Advertisement

ವಿವಿ ಸಾಗರ ನೀರು ಬಂದೇ ಬರುತ್ತೆ

12:47 PM Apr 30, 2020 | Naveen |

ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ನಿರಂತರ ಬರಗಾಲ ಹಾಗೂ ನೀರಾವರಿ ಸೌಲಭ್ಯಗಳಿಂದ ವಂಚಿತವಾಗಿರುವ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳ ನೀರಾವರಿ ಸೌಲಭ್ಯ ಒದಗಿಸುವ ಕುರಿತು ಮುಖ್ಯಮಂತ್ರಿಯವರಿಗೆ ವಿಶೇಷ ಮನವಿ ಮಾಡಿದ್ದೇನೆ. ಯಾವುದೇ ಹಂತದಲ್ಲೂ ಈ ಭಾಗದ ಜನರು ಆತಂಕಪಡುವ ಅಗತ್ಯ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಬುಧವಾರ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯ ಹೊನ್ನೂರು ಗ್ರಾಮದ ಎಚ್‌.ವಿ. ಹನುಮಂತ ರೆಡ್ಡಿಯವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿ ಸಾಗರದಿಂದ ಚಳ್ಳಕೆರೆ ಕ್ಷೇತ್ರಕ್ಕೆ ನೀರು ಬಿಡುವ ಸರ್ಕಾರದ ಕ್ರಮವನ್ನು ಸಮರ್ಥಿಸಿದರು. ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲೂ ಈ ನೀರು ಹರಿದು ಬರಲಿದ್ದು, ಎರಡೂ ಕ್ಷೇತ್ರಗಳ ಜನತೆಗೆ ಇದರಿಂದ ಅನುಕೂಲವಾಗುತ್ತದೆ. ಈ ಭಾಗದ ಲಕ್ಷಾಂತರ ರೈತರ ಸಾವಿರಾರು ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆತು ಬರಗಾಲ ಶಾಪದಿಂದ ಈ ಪ್ರದೇಶಗಳು ಮುಕ್ತವಾಗಬೇಕೆಂಬುವುದೇ ನನ್ನ ಉದ್ದೇಶ ಎಂದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ವಿವಿ ಸಾಗರದ ನೀರನ್ನು ಈ ಕ್ಷೇತ್ರಕ್ಕೆ ನೀಡಲು ಆದೇಶ ನೀಡಿದೆ. ಆದರೆ. ಸಂಬಂಧಪಟ್ಟ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೂ ಆದೇಶ ನೀಡಿದ್ದಾರೆ. ಆದರೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಚಳ್ಳಕೆರೆ ಕ್ಷೇತ್ರಕ್ಕೆ ನೀರು ಕೊಡುವ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಂಡಿದ್ದಾರೆ. ನೀರು ನಿಲುಗಡೆಗೆ ಯತ್ನಿಸಿದ ಬಗ್ಗೆ ಮಾಹಿತಿ ಬಂದ ಕೂಡಲೇ ಮುಖ್ಯಮಂತ್ರಿಗಳನ್ನು ಹಾಗೂ ಜಲಸಂಪನ್ಮೂಲ ಸಚಿವರನ್ನು ಸಂಪರ್ಕಿಸಿ ಯಾವುದೇ ಕಾರಣಕ್ಕೂ ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರಕ್ಕೆ ನೀರು ನೀಡಬೇಕೆಂದು ಒತ್ತಾಯಿಸಿದ್ದೇನೆ. ಈ ಬಗ್ಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ರವರೊಂದಿಗೂ ಮಾತನಾಡಿದ್ದೇನೆ. ಶಾಸಕರ ರಘುಮೂರ್ತಿ ಅವರೊಂದಿಗೂ ಈ ಬಗ್ಗೆ ಚರ್ಚಿಸಿದ್ದು, ನೀರು ಹರಿಸುವುದಾಗಿ ಅವರಿಗೂ ಭರವಸೆ ನೀಡಿದ್ದೇನೆ ಎಂದು ಹೇಳಿದರು.

ಅತ್ಯಂತ ಹಿಂದುಳಿದ ಪ್ರದೇಶವಾದ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಈ ಭಾಗದ 74 ಕೆರೆಗಳಿಗೆ ನೀರು ತುಂಬಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ತುಂಗಾ ಹಿನ್ನೀರು ಯೋಜನೆ ಪ್ರಾರಂಭವಾಗಲಿದ್ದು, ಸರ್ಕಾರ ನೀರಾವರಿ ಸೌಲಭ್ಯ ನೀಡುವ ವಿಚಾರದಲ್ಲಿ ಮುಕ್ತವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next