ಚಳ್ಳಕೆರೆ:ಗರ್ಭಿಣಿಯರು, ಬಾಣಂತಿಯರು ಹಾಗೂ ನವಜಾತ ಶಿಶುಗಳ ಮರಣ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರರ ಪರಿಶ್ರಮವಿದೆ. ಅದಕ್ಕಾಗಿ ನಿಮ್ಮ ಶ್ರಮಕ್ಕೆ ತಕ್ಕಂತೆ ಸರ್ಕಾರ ಸೌಲಭ್ಯಗಳನ್ನು ನೀಡಲು ಮುಂದಾಗಬೇಕು ಎಂದು ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ಹೇಳಿದರು.
ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ತಾಲೂಕಿನ ಬಹುತೇಕ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ. ಇಲಾಖೆಯ ಮೂಲಕ ನೀಡುವ ಎಲ್ಲಾ ಸೌಲಭ್ಯಗಳನ್ನು ಗರ್ಭಿಣಿ ಮತ್ತು ಬಾಂಣತಿಯರಿಗೆ ಸಕಾಲದಲ್ಲಿ ಒದಗಿಸಿಕೊಡಲು ಶ್ರಮಿಸಬೇಕು. ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಎಐಟಿಯುಸಿ ಜಿಲ್ಲಾ ಗೌರವಾಧ್ಯಕ್ಷ ಸಿ.ವೈ. ಶಿವರುದ್ರಪ್ಪ ಮಾತನಾಡಿ, ಪ್ರತಿನಿತ್ಯ ಗ್ರಾಮೀಣ ಪ್ರದೇಶಗಳ ಜನರೊಂದಿಗೆ ಬೆರೆತು ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಸುಮಾರು 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೇವಾ ಭದ್ರತೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯವನ್ನು ಸರ್ಕಾರ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಸಿಡಿಪಿಒ ಸಿ.ಕೆ. ಗಿರಿಜಾಂಬ ಮಾತನಾಡಿ, ರಾಜ್ಯ ಸರ್ಕಾರದ ನಿಯಮಾವಳಿಗಳಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯವರಿಗೆ ಕೆಲವೊಂದು ಸೌಲಭ್ಯಗಳನ್ನು ನೀಡಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಸಲ್ಲಿಸಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.
ದೊಡ್ಡಉಳ್ಳಾರ್ತಿ ಕರಿಯಣ್ಣ, ಟಿ. ತಿಪ್ಪೇರುದ್ರಪ್ಪ, ಆರ್. ವೇದಾವತಿ, ಉಮಾದೇವಿ, ಟಿ. ರುದ್ರಮ್ಮ, ಗೌರಮ್ಮ, ಸಾವಿತ್ರಮ್ಮ, ಮುಬೀನಾ, ಪದ್ಮಾವತಿ, ದುರುಗಮ್ಮ, ರೂಪಾ ಮತ್ತಿತರರು ಇದ್ದರು.