Advertisement

ಕೋವಿಡ್ ಸೋಂಕಿತ ಕಾರ್ಮಿಕರಿಗೆ ಉತ್ತಮ ಚಿಕಿತ್ಸೆ : ಡಿಎಚ್‌ಒ

03:52 PM May 27, 2020 | Naveen |

ಚಳ್ಳಕೆರೆ: ನಗರದ ಹೊರವಲಯದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ನಲ್ಲಿರುವ ಉತ್ತರಪ್ರದೇಶ ಮೂಲದ 20 ವಲಸೆ ಕಾರ್ಮಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಎಲ್ಲಾ ಕಾರ್ಮಿಕರನ್ನು ಪ್ರತ್ಯೇಕವಾಗಿಟ್ಟು ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಎಲ್‌. ಪಾಲಾಕ್ಷ ತಿಳಿಸಿದರು.

Advertisement

ಮಂಗಳವಾರ ಬಿಸಿಎಂ ಹಾಸ್ಟೆಲ್‌ ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಯಾವ ಭಾಗದಲ್ಲೂ ಕೋವಿಡ್ ವೈರಾಣು ಗೋಚರಿಸಿಲ್ಲ. ಆದರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದವರ ಆರೋಗ್ಯವನ್ನು ಪರಿಶೀಲನೆ ನಡೆಸಿದಾಗ ಅವರಲ್ಲಿ ಪಾಸಿಟಿವ್‌ ಇರುವುದು ಕಂಡು ಬಂದಿದೆ. ಈಗಾಗಲೇ ಕ್ವಾರಂಟೈನ್‌ನಲ್ಲಿದ್ದ ಮೂವರಲ್ಲಿ ಕೋವಿಡ್ ಪಾಸಿಟಿವ್‌ ಇದ್ದು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ 20 ಜನರನ್ನು ವಿಶೇಷ ಕೊಠಡಿಯಲ್ಲಿಟ್ಟು ಚಿಕಿತ್ಸೆ ನೀಡಲಾಗುವುದು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಎನ್‌. ಪ್ರೇಮಸುಧಾ ಮಾಹಿತಿ ನೀಡಿ, ನಗರದ ವಿವಿಧ ಭಾಗಗಳಲ್ಲಿ ಕ್ವಾರಂಟೈನ್‌ ನಲ್ಲಿರುವ ಎಲ್ಲರಿಗೂ ಅಗತ್ಯವಿರುವ ಚಿಕಿತ್ಸೆ, ಊಟ, ಉಪಚಾರದ ಜೊತೆಗೆ ಮಾಸ್ಕ್, ಹ್ಯಾಂಡ್‌ಗ್ಲೌಸ್‌ ಹಾಗೂ ಸ್ಯಾನಿಟೈಸರ್‌ಗಳನ್ನು ನೀಡಲಾಗಿದೆ. ಪ್ರತಿನಿತ್ಯ ವೈದ್ಯರು ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಎಂದು ಹೇಳಿದರು. ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌, ತಾಪಂ ಇಒ ಡಾ| ಶ್ರೀಧರ್‌ ಐ. ಬಾರಕೇರ್‌, ಸಿಎಂಒ ಡಾ| ಬಸವರಾಜು, ಆರ್‌ಆರ್‌ಟಿ ತಂಡದ ಮುಖ್ಯಸ್ಥ ಪ್ರಸನ್ನಕುಮಾರ್‌, ನಾಗರಾಜ, ಚಂದ್ರಪ್ಪ, ಗಂಗಾಧರ, ಎಸ್‌.ಬಿ.ತಿಪ್ಪೇಸ್ವಾಮಿ, ಎನ್‌. ಪ್ರೇಮಕುಮಾರ್‌, ಎಚ್‌. ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next