Advertisement

ಪ್ಲಾಸ್ಟಿಕ್‌ ಮುಕ್ತ ನಗರಕ್ಕೆ ಶ್ರಮಿಸಿ

05:33 PM Aug 21, 2019 | Team Udayavani |

ಚಳ್ಳಕೆರೆ: ಚಳ್ಳಕೆರೆ ನಗರವನ್ನು ಸುಂದರ ನಗರವನ್ನಾಗಿಸಲು ಹಾಗೂ ಪರಿಸರವನ್ನು ಸಂರಕ್ಷಣೆ ಮಾಡುವಲ್ಲಿ ಎಲ್ಲರೂ ಸಹಕಾರ ನೀಡಬೇಕಿದೆ. ವಿಶೇಷವಾಗಿ ಚಳ್ಳಕೆರೆ ನಗರವನ್ನು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸುವ ಉದ್ದೇಶಕ್ಕೆ ನಗರಸಭೆಯ ಎಲ್ಲಾ ಸದಸ್ಯರು ಶ್ರಮಿಸಬೇಕು ಎಂದು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಇಲ್ಲಿನ ನಗರಸಭಾ ಕಾರ್ಯಾಲಯದಲ್ಲಿ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಘನತ್ಯಾಜ್ಯ ವಿಲೇವಾರಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಚಳ್ಳಕೆರೆ ನಗರದಲ್ಲಿ ಪ್ರತಿನಿತ್ಯ ಹೆಚ್ಚಿನ ಪ್ರಮಾಣದ ಕಸ ಹೊರಹೊಮ್ಮುತ್ತಿದೆ. ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ನಗರ ಸಭೆಯ ಹಳೇ ಕಾರ್ಯಾಲಯದಲ್ಲಿರುವ ಘನತ್ಯಾಜ್ಯ ಘಟಕಕ್ಕೆ ನೀಡಬೇಕಿದೆ. ಅಲ್ಲಿ ಕಸವನ್ನು ವಿಂಗಡಿಸಲಾಗುವುದು. ಇದಕ್ಕಾಗಿ ಸರ್ಕಾರ 70 ಲಕ್ಷ ರೂ. ವೆಚ್ಚದಲ್ಲಿ ನೂತನ ಅತ್ಯಾಧುನಿಕ ಘಟಕವನ್ನು ಪ್ರಾರಂಭಿಸುತ್ತಿದ್ದು, ನಗರದ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದರು.

ನಗರಸಭಾ ಸದಸ್ಯರಾದ ಎಸ್‌. ಜಯಣ್ಣ, ಸಿ. ಶ್ರೀನಿವಾಸ್‌ ಮಾತನಾಡಿ, ಪ್ರಸ್ತುತ ನಗರಸಭೆಯ ಪೌರಕಾರ್ಮಿಕರ ಮತ್ತು ವಾಹನಗಳ ಸಂಖ್ಯೆ ಕಡಿಮೆ ಇದೆ. ಅದನ್ನು ಹೆಚ್ಚಿಸಿಕೊಡುವಂತೆ ಮನವಿ ಮಾಡಿದರು. ನಗರಸಭಾ ಸದಸ್ಯ ಆರ್‌. ರುದ್ರನಾಯಕ ಮಾತನಾಡಿ, ಚಳ್ಳಕೆರೆ ನಗರದ ಎ.ಜಿ. ರಸ್ತೆಯಲ್ಲಿರುವ ಮಟನ್‌ ಮಾರುಕಟ್ಟೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಜಾಗ್ರತೆ ವಹಿಸಬೇಕು, ನಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣ, ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಸದಸ್ಯರಾದ ಎಂ.ಜೆ. ರಾಘವೇಂದ್ರ, ವಿ.ವೈ. ಪ್ರಮೋದ್‌, ವೆಂಕಟೇಶ್‌, ಗೋವಿಂದ ಮಾತನಾಡಿ, ನಗರಸಭೆಗೆ ನೂತನ ಆಧುನಿಕ ತ್ರೀಡಿ ಜೆಸಿಬಿ ಖರೀದಿಸಲು ಅನುಮತಿ ನೀಡಬೇಕೆಂದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಇನ್ನು ಕೆಲವೇ ದಿನಗಳಲ್ಲಿ ಆಡಳಿತಾಧಿಕಾರಿಗಳ ಅವಧಿ ಮುಗಿಯಲಿದೆ. ಮುಂಬರುವ ದಿನಗಳಲ್ಲಿ ಎಲ್ಲಾ ಸದಸ್ಯರು ನಗರದ ಅಭಿವೃದ್ಧಿ ದೃಷ್ಟಿಯಿಂದ ಹೊಸ ಯೋಜನೆಗಳನ್ನು ರೂಪಿಸಿ ಸರ್ಕಾರದಿಂದ ಹೆಚ್ಚಿನ ಪ್ರಮಾಣದಿಂದ ಹಣ ಪಡೆಯಲು ಅಭಿವೃದ್ಧಿ ಪ್ರೇರಕರಾಗುವಂತೆ ಮನವಿ ಮಾಡಿದರು.

ಸಭೆಯಲ್ಲಿ ನಗರಸಭಾ ಸದಸ್ಯರಾದ ಮಂಜುಳಾ, ಸುಮಾ ಭರಮಣ್ಣ, ಸಾವಿತ್ರಿ, ಸುಜಾತಮ್ಮ, ಕವಿತಾ ಬೋರಣ್ಣ, ಎಇಇ ಶ್ಯಾಮಲಾ, ವಿನಯ್‌, ಜೆಇ ಲೋಕೇಶ್‌, ವ್ಯವಸ್ಥಾಪಕ ನಾಸೀರ್‌ ಭಾಷ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next