ಚಳ್ಳಕೆರೆ: ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್ ಜಾರಿಯಲ್ಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮತಿ ಪಡೆದು ಕೆಲವೊಂದು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ನಿಯಮ ಮೀರದಂತೆ ಎಲ್ಲರೂ ಸಹಕಾರ ನೀಡಬೇಕು. ನಿಯಮ ಮೀರಿದವರ ವಿರುದ್ಧ ಕಠಿಣ ಕಾನೂನು, ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ ಎಂದು ಡಿವೈಎಸ್ಪಿ ಎಸ್. ರೋಷನ್
ಜಮೀರ್ ಮನವಿ ಮಾಡಿದರು.
ಡಿವೈಎಸ್ಪಿ ಕಚೇರಿ ಆವರಣದಲ್ಲಿ ನಗರದ ಕಿರಾಣಿ ಅಂಗಡಿ, ಹಾರ್ಡ್ ವೇರ್, ಬೇಕರಿ, ಹೋಟೆಲ್, ತರಕಾರಿ, ಮಟನ್‌ಸ್ಟಾಲ್, ಔಷಧ ಅಂಗಡಿ ಮಾಲೀಕರ ಸಭೆ ನಡೆಸಿ ಅವರು ಮಾತನಾಡಿದರು. ಅಗತ್ಯ ವಸ್ತುಗಳು ಸಕಾಲದಲ್ಲಿ ದೊರೆಯುವಂತೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಆದರೆ ಬಹುತೇಕ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆಯು ತ್ತಿರುವ ಆರೋಪಗಳು ಕೇಳಿ ಬಂದಿವೆ. ಆದ್ದರಿಂದ ಇನ್ನು ಮುಂದೆ ಸರ್ಕಾರದ ನಿಯಮಗಳನ್ನು ಅನುಷ್ಠಾನಗೊಳಿಸುವಲ್ಲಿ ಇಲಾಖೆ ಹೆಚ್ಚಿನ ಗಮನ ಹರಿಸಲಿದೆ ಎಂದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ವ್ಯಾಪಾರ, ವ್ಯವಹಾರಗಳಿಗೆ ಅವಕಾಶ ನೀಡುವ ಉದ್ದೇಶ ಜನರಿಗೆ ತೊಂದರೆಯಾಗದಿರಲಿ, ನೀವು ಸಹ ನಷ್ಟಕ್ಕೆ ಒಳಗಾಗಬಾರದು ಎಂಬ ಸದುದ್ದೇಶ ನಮ್ಮದು. ಆದರೆ ನಿಯಮಗಳನ್ನು ಉಲ್ಲಂಘಿ ಸಿದರೆ ಸರ್ಕಾರ ಸುಮ್ಮನೆ ಇರುವುದಿಲ್ಲವೆಂದರು. ಪೌರಾಯುಕ್ತ ಪಿ.ಪಾಲಯ್ಯ ಮಾತನಾಡಿ, ನಾವೆಲ್ಲರೂ ನಮ್ಮ ಆರೋಗ್ಯದ ಬಗ್ಗೆಹೆಚ್ಚು ಗಮನ ನೀಡಬೇಕಿದೆ. ವಿಶ್ವದಲ್ಲಿ ಸಾವಿರಾರು ಸಾವುಗಳು ಸಂಭವಿಸಿದ್ದರೂ ಭಾರತದ ಪ್ರಧಾನಮಂತ್ರಿಗಳ ದಿಟ್ಟ ನಿಲುವಿನಿಂದ ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ನಾವೆಲ್ಲರೂ ಸಾಮಾಜಿಕ ಅಂತರ ಕಾಪಾಡಿದಲ್ಲಿ ಮಾತ್ರ ಎಲ್ಲರಿಗೂ ನೆಮ್ಮದಿಯ ಬದುಕು ಸಿಗುತ್ತದೆ ಎಂದು ತಿಳಿಸಿದರು. ವೃತ್ತ ನಿರೀಕ್ಷಕ ಈ. ಆನಂದ, ಪಿಎಸ್‌ಐಗಳಾದ ನೂರ್ ಅಹಮ್ಮದ್, ರಾಘವೇಂದ್ರ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಗುರುನಾಥ ಭಟ್, ಉಪಾಧ್ಯಕ್ಷ ಎಂ.ಪಿ. ಗುರುರಾಜ್ ಮತ್ತಿತರರು ಇದ್ದರು.