ಚಳ್ಳಕೆರೆ: 25 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ನಿರತರಾಗಿರುವ ಸುಕೋ ಬ್ಯಾಂಕ್ ಇದುವರೆಗೆ ಸುಮಾರು 1125 ಕೋಟಿ ರೂ.ಗಳ ವ್ಯವಹಾರ ನಡೆಸುವ ಮೂಲಕ ಸಹಕಾರಿ ಬ್ಯಾಂಕ್‌ಗಳ ಕ್ಷೇತ್ರದ ನಂ.1 ಬ್ಯಾಂಕ್ ಆಗಿದೆ ಎಂದು ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ತಿಳಿಸಿದರು.
ಬ್ಯಾಂಕ್‌ನ ಚಳ್ಳಕೆರೆ ಶಾಖೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಚಳ್ಳಕೆರೆ ನಗರದಲ್ಲಿ ಪ್ರಾರಂಭವಾದ ಸುಕೋ ಬ್ಯಾಂಕ್ ಮೇ 13ರಿಂದ ನವೀಕೃತ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಬ್ಯಾಂಕ್‌ನ ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಬ್ಯಾಂಕ್‌ನ ನವೀಕೃತ ಶಾಖೆ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಶಾಸಕ ಟಿ. ರಘುಮೂರ್ತಿ ಮೇ 13 ರಂದು ಸಂಜೆ 5:30ಕ್ಕೆ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್. ಸತೀಶ್ ಭಾಗವಹಿಸುವರು. ಚಿತ್ರದುರ್ಗ ರಸ್ತೆಯ ನೂತನ ಕಟ್ಟಡದಲ್ಲಿ ಬ್ಯಾಂಕ್‌ನ ನವೀಕೃತ ಶಾಖೆ ಕಾರ್ಯಾರಂಭ ಮಾಡಲಿದೆ. ಜಗಜೀವನರಾಮ್ ಭವನದ ಆವರಣದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಸರಿಗಮಪ ಖ್ಯಾತಿಯ ಜ್ಞಾನೇಶ್ ಬಳ್ಳಾರಿ, ಭೂಮಿಕ ಹೊಸಪೇಟೆ ಹಾಗೂ ‘ಕನ್ನಡ ಕೋಗಿಲೆ’ ಕೊಪ್ಪಳದ ಅರ್ಜುನ ಇಟಗಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು ಎಂದು ಹೇಳಿದರು.
ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಆಗ್ರಸ್ಥಾನ ಪಡೆದಿರುವ ಸುಕೋ ಬ್ಯಾಂಕ್ 1994, ಮೇ 3 ರಂದು ಸಿಂಧನೂರಿನಲ್ಲಿ ತನ್ನ ಪ್ರಥಮ ಶಾಖೆಯನ್ನು ಪ್ರಾರಂಭಿಸಿತು., ಪ್ರಸ್ತುತ ರಾಜ್ಯದಲ್ಲಿ 28 ಶಾಖೆಗಳನ್ನು ಹೊಂದಿದೆ. ಸಹಕಾರಿ ಕ್ಷೇತ್ರದಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡ ಪ್ರಥಮ ಬ್ಯಾಂಕ್ ಆಗಿ ಸುಕೋ ಬ್ಯಾಂಕ್ ಹೊರಹೊಮ್ಮಿದೆ. 2016ರ ನವೆಂಬರ್ 6 ರಂದು ಬ್ಯಾಂಕ್‌ನ ಶಾಖೆಯನ್ನು ಚಳ್ಳಕೆರೆ ನಗರದಲ್ಲಿ ಪ್ರಾರಂಭಿಸಲಾಯಿತು. ಸುಕೋ ಬ್ಯಾಂಕ್ ಈಗಾಗಲೇ 40 ಕೋಟಿ ರೂ. ವ್ಯವಹಾರ ನಡೆಸಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಪರಿಮಳ ಎಸ್. ಅಗ್ನಿಹೋತ್ರಿ ಮಾತನಾಡಿ, ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿಯವರ ಮಾರ್ಗದರ್ಶನದಲ್ಲಿ ಬ್ಯಾಂಕ್ ಮುನ್ನಡೆ ಸಾಧಿಸುತ್ತಿದೆ. ಶೀಘ್ರದಲ್ಲೇ ಜೀವವಿಮಾ ನಿಗಮದ ವ್ಯವಹಾರವನ್ನು ನಮ್ಮ ಶಾಖೆ ಮೂಲಕವೇ ನಡೆಸಲಾಗುವುದು. ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ ಕೂಡ ಇದ್ದು,ಗ್ರಾಹಕರ ಉತ್ತಮ ಸೇವೆಯೇ ನಮ್ಮ ಧೇಯವೆಂದರು.
ಸುದ್ದಿಗೋಷ್ಠಿಯಲ್ಲಿ ಮಾತೃಶ್ರೀ ಎನ್. ಮಂಜುನಾಥ, ರಾಮದಾಸ್, ಬೆಸ್ಕಾಂ ನಿವೃತ್ತ ಅಧಿಕಾರಿ ಪಿ. ರುದ್ರಮೂರ್ತಿ ಇದ್ದರು.
ವಾಣಿಜ್ಯೋದ್ಯಮ, ಕೃಷಿ, ಹೈನುಗಾರಿಕೆ ಮೊದಲಾದ ಯೋಜನೆಗಳಲ್ಲಿ ಗ್ರಾಹಕರಿಗೆ ಸಾಲ ನೀಡುವ ಮೂಲಕ ಗ್ರಾಹಕರ ನೆರವಿಗೆ ಧಾವಿಸಿದೆ. ಮುಂಬರುವ ದಿನಗಳಲ್ಲಿ ಸುಕೋ ಸೋಲಾರ್ ಶಕ್ತಿ ಯೋಜನೆಯನ್ನು ಅಳವಡಿಸಲು ಚಿಂತನೆ ನಡೆದಿದೆ.
•ಮೋಹಿತ್ ಮಸ್ಕಿ,
ಸುಕೋ ಬ್ಯಾಂಕ್ ಅಧ್ಯಕ್ಷರು.