ಚಳ್ಳಕೆರೆ: ಸಂಸದ ಎ. ನಾರಾಯಣಸ್ವಾಮಿಯವರ ಜನ್ಮದಿನದ ಅಂಗವಾಗಿ ಶನಿವಾರ ಅವರ ಅಭಿಮಾನಿಗಳು ಸುಮಾರು 4 ಸಾವಿರ ಜನರಿಗೆ ಹೋಳಿಗೆ ಊಟ ಬಡಿಸಿದರು.
ಬಿಜೆಪಿ ಕಾರ್ಯಾಲಯದಲ್ಲಿ ಸಂಸದರ ಮೇಲೆ ಪುಷ್ಪವೃಷ್ಟಿ ಮಾಡಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಸುಮಾರು 17 ದಿನಗಳಿಂದ ಪ್ರತಿನಿತ್ಯ 3 ಸಾವಿರ ಜನರಿಗೆ ಊಟ ಮತ್ತು ಉಪಹಾರವನ್ನು ನೀಡುವ ಮೂಲಕ ಸಂಸದರು ಜನರ ಸಂಕಷ್ಟಕ್ಕೆ ನೆರವಾಗಿದ್ದಾರೆ.
ಕೋವಿಡ್ ವೈರಾಣು ನಿಯಂತ್ರಣದ ಹಿನ್ನೆಲೆಯಲ್ಲಿ ಹಲವಾರು ಸಭೆ ನಡೆಸಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಕಳೆದ ಏ. 25ರಂದು ವಿವಿ ಸಾಗರದ ನೀರು ಹರಿಸಲು ತಡೆಯೊಡ್ಡಿದ್ದ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಚಳ್ಳಕೆರೆಗೆ ನೀರು ಹರಿಸಲು ಕಾರಣಕರ್ತರಾಗಿದ್ದಾರೆ ಎಂದರು.
ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ಬೆಳಿಗ್ಗೆ ಪಾವಗಡ ವಿಧಾನಸಭಾ ಕ್ಷೇತ್ರದಿಂದ ಪ್ರವಾಸ ಕೈಗೊಂಡಿದ್ದೆ. ಊಟದ ವ್ಯವಸ್ಥೆ ಇಂದಿಗೆ ಮುಕ್ತಾಯವಾಗಿದ್ದು, ಈ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಲು ಆಗಮಿಸಿದ ನನಗೆ ಅದ್ಧೂರಿ ಸ್ವಾಗತ ನೀಡಿದ್ದೀರಿ. ಕಳೆದ ಮೂರು ದಿನಗಳ ಹಿಂದೆ ಚಳ್ಳಕೆರೆ ತಾಲೂಕಿನಲ್ಲೂ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು. ಅಭಿವೃದ್ದಿಪರ ಚಿಂತನೆಗಳಿಗೆ ಸಹಕರಿಸಬೇಕೆಂದರು. ಜಿಲ್ಲಾ ಪಂಚಾಯತ್ ಸದಸ್ಯ ಎನ್. ಓಬಳೇಶ್, ಮುಖಂಡರಾದ ಬಾಳೆಮಂಡಿ ರಾಮದಾಸ್, ಬಿ.ಎಸ್. ಶಿವಪುತ್ರಪ್ಪ, ಸೋಮಶೇಖರ ಮಂಡಿಮಠ, ಡಿ.ಎಂ. ತಿಪ್ಪೇಸ್ವಾಮಿ, ದೇವರಾಜ, ಎಸ್. ಯಲ್ಲಪ್ಪ, ಜಯಪಾಲಯ್ಯ, ಟಿ. ನಾಗರಾಜು, ಕರೀಕೆರೆ ತಿಪ್ಪೇಸ್ವಾಮಿ, ಆರ್.ಡಿ. ಮಂಜುನಾಥ, ಕಾಂತರಾಜು, ದಿನೇಶ್ ರೆಡ್ಡಿ, ಸಿ. ದಾಸರೆಡ್ಡಿ, ಹೊನ್ನೂರು ಗೋವಿಂದಪ್ಪ, ಎನ್. ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.