ಚಳ್ಳಕೆರೆ: ಸಮಾಜದಲ್ಲಿ ಉತ್ತಮ ಬದುಕು ನಡೆಸಲು ಪ್ರತಿಯೊಬ್ಬ ವ್ಯಕ್ತಿಯೂ ಶಿಕ್ಷಣವಂತನಾಗಿರಬೇಕಾಗುತ್ತದೆ. ಶಿಕ್ಷಣಕ್ಕೆ ನಮ್ಮೆಲ್ಲರ ಬದುಕನ್ನು ಅತಿ ಎತ್ತರಕ್ಕೆ ತೆಗೆದುಕೊಂಡು ಹೋಗುವ ಶಕ್ತಿ, ಸಾಮರ್ಥ್ಯ ಎರಡೂ ಇದೆ. ಶಿಕ್ಷಣ ವಂಚಿತನಾದ ವ್ಯಕ್ತಿ ಮತ್ತು ಸಮಾಜ ಅಭಿವೃದ್ಧಿ ಪಥದತ್ತ ಮುನ್ನಡೆಯಲು ಸಾಧ್ಯವಾಗುವುದಿಲ್ಲ ಎಂದು ಹವ್ಯಾಸಿ ರಂಗಕಲಾವಿದ ಪ್ರೊ| ಕೃಷ್ಣೇಗೌಡ ತಿಳಿಸಿದರು.
ಸಾಣೀಕೆರೆ ಗ್ರಾಮದ ವ್ಯಾಪ್ತಿಯಲ್ಲಿರುವ ವೇದ ಶಾಲೆ ಮತ್ತು ಪಪೂ ಕಾಲೇಜಿನ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿಗೂ ಸಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುವ ವಿದ್ಯಾಸಂಸ್ಥೆಗಳ ಸಂಖ್ಯೆ ಕಡಿಮೆಯಾಗಿದ್ದು, ವಿಭಿನ್ನವಾಗಿ ಈ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಅತೀ ಹೆಚ್ಚಿನ ಸಂಖ್ಯೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರಿಗೆ ನೆರವಾಗಿದೆ ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕ್ಷೇತ್ರದಾದ್ಯಂತ ಹಲವಾರು ಶಾಲೆಗಳ ಕಾರ್ಯಕ್ರಮಕ್ಕೆ ನಾನು ಭೇಟಿ ನೀಡುತ್ತಾ ಬಂದಿದ್ದೇನೆ. ಆದರೆ, ಈ ಸಂಸ್ಥೆಯ ಜವಾಬ್ದಾರಿ, ಶಿಕ್ಷಣ ಬಗ್ಗೆ ಇರುವ ಕಾಳಜಿ, ವಿದ್ಯಾರ್ಥಿಗಳಲ್ಲಿ ಓದುವ ವಿಚಾರದಲ್ಲಿ ಆಸಕ್ತಿ ಮೂಡಿಸುವಲ್ಲಿ ಇಲ್ಲಿನ ಶಿಕ್ಷಕ ವರ್ಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಾಮಾನ್ಯವಾಗಿ ಎಲ್ಲರೂ ನಗರ ಪ್ರದೇಶದಲ್ಲೇ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಆರ್ಥಿಕ ಶಕ್ತಿ ಹೊಂದಲು ಪ್ರಯತ್ನಿಸುತ್ತಾರೆ. ಆದರೆ, ಈ ಸಂಸ್ಥೆ ಗ್ರಾಮೀಣ ಭಾಗದ ಪರಿಸರದಲ್ಲೇ ತನ್ನ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಾ ಬಂದಿದೆ ಎಂದರು.
ಯಾವುದೇ ವ್ಯಕ್ತಿ ತನ್ನ ಪರಿಪೂರ್ಣ ಬದುಕನ್ನು ಕಂಡುಕೊಳ್ಳಲು ಶಿಕ್ಷಣವೇ ಮೂಲ ತಳಹದಿ. ಇಂದು ನಾವು ಗ್ರಾಮೀಣ ಭಾಗದಿಂದ ಶಿಕ್ಷಣ ಪಡೆದರೂ ಉನ್ನತ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳ ಪಾತ್ರವೂ ಸಹ ಹೆಚ್ಚಿದೆ. ಸಮಯಕ್ಕೆ ಸರಿಯಾಗಿ ಶಿಕ್ಷಕದ ಸಹಕಾರದಿಂದ ಹೆಚ್ಚು ಹೆಚ್ಚು ಶಿಕ್ಷಣ ಪಡೆದು ಜ್ಞಾನ ಸಂಪಾದನೆಗೆ ಪ್ರತಿಯೊಬ್ಬರೂ ಮುಂದಾಗಬೇಕಿದೆ. ಯಾವ ವಿದ್ಯಾರ್ಥಿ ತನ್ನದೇಯಾದ ವಿಶೇಷ
ಗುರಿ ಹೊಂದಿರುತ್ತಾನೋ ಅದನ್ನು ಪೂರೈಸಲು ಅವನಿಗೆ ಶಿಕ್ಷಣವೇ ಮೂಲ ರಹದಾರಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಎಲ್ಲಾ ಅಮ್ಯೂಲ ಸಮಯವನ್ನು ಕಲಿಕೆಗೆ ಮೀಸಲಿಟ್ಟು ಅಭಿವೃದ್ಧಿ ಪಥದತ್ತ ಸಾಗುವಂತೆ ಮನವಿ ಮಾಡಿದರು.
ಸಂಸ್ಥೆಯ ಅಧ್ಯಕ್ಷ ಡಿ.ಕೆ.ರವೀಂದ್ರ ಮಾತನಾಡಿ, ಚಳ್ಳಕೆರೆ ತಾಲೂಕು ಅಷ್ಟೇಯಲ್ಲದೆ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದು, ಅದರಲ್ಲಿ ಶೇ.80 ಭಾಗ ಗ್ರಾಮೀಣ ಪ್ರದೇಶದವರು. ಇಂತಹ ಮಕ್ಕಳಿಗೆ ಶಿಕ್ಷಣ ನೀಡಿದಲ್ಲಿ ಮಾತ್ರ ನಮ್ಮ ಸಮಾಜ ಮತ್ತು ದೇಶ ಅಭಿವೃದ್ಧಿ ಕಾಣಲು ಸಾಧ್ಯ. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಸಂಸ್ಥೆ ಕೇವಲ ಶೈಕ್ಷಣಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಎಲ್ಲರ ಸಹಕಾರದಿಂದ ಈ ಸಂಸ್ಥೆ ಅಭಿವೃದ್ಧಿಯತ್ತ ದೃಷ್ಟಿಹರಿಸಲು ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲೂ ಸಹ ನಿಮ್ಮೆಲ್ಲರ ಸಹಕಾರ ಮಾರ್ಗದರ್ಶನದಿಂದ ಈ ಸಂಸ್ಥೆ ಇನ್ನೂ ಹೆಚ್ಚಿನ ಶೈಕ್ಷಣಿಕ ಪ್ರಗತಿ ದಾಖಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ ಎಂದರು.
ಜಿಪಂ ಸದಸ್ಯ ಪ್ರಕಾಶ್‌ಮೂರ್ತಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆಂಜನೇಯ, ತಾಪಂ ಸದಸ್ಯ ವೀರೇಶ್, ನಗರಸಭಾ ಸದಸ್ಯರಾದ ವೈ.ಪ್ರಕಾಶ್, ರಮೇಶ್‌ಗೌಡ, ಮಲ್ಲಿಕಾರ್ಜುನ, ರಾಘವೇಂದ್ರ, ವೃತ್ತ ನಿರೀಕ್ಷಕ ಈ.ಆನಂದ್, ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ಡಿ.ವೀರಣ್ಣ, ಮುಖಂಡರಾದ ಪ್ರಸನ್ನ ಶಾನುಬೋಗ, ಚಂದ್ರಣ್ಣ, ಕಿರಣ, ಪ್ರಾಂಶುಪಾಲ ಅಬ್ದಲ್ ವಾಯಿದ್, ಮುಖ್ಯ ಶಿಕ್ಷಕಿ ಗೀತ ಮುಂತಾದವರು ಭಾಗವಹಿಸಿದ್ದರು.