ಕೆ.ಎಸ್. ರಾಘವೇಂದ್ರ
ಚಳ್ಳಕೆರೆ: ಕಳೆದ 8-10 ವರ್ಷಗಳಿಂದ ಬರದ ಬೇಗುದಿಗೆ ಸಿಲುಕಿ ನಲುಗಿದ್ದ ಈ ಭಾಗದ ರೈತರಲ್ಲಿ ಕಳೆದ ಎರಡು ತಿಂಗಳ ಹಿಂದೆ ಸುರಿದ ಮಳೆ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಆದರೆ ಕಳೆದ ಮೂರು ದಿನಗಳಿಂದ ಬರುತ್ತಿರುವ ಜಿಟಿ ಜಿಟಿ ಮಳೆ ಹಾಗೂ ಮೋಡ ಮುಸುಕಿದ ವಾತಾವರಣ ಶೇಂಗಾಕ್ಕೆ ಕುತ್ತು ತಂದಿಡುವ ಲಕ್ಷಣ ಕಂಡುಬರುತ್ತಿದೆ.
ಚಳ್ಳಕೆರೆ ತಾಲೂಕಿನಾದ್ಯಂತ ಜಿಟಿ ಜಿಟಿ ಮಳೆಯಾಗುತ್ತಿರುವುದು ವಿಶೇಷವಾಗಿ ಶೇಂಗಾ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ತಾಲೂಕಿನಾದ್ಯಂತ ಸುಮಾರು ಶೇ. 30 ರಷ್ಟು ಮಾತ್ರ ಶೇಂಗಾ ಬಿತ್ತನೆಯಾಗಿದೆ. ಕಳೆದ ತಿಂಗಳ ಮಳೆಯಿಂದ ಉತ್ತಮ ಫಸಲು ಕೈ ಸೇರಬಹುದು ಎಂಬ ಆಸೆ ಇಟ್ಟುಕೊಂಡಿದ್ದ ರೈತರಿಗೆ ಮೋಡ ಮುಸುಕಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆ ನಿರಾಸೆ ಮೂಡಿಸಿದೆ.
ಭೂಮಿಯಿಂದ ಶೇಂಗಾವನ್ನು ಕಿತ್ತ ಕೆಲವು ರೈತರು ನಿರಂತರ ಮಳೆಯಿಂದ ಬೀಜ, ಮೇವು ಕಪ್ಪು ಬಣ್ಣಕ್ಕೆ ತಿರುಗುವ ಆತಂಕದಲ್ಲಿದ್ದಾರೆ. ಬಣವೆಗಳಲ್ಲಿ ಹಾಕಿದ ಶೇಂಗಾಕ್ಕೆ ತಾಡಪಾಲು ಮುಚ್ಚಿ ಮಳೆಯಿಂದ ರಕ್ಷಣೆ ಮಾಡಬಹುದು. ಆದರೆ ಉಷ್ಣಾಂಶ ಹೆಚ್ಚಿ ಶೇಂಗಾ ಬೂದು ಮತ್ತು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕಪ್ಪು ಬಣ್ಣಕ್ಕೆ ತಿರುಗಿದ ಶೇಂಗಾ ಬಳ್ಳಿಯನ್ನು ದನ ಕರುಗಳು ತಿನ್ನುವುದಿಲ್ಲ. ಶೇಂಗಾದ ಬೀಜಗಳು ಕಪ್ಪಾಗುವುದರಿಂದ ಶೇಂಗಾ ಬೀಜದ ಧಾರಣೆಯಲ್ಲೂ ಕುಸಿತವಾಗುತ್ತದೆ. ಮಳೆಯ ಅವಾಂತರದಿಂದ ಅಲ್ಪಸ್ವಲ್ಪ ಬೆಳೆಯೂ ಕೈಸೇರುವುದಿಲ್ಲ ಎಂಬ ಆತಂಕ ಒಂದು ಕಡೆಯಾದರೆ, ಮತ್ತೂಂದು ಕಡೆ ಅಕಾಲಿಕ ಮಳೆಯಿಂದ ಬೀಜಗಳು ಮೊಳಕೆ ಒಡೆಯುತ್ತಿವೆ. ಅತ್ತ ಭೂಮಿಯಿಂದ ಕಿತ್ತರೂ ಕಷ್ಟ, ಭೂಮಿಯಲ್ಲೇ ಬಿಟ್ಟರೂ ಕಷ್ಟವಾಗಿದೆ ಎನ್ನುವ ಅತಂತ್ರ ಸ್ಥಿತಿಯಲ್ಲಿ ರೈತರಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ನೋವು ತೋಡಿಕೊಂಡ ಚನ್ನಮ್ಮನಾಗತಿಹಳ್ಳಿ ಗ್ರಾಮದ ರೈತ ಜಿ.ಕೆ. ರಾಘವೇಂದ್ರ, ಕಳೆದ ಐದು ವರ್ಷಗಳಿಂದ ಮಳೆ ವೈಫಲ್ಯದಿಂದ ಭೂಮಿಗೆ ಯಾವುದೇ ಫಸಲು ಹಾಕಲಿಲ್ಲ. ಈ ಬಾರಿ ಬಂದ ಮಳೆಯಿಂದ ಐದು ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದೇವೆ. ಅದರಲ್ಲೂ ಗಿಡಕ್ಕೆ ನಾಲ್ಕೈದು ಕಾಯಿ ಹಿಡಿದಿದೆ. ಅದನ್ನಾದರೂ ಉಳಿಸಿಕೊಂಡು ಹಾಕಿದ ಬಂಡವಾಳವಾದರೂ ತೆಗೆದುಕೊಳ್ಳುವ ನಿರೀಕ್ಷೆಯಲ್ಲಿದ್ದ ನಮಗೆ ಕಳೆದ ಮೂರು ದಿನಗಳಿಂದ ಬರುತ್ತಿರುವ ಮಳೆ ನಿರಾಸೆಯನ್ನುಂಟು ಮಾಡಿದೆ. ಇನ್ನೂ ಎರಡು ದಿನ ಇದೇ ರೀತಿ ಮಳೆಯಾದಲ್ಲಿ ಬೆಳೆಯೂ ಕೈಸೇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಶೇಂಗಾ ಬೆಳೆಯಿಂದ ಕೃಷಿಗಾಗಿ ಮಾಡಿರುವ ಸಾಲ ತೀರಿಸಬಹುದು ಎಂಬ ಉತ್ಸಾಹದಲ್ಲಿದ್ದ ರೈತರಿಗೆ ಜಿಟಿ ಜಿಟಿ ಮಳೆ ಶಾಪವಾಗಿ ಪರಿಣಮಿಸಿದ್ದು ಸುಳ್ಳಲ್ಲ.
ಮಳೆಯಿಂದ ರಕ್ಷಣೆ ಪಡೆಯಲು ಬಣವೆಯಲ್ಲಿ ತಾಡಪಾಲ್ ಹಾಕಿ ಶೇಂಗಾ ಬಳ್ಳಿಯನ್ನು ಮುಚ್ಚಲಾಗಿದೆ. ಅದರಿಂದ ಶೇಂಗಾ ಗಿಡಗಳು ಕಪ್ಪುಬಣ್ಣಕ್ಕೆ ತಿರುಗಿವೆ. ಇದೇ ರೀತಿ ಎರಡ್ಮೂರು ದಿನ ಮಳೆ ಬಂದಲ್ಲಿ ಶೇಂಗಾ ಮತ್ತು ಮೇವು ಇಲ್ಲದಂತಾಗುತ್ತದೆ. ಪ್ರತಿನಿತ್ಯ ಮಳೆ ಬಂದ ತಕ್ಷಣ ತಾಡಪಾಲ್ ಹಾಕುವುದು, ಮಳೆ ಬಿಟ್ಟ ನಂತರ ತೆಗೆಯುವುದೇ ಕೆಲಸವಾಗಿಬಿಟ್ಟಿದೆ.
.
ಕುಮಾರ್,
ಸಿದ್ದಾಪುರದ ಶೇಂಗಾ ಬೆಳೆಗಾರ.