Advertisement

ಅಡ್ಡಿ ಆತಂಕದ ಜತೆಯಲ್ಲಿ ಚಾಲಕರಿಗೆ ಸವಾಲು

11:44 PM Aug 17, 2019 | sudhir |

ಕಾಸರಗೋಡು: ಕೇರಳ- ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ ಯಿಂದ ಆರಂಭಿಸಿ ಕಾಸರಗೋಡಿನ ತನಕ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಹೊಂಡ ಗುಂಡಿ ನಿರ್ಮಾಣವಾಗಿದ್ದು, ಇನ್ನು ಕೆಲವೆಡೆ ಗದ್ದೆಯಂತಾಗಿದೆ. ಹೊಂಡಗುಂಡಿ ಸೃಷ್ಟಿಯಾಗಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಪದೇ ಪದೇ ಅಡ್ಡಿ ಆತಂಕ ಎದುರಾಗುತ್ತಿದ್ದು, ವಾಹನ ಚಾಲಕರಿಗೆ ಈ ರಸ್ತೆ ಸವಾಲಾಗಿ ಪರಿಣಮಿಸಿದೆ.

Advertisement

ಕಾಸರಗೋಡು ನಗರದಿಂದಲೇ ಆರಂಭಿಸುವ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಹುಡುಕುವುದೇ ಕಷ್ಟ ಎಂಬಂತ ಸ್ಥಿತಿಯಿದೆ. ರಸ್ತೆ ಪೂರ್ಣ ತೋಡಾಗಿ ಮಾರ್ಪಾಡುಗೊಂಡಿದೆ. ಹೊಂಡಗಳೇ ಇರುವುದರಿಂದ ವಾಹನ ಪ್ರಯಾಣಿಕರಿಗೆ ದೋಣಿಯಲ್ಲಿ ಸಂಚರಿಸುವಾಗ ಉಂಟಾ ಗುವ ಅನುಭವವಾಗುತ್ತಿದೆ. ಕ್ಷಣ ಕ್ಷಣವೂ ಅಪಾಯ ಎದುರಾಗುತ್ತಿದೆ. ಕೆಲವು ಕ್ಷಣ ಚಾಲಕನ ಶ್ರದ್ಧೆ ತಪ್ಪಿದರೂ ಅಪಾಯ ತಪ್ಪಿದಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಶ್ನೆಗೆ ಉತ್ತರವೇ ಇಲ

ತಲಪಾಡಿಯಿಂದ ಕಾಸರಗೋಡಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಿ ರಸ್ತೆ ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರಶ್ನಿಸಿದರೇ ಈ ಪ್ರಶ್ನೆಗೆ ಉತ್ತರವೇ ಇಲ್ಲ. ರಸ್ತೆ ಅಷ್ಟು ಕೆಟ್ಟು ಹೋಗಿದೆ. ಮಂಗಳೂರಿನಿಂದ ಕೇರಳದ ತಲಪಾಡಿಗೆ ಆಗಮಿಸುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ನೋಡಿದರೆ ಅಯ್ಯೋ ಎನಿಸದಿರದು. ಕ್ಷಣ ಕ್ಷಣವೂ ಅಪಾಯ ಕೈಬೀಸಿ ಕರೆಯುತ್ತಿರುವ ಹೊಂಡಗುಂಡಿಯ ರಸ್ತೆಯಲ್ಲಿ ದಿನಾ ಅಪಘಾತ ನಡೆಯುತ್ತಿರುತ್ತದೆ.

ಕೇಂದ್ರ ಸರಕಾರದ ಮಹತ್ವದ ಯೋಜನೆ ಯಾಗಿರುವ ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಬಹುತೇಕ ರಾಜ್ಯಗಳಲ್ಲಿ ಪೂರ್ಣ ಗೊಂಡಿದೆ. ಕರ್ನಾಟಕದಲ್ಲೂ ಬಹುತೇಕ ಪೂರ್ಣ ಗೊಂಡಿದೆ. ಆದರೆ ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಇನ್ನೂ ಚಾಲನೆ ಲಭಿಸಿಲ್ಲ. ಈ ಬಗ್ಗೆ ಹೆಚ್ಚಿನ ಪ್ರಕ್ರಿಯೆಯೂ ನಡೆದಿಲ್ಲ. ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದೆಂದು ಕೇರಳ ರಾಜ್ಯ ಸರಕಾರ ಹಲವು ಬಾರಿ ಘೋಷಣೆ ಮಾಡಿದ್ದರೂ, ಇನ್ನೂ ಕೂಡಾ ಕಾಮಗಾರಿ ಆರಂಭಗೊಂಡಿಲ್ಲ. ಹೆಚ್ಚೇಕೆ ಪ್ರಾಥಮಿಕ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

Advertisement

ಮಂಗಳೂರಿನಿಂದ ಕಾಸರಗೋಡಿಗೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಲಪಾಡಿ ಯಲ್ಲಿರುವ ಟೋಲ್ ಗೇಟ್ ಕಳೆದು ಕೇರಳಕ್ಕೆ ಪ್ರವೇಶಿಸುತ್ತಿದ್ದಂತೆ ಕೇರಳದ ರಸ್ತೆಯ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಸಿಗುತ್ತದೆ. ಕೇರಳದ ಪ್ರದೇಶದಲ್ಲಿ ತಲಪಾಡಿ ಬಸ್‌ ತಂಗುದಾಣದಿಂದ ಕೆಲವೇ ಅಂತರದಲ್ಲಿ ಮುಂದೆ ಸಾಗಿದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಬೃಹತ್‌ ಹೊಂಡ ಪ್ರಯಾಣಿಕರನ್ನು, ವಾಹನಗಳನ್ನು ಸ್ವಾಗತಿಸುತ್ತವೆ. ತಲಪಾಡಿ ಪ್ರವೇಶಿಸುವಾಗಲೇ ಕರ್ನಾಟಕ ಮತ್ತು ಕೇರಳದ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಇರುವ ಗುಣಮಟ್ಟದ ಅಂತರವನ್ನು ಸೂಚಿಸುತ್ತದೆ. ತಲಪಾಡಿಯಿಂದ ಮಂಗಳೂರಿನ ವರೆಗೆ ಚತುಷ್ಪಥ ರಸ್ತೆ ಪೂರ್ಣಗೊಂಡು ವರ್ಷಗಳೇ ಸಂದರೂ, ಕೇರಳದ ತಲಪಾಡಿಯ ದಕ್ಷಿಣಕ್ಕೆ ರಾ.ಹೆದ್ದಾರಿಯ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಅಗಲ ಕಿರಿದಾದ ರಸ್ತೆ. ಜೊತೆಯಲ್ಲಿ ರಸ್ತೆಯ ಅಲ್ಲಲ್ಲಿ ಹೊಂಡಗುಂಡಿಗಳು ಎದುರಾಗುತ್ತವೆ. ತಲಪಾಡಿಯಲ್ಲಂತೂ ಬೃಹತ್‌ ಗಾತ್ರದ ಹೊಂಡ ಬಿದ್ದು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ವಾಹನ ದಟ್ಟಣೆ

ರಸ್ತೆಯಲ್ಲೇ ನಿರ್ಮಾಣವಾಗಿರುವ ಬೃಹತ್‌ ಹೊಂಡದಿಂದಾಗಿ ಪದೇ ಪದೇ ವಾಹನ ಅಪಘಾತ ಸಂಭವಿಸುತ್ತಿದ್ದು, ಈಗಾಗಲೇ ಹಲವು ವಾಹನ ಅಪಘಾತ ಸಂಭವಿಸಿದೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಹೊಂಡ ಬಿದ್ದ ಪರಿಣಾಮವಾಗಿ ಸುಗಮವಾಗಿ ವಾಹನ ಸಾಗಲು ಸಾಧ್ಯವಾಗದೆ ರಸ್ತೆ ತಡೆಗೂ ಕಾರಣವಾಗುತ್ತಿದೆ. ಈ ಕಾರಣದಿಂದ ವಾಹನ ದಟ್ಟಣೆ ಸಂಭವಿಸುವುದು ಸಾಮಾನ್ಯವಾಗಿದ್ದು, ಇಂತಹ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳು ಅಡ್ಡಾದಿಡ್ಡಿಯಾಗಿ ನಿಂತಿರುವ ವಾಹನಗಳ ಮಧ್ಯೆ ನುಸುಳಿ ಸಾಗುತ್ತಿದೆ. ಇದೂ ಕೂಡಾ ವಾಹನ ಅಪಘಾತಕ್ಕೆ ಪ್ರಮುಖ ಕಾರಣವಾಗುತ್ತಿದೆ. ರಸ್ತೆಯ ಡಾಮರು ಕಿತ್ತು ಹೋಗಿದ್ದು, ಜಲ್ಲಿ ಮೇಲೆ ಬಿದ್ದು, ಬೃಹತ್‌ ಗಾತ್ರದಲ್ಲಿ ಹೊಂಡ ಸೃಷ್ಟಿಯಾಗಿದೆ. ರಸ್ತೆಯ ಹೊಂಡದಿಂದಾಗಿ ವಾಹನ ಸಾಗುವಾಗ ಮೇಲೆ ಬಿದ್ದ ಜಲ್ಲಿ ಸಿಡಿದು ರಸ್ತೆ ಬದಿಯಲ್ಲಿ ನಡೆದು ಹೋಗುವ ದಾರಿಹೋಕರಿಗೂ ಬಡಿದು ಹಲವಾರು ಮಂದಿ ಗಾಯಗೊಂಡ ಘಟನೆ ನಡೆದಿದೆ. ದಿನದಿಂದ ದಿನಕ್ಕೆ ಈ ಹೊಂಡ ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಇನ್ನಷ್ಟು ಅಪಾಯಕಾರಿಯಾಗಿ ಮುನ್ನುಗುತ್ತಿದೆ. ಜನದಟ್ಟಣೆಯ ಪ್ರದೇಶವಾಗಿರುವ ಈ ರಸ್ತೆಯ ಪರಿಸ್ಥಿತಿ ಹೀಗಾದರೆ ಇನ್ನೂ ಇತರ ರಸ್ತೆಗಳ ಸ್ಥಿತಿ ಹೇಗಿರಬೇಕು ಎಂಬುದು ಊಹಿಸುವುದೂ ಕಷ್ಟ.

ಸಾಮಾನ್ಯವಾಗಿ ಕಾಸರಗೋಡಿನಿಂದ ಮಂಗಳೂರಿಗೆ ವಾಹನಗಳಲ್ಲಿ ತಲುಪಲು ಸಾಮಾನ್ಯವಾಗಿ ಒಂದೂವರೆ ಗಂಟೆಯಿಂದ ಒಂದೂ ಮುಕ್ಕಾಲು ಗಂಟೆ ಸಾಕಾಗುತ್ತದೆ. ಆದರೆ ರಸ್ತೆಯಲ್ಲಿ ಹೊಂಡಗುಂಡಿ ಬಿದ್ದಿರುವುದರಿಂದ ಎಂದಿಗಿಂತ ಒಂದು ಗಂಟೆ ಅಧಿಕ ಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಮೈ ಕೈ ನೋವು ಆರಂಭವಾಗಿರುತ್ತದೆ. ಬಸ್‌ ಸಹಿತ ವಾಹನಗಳ ಮೇಲ್ಭಾಗಕ್ಕೆ ತಲೆ ಬಡಿದು ಗಾಯವಾಗುವುದು ಸಾಮಾನ್ಯವಾಗಿದೆ. ಈ ರಸ್ತೆಯ ದುಸ್ಥಿತಿಯಿಂದಾಗಿ ಕಾಸರಗೋಡಿ ನಿಂದ ಮಂಗಳೂರಿಗೆ ಪ್ರಯಾಣವೆಂದರೆ ಸಂಕಷ್ಟಮಯವಾಗಿ ಪರಿಣಮಿಸಿದೆ.

ಈ ರಸ್ತೆಯ ಶೋಚನೀಯ ಸ್ಥಿತಿಯನ್ನು ಪರಿಗಣಿಸಿ ಸಂಭವನೀಯ ದುರಂತವನ್ನು ತಪ್ಪಿಸಲು ಸಂಬಂದಪಟ್ಟವರು ಶೀಘ್ರವೇ ರಸ್ತೆ ದುರಸ್ತಿಗೆ ಮುಂದಾಗಬೇಕಾಗಿದೆ.

ಸರಕಾರ ರಸ್ತೆ ದುರಸ್ತಿಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಎಲ್ಲಿ ರಸ್ತೆ ದುರಸ್ತಿಯಾಗಿದೆ, ಎಷ್ಟು ಸಮರ್ಪಕವಾಗಿ ನಡೆದಿದೆ ಎಂಬುದರ ಬಗ್ಗೆ ಪಟ್ಟಿ ತಯಾರಿಸ ಹೊರಟರೆ ರಸ್ತೆ ದುರಸ್ತಿಯಾದದ್ದು, ರಸ್ತೆ ದುರಸ್ತಿಯಾಗಿದ್ದರೂ ಕೆಲವೇ ದಿನಗಳಲ್ಲಿ ಕೆಟ್ಟು ಹೋಗಿ ಮತ್ತೆ ಅದೇ ಹಳೆಯ ಸ್ಥಿತಿಗೆ ತಲುಪಿರುವ ಬಗ್ಗೆ ಮಾಹಿತಿಯೇ ಲಭಿಸುವುದಿಲ್ಲ. ಅಂದರೆ ರಸ್ತೆ ದುರಸ್ತಿ ಮತ್ತು ನವೀಕರಣದ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸರಕಾರದ ಖಜಾನೆಯಿಂದ ಖಾಲಿಯಾಗಿರುತ್ತದೆ. ಆದರೆ ಹಣ ಎಲ್ಲಿಗೆ ಹೋಯಿತು. ಯಾರ ಕೈಗೆ ಸೇರಿತು ಎಂಬ ಬಗ್ಗೆ ಎಲ್ಲವೂ ನಿಗೂಢವಾಗಿರುತ್ತದೆ.

ಮತ್ತೆ ಅದೇ ಹಳೆಯ ಸ್ಥಿತಿ

ಸರಕಾರ ರಸ್ತೆ ದುರಸ್ತಿಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಎಲ್ಲಿ ರಸ್ತೆ ದುರಸ್ತಿಯಾಗಿದೆ, ಎಷ್ಟು ಸಮರ್ಪಕವಾಗಿ ನಡೆದಿದೆ ಎಂಬುದರ ಬಗ್ಗೆ ಪಟ್ಟಿ ತಯಾರಿಸ ಹೊರಟರೆ ರಸ್ತೆ ದುರಸ್ತಿಯಾದದ್ದು, ರಸ್ತೆ ದುರಸ್ತಿಯಾಗಿದ್ದರೂ ಕೆಲವೇ ದಿನಗಳಲ್ಲಿ ಕೆಟ್ಟು ಹೋಗಿ ಮತ್ತೆ ಅದೇ ಹಳೆಯ ಸ್ಥಿತಿಗೆ ತಲುಪಿರುವ ಬಗ್ಗೆ ಮಾಹಿತಿಯೇ ಲಭಿಸುವುದಿಲ್ಲ. ಅಂದರೆ ರಸ್ತೆ ದುರಸ್ತಿ ಮತ್ತು ನವೀಕರಣದ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸರಕಾರದ ಖಜಾನೆಯಿಂದ ಖಾಲಿಯಾಗಿರುತ್ತದೆ. ಆದರೆ ಹಣ ಎಲ್ಲಿಗೆ ಹೋಯಿತು. ಯಾರ ಕೈಗೆ ಸೇರಿತು ಎಂಬ ಬಗ್ಗೆ ಎಲ್ಲವೂ ನಿಗೂಢವಾಗಿರುತ್ತದೆ.
Advertisement

Udayavani is now on Telegram. Click here to join our channel and stay updated with the latest news.

Next