಾಗ ಕಚೇರಿ ಹಾಗೂ ಘಟಕಗಳ ಪರಿಸ್ಥಿತಿಯಂತೂ ಹೇಳ ತೀರದಾಗಿದೆ. ಇತ್ತೀಚೆಗೆ ನಡೆದ ಅಧಿಕಾರಿಗಳ ನೇಮಕಾತಿಯಲ್ಲಿ ನಿಯಮ ಪ್ರಕಾರ ವಾಯವ್ಯ ಸಾರಿಗೆ ಅಧಿಕಾರಿಗಳ ಹಂಚಿಕೆಯಾಗದಿರುವುದು ಸಂಸ್ಥೆಯ ಬಗ್ಗೆ ಸರಕಾರ ಹೊಂದಿರುವ ತಾತ್ಸಾರ ಭಾವನೆ ವ್ಯಕ್ತವಾಗುತ್ತಿದೆ.

ಬಾಕಿಯೇ ದೊಡ್ಡ ಹೊರೆ
ಸರಕಾರದಿಂದ ಅನುದಾನ ಹಾಗೂ ವಿಶೇಷ ಅನುದಾನವಿಲ್ಲದ ಪರಿಣಾಮ ನಿವೃತ್ತ ಹಾಗೂ ಹಾಲಿ ನೌಕರರಿಗೆ ನೀಡಬೇಕಾದ ಆರ್ಥಿಕ ಸೌಲಭ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿದೆ. ಸುಮಾರು 66 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಹಾಲಿ ಹಾಗೂ ನಿವೃತ್ತ ನೌಕರರ ಹಿತಚಿಂತನೆ ಭಾರ ನೂತನ ಅಧ್ಯಕ್ಷರ ಮೇಲಿದೆ. ಇನ್ನೂ ಬಿಡಿಭಾಗ ಪೂರೈಕೆ, ಇಂಧನ, ಗುತ್ತಿಗೆದಾರರು ಸೇರಿದಂತೆ ಸುಮಾರು 370 ಕೋಟಿ ರೂ. ಭಾರ ಸಂಸ್ಥೆಯ ಮೇಲಿದ್ದು, ಬಾಕಿ ಪಾವತಿಸದ ಕಾರಣ ಕೆಲ ಗುತ್ತಿಗೆದಾರರು ಸಾಮಗ್ರಿ ಪೂರೈಸಲು ಹಿಂದೇಟು ಹಾಕುವಂತಾಗಿದೆ.

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next