ಚಳ್ಳಕೆರೆ: ತಾಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರು ಹಾಗೂ ಕೆಲವೊಂದು ಮೂಲ ಸೌಕರ್ಯಗಳ ಕೊರತೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಸಮಯೋಚಿತವಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಲ್ಲಿ ಸರ್ಕಾರದ ಆಡಳಿತದ ಬಗ್ಗೆ ಆತ್ಮವಿಶ್ವಾಸ ತುಂಬಬೇಕು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಇಲ್ಲಿನ ತಾಪಂ ಕಾರ್ಯಾಲಯದಲ್ಲಿ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಪರಶುರಾಮಪುರ ಹೋಬಳಿ ಮತ್ತು ಕಸಬಾ ಹೋಬಳಿಯ ಕೆಲವೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಮೀತಿ ಮೀರಿದ್ದು, ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚುವರಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ತಿಳಿಸಿದರು. ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ಪ್ರಾರಂಭವಾಗಿಲ್ಲವೆಂಬ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಯಾವುದೇ ಸಮಸ್ಯೆ ಇದ್ದಲ್ಲಿ ತಮ್ಮ ಗಮನಕ್ಕೆ ತಂದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಹೆಚ್ಚಿನ ನೆರವು ಕೊಡಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಪ್ರವೀಣ ಮಾತನಾಡಿ, ಪ್ರಸ್ತುತ ವರ್ಷವೂ ಸಹ ಎಲ್ಲಾ ಬೆಳೆಗಳ ಬಿತ್ತನೆ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಮಳೆ ವೈಫಲ್ಯದ ಹಿನ್ನೆಲೆಯಲ್ಲಿ ಬಿತ್ತಿದ್ದ ಕೆಲವು ಹೆಕ್ಟೇರ್‌ಗಳ ಬೆಳೆ ಸಹ ಒಣಗಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಿರುವುದಾಗಿ ತಿಳಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಸರ್ಕಾರದಿಂದ ಯಾವುದೇ ಪರಿಹಾರ ಪಡೆಯಬೇಕೆಂದರೆ ನಿಮ್ಮ ಇಲಾಖೆ ವರದಿ ಅಂತಿಮವಾಗಿದ್ದು, ತಾಲೂಕಿನಲ್ಲಿ ಎಲ್ಲೂ ಸಹ ಬಿತ್ತನೆ ಮಾಡಿದ ಬೀಜ ಹುಟ್ಟದೇ ಇರುವುದರಿಂದ ಸಂಪೂರ್ಣ ಬರ ಸ್ಥಿತಿಯಿದ್ದು, ಈ ಬಗ್ಗೆ ಸರ್ಕಾರಕ್ಕೆ ನಿಖರವಾದ ವರದಿ ನೀಡುವಂತೆ ತಾಕೀತು ಮಾಡಿದರು.
ಕಳೆದ ವರ್ಷದ ವರದಿ ಆಧರಿಸಿ ಚಳ್ಳಕೆರೆ ತಾಲೂಕಿಗೆ 7223 ರೈತರಿಗೆ 45.61 ಕೋಟಿ ಬೆಳೆ ವಿಮೆ ಹಣ ಪಾವತಿಯಾಗಿದ್ದು, ಇದು ಜಿಲ್ಲೆಯಲ್ಲೇ ಅಧಿಕ ಎಂದರು. ಇನ್ನುಳಿದ ರೈತರಿಗೆ ಹಂತ, ಹಂತವಾಗಿ ಬೆಳೆ ವಿಮೆ ಹಣ ಅವರ ಖಾತೆಗೆ ಜಮಾವಾಗಲಿದೆ ಎಂದರು. ರೈತ ಸಿರಿ ಎಂಬ ಹೆಸರಿನಲ್ಲಿ ಸಿರಿಧಾನ್ಯ ಬೆಳೆಯುವ ನೂತನ ಯೋಜನೆ ಜಾರಿಯಲ್ಲಿದ್ದು, ಪ್ರತಿ ಹೆಕ್ಟೇರ್‌ಗೆ 10 ಸಾವಿರ ಸಹಾಯ ಧನ ಸರ್ಕಾರ ನೀಡಲಿದ್ದು, ಈಗಾಗಲೇ 1200 ರೈತರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಸೆ.15ರ ತನಕ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾಹಿತಿ ನೀಡಿ ತಾಲೂಕಿನಲ್ಲಿ ಒಟ್ಟು 224 ಶಿಕ್ಷಕರ ಹುದ್ದೆ ಖಾಲಿ ಇದ್ದು, ಆ ಪೈಕಿ 124 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಯಾವ ಶಾಲೆಯಲ್ಲೂ ಶಿಕ್ಷಕರ ಕೊರತೆ ಇಲ್ಲ. ಈ ಬಾರಿಯ ಎಸ್‌ಎಸ್‌ಎಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಚಳ್ಳಕೆರೆ ಪಡೆಯುವಂತೆ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು. ವಿವಿಧ ತರಬೇತಿ ಯೋಜನೆಯಲ್ಲಿ ತಾಲೂಕಿನ 1600 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ, 204 ಮಕ್ಕಳು ಶಾಲೆಯಿಂದ ಹೊರ ಉಳಿದಿದ್ದು, ಆ ಪೈಕಿ ಆರು ಜನರನ್ನು ಮಾತ್ರ ಶಾಲೆಗೆ ಕರೆತರಲಾಗಿದ್ದು, 198 ಮಕ್ಕಳನ್ನು ಶಾಲೆಗೆ ತರುವ ಯೋಜನೆ ಇದೆ ಎಂದರು. ತಾಲೂಕಿನಾದ್ಯಂತ 3816 ಬೈಸಿಕಲ್ ವಿತರಿಸಬೇಕಿದ್ದು, 1280 ಬೈಸಿಕಲ್ ವಿತರಿಸಲಾಗಿದೆ. 2536 ಬೈಸಿಕಲ್ಗಳನ್ನು ಶೀಘ್ರದಲ್ಲೇ ವಿತರಿಸಲಾಗುವುದು ಎಂದರು.
ಸಾರ್ವಜನಿಕರ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಹೊರಗಡೆಯಿಂದ ಔಷಧವನ್ನು ಪಡೆಯುವಂತೆ ಸಲಹೆ ನೀಡುತ್ತಾರೆ ಎಂದು ಸದಸ್ಯ ಸಮರ್ಥರಾಯ, ಜಿ.ವೀರೇಶ್, ಗದ್ದಿಗೆ ತಿಪ್ಪೇಸ್ವಾಮಿ ತಿಮ್ಮಾರೆಡ್ಡಿ, ಎಚ್.ಆಂಜನೇಯ, ತಿಪ್ಪೇಸ್ವಾಮಿ ಮುಂತಾದವರು ಆರೋಪಿಸಿದರು. ಆಡಳಿತಾಧಿಕಾರಿ ಬಸವರಾಜು ಮಾತನಾಡಿ, ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲಾ ಔಷಧಗಳನ್ನು ರೋಗಿಗಳ ಸೌಕರ್ಯಕ್ಕಾಗಿ ಪ್ರಾಮಾಣಿಕವಾಗಿ ವಿನಿಯೋಗಿಸಲಾಗುತ್ತಿದೆ. ಕೆಲವೊಮ್ಮೆ ರೋಗಿಯ ರೋಗದ ಲಕ್ಷಣ ವೀಕ್ಷಿಸಿ ಸಲಹೆ ನೀಡುವುದಾಗಿ ತಿಳಿಸಿದರು.
ಶಾಸಕ ಟಿ.ರಘುಮೂರ್ತಿ ನೂತನ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಿದ್ದು, ಅಲ್ಲಿನ ಸಿಬ್ಬಂದಿ ಹಾಗೂ ಉಪಕರಣಗಳ ಬಗ್ಗೆ ಲಿಖೀತ ಮಾಹಿತಿ ನೀಡುವಂತೆ ಸೂಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಸಹ ಇಲಾಖೆ ಮಾಹಿತಿ ನೀಡಿದರು.
ಪ್ರಭಾರ ಇಒ ಸತೀಶ್‌ಕುಮಾರ್ ಸ್ವಾಗತಿಸಿದರು. ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ನಾಗಭೂಷಣ್, ಉಪಾಧ್ಯಕ್ಷೆ ತಿಪ್ಪಮ್ಮ ಲಿಂಗಾರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಪಂ ಸದಸ್ಯರಾದ ತಿಪ್ಪಕ್ಕ, ಉಮಾ ಜನಾರ್ದನ್, ಹನುಮಕ್ಕ, ರಂಜಿತಾ, ಈ. ರಾಮರೆಡ್ಡಿ, ಕರಡಪ್ಪ, ನವೀನ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.