Advertisement

ಬಾಕಿಯುಳಿದ ಬೆಳೆ ವಿಮೆ ಪಾವತಿಗೆ ಆಗ್ರಹ

12:15 PM Jun 01, 2019 | Team Udayavani |

ಚಳ್ಳಕೆರೆ: 2017-18 ಮತ್ತು 2018-19ನೇ ಸಾಲಿನ ಬೆಳೆ ವಿಮೆ ಪರಿಹಾರದ ಹಣ ಇದುವರೆಗೂ ರೈತರಿಗೆ ದೊರಕಿಲ್ಲ. ಕೂಡಲೇ ಬಾಕಿ ನಿಂತಿರುವ ಬೆಳೆ ವಿಮೆ ಹಣ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಹೇಳಿದರು.

Advertisement

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಇಲಾಖೆಯ ಸೂಚನೆಯಂತೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಕೇವಲ ಕೆಲವೇ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರೈತರಿಗೆ ಹಣ ಪಾವತಿಯಾಗಿದ್ದು ಬಿಟ್ಟರೆ ಬಹುತೇಕ ರೈತರ ಖಾತೆಗೆ ಕೇಂದ್ರ ಸರ್ಕಾರದ ಹಣ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹತ್ತಾರು ವರ್ಷಗಳ ನಿರಂತರ ಬರಗಾಲದಿಂದ ತಾಲ್ಲೂಕಿನ ರೈತರು ಬದುಕಿನ ಹೋರಾಟ ನಡೆಸುತ್ತಿದ್ದು, ಕೃಷಿ ಚಟುವಟಿಕೆಗಳನ್ನು ನಡೆಸುವಲ್ಲಿ ನಿರಾಸಕ್ತರಾಗಿದ್ದಾರೆ. ಪ್ರತಿವರ್ಷವೂ ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ಸ್ಥಿತಿಯಲ್ಲಿ ಸರ್ಕಾರ ಎರಡು ವರ್ಷಗಳ ಬೆಳೆ ವಿಮೆ ಪರಿಹಾರ ನೀಡದೆ ರೈತ ಸಮುದಾಯವನ್ನು ಸಂಕಷ್ಟಕೀಡು ಮಾಡಿದ್ದು, ಬೆಳೆ ವಿಮೆ ಪರಿಹಾರದ ಹಣ ಕೂಡಲೇ ಬಿಡುಗಡೆ ಮಾಡದೇ ಇದ್ದಲ್ಲಿ ತಾಲ್ಲೂಕು ಕಚೇರಿ ಮತ್ತು ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಿದರು.

ಇನ್ನು ಕೆಲವೇ ದಿನಗಳಲ್ಲಿ ರೈತರು ಮುಂಗಾರು ಬಿತ್ತನೆ ಮಾಡಬೇಕಿದ್ದು, ಬೀಜ, ಗೊಬ್ಬರ, ಕ್ರಿಮಿನಾಶಕ ಕೊಳ್ಳಲು ರೈತರಲ್ಲಿ ಹಣವಿಲ್ಲ. ರೈತರ ಸಾಲ ಮನ್ನಾ ಬಗ್ಗೆಯೂ ಸಹ ಸರ್ಕಾರ ಅಸ್ಪಷ್ಟ ನೀತಿ ತಾಳಿದೆ. ಯಾವುದೇ ಬ್ಯಾಂಕ್‌ನಲ್ಲೂ ಸಹ ರೈತರಿಗೆ ಸಾಲ ನೀಡಲು ಹಿಂಜರಿಯುತ್ತಿದ್ದಾರೆ. ಕನಿಷ್ಟ ಪಕ್ಷ ರೈತರ ಬೆಳೆ ವಿಮೆ ಹಣವಾದರೂ ಅವರ ಖಾತೆಗೆ ಜಮಾವಾದಲ್ಲಿ ರೈತರು ಬಿತ್ತನೆ ಮಾಡಲು ಅನುಕೂಲವಾಗುತ್ತದೆ. ಒಂದು ವಾರದೊಳಗೆ ತಾಲೂಕು ಆಡಳಿತ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಬೆಳೆ ವಿಮೆ ಪಾವತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಾಲೂಕು ಹಾಗೂ ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿಯಲು ರೈತರು ಹಿಂಜರಿಯುವುದಿಲ್ಲ ಎಂದರು.

ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರ್‌ ಮಾತನಾಡಿ, ರೈತರು ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿ ಒತ್ತಾಯಪಡಿಸಿದ ಹಿನ್ನೆಲೆಯಲ್ಲಿ ಮೇ 30 ರೊಳಗೆ ಬೆಳೆ ವಿಮೆ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಿಸುವ ಭರವಸೆಯನ್ನು ಸರ್ಕಾರದ ನೀಡಿತ್ತು. ಆದರೆ, ಇದುವರೆಗೂ ಸರ್ಕಾರದಿಂದ ಈ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಆದ್ದರಿಂದ 10ದಿನದೊಳಗೆ ಹಣ ಜಮಾವಾಗುವ ಸಾಧ್ಯತೆ ಇದ್ದು, ಅಲ್ಲಿಯ ತನಕ ರೈತರು ಸಹಕಾರ ನೀಡಬೇಕು ಎಂದರು.

Advertisement

ಸಹಾಯಕ ಕೃಷಿ ನಿರ್ದೇಶಕ ಎನ್‌. ಮಾರುತಿ ಮಾತನಾಡಿ, ತಾಲೂಕಿನ 40 ಗ್ರಾಪಂ ವ್ಯಾಪ್ತಿಯಲ್ಲಿ 5 ಗ್ರಾಪಂ ವ್ಯಾಪ್ತಿಯ 7,309 ಜನರಿಗೆ 12.06 ಕೋಟಿ ರೂ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈಗಾಗಲೇ ಜಮಾವಾಗಿದೆ. ಹಂತ ಹಂತವಾಗಿ ರೈತರ ಬೆಳೆ ವಿಮೆ ಹಣವನ್ನು ಸರ್ಕಾರ ಪಾವತಿ ಮಾಡುತ್ತಾ ಬಂದಿದೆ. ಪ್ರಸ್ತುತ ಬಾಕಿ ಉಳಿದ ಎಲ್ಲಾ ರೈತರಿಗೂ ಬೆಳೆ ಪರಿಹಾರದ ಹಣ ದೊರಕಲಿದೆ ಎಂದು ಭರವಸೆ ನೀಡಿದರು.

ಪ್ರಗತಿಪರ ಆರ್‌.ಎ. ದಯಾನಂದಮೂರ್ತಿ, ಎಸ್‌. ನಾಗರಾಜು ಇತರರು ಮಾತನಾಡಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್. ತಿಪ್ಪೇಸ್ವಾಮಿ, ಜಿ.ಟಿ. ಮಂಜುನಾಥ, ಎಚ್. ರಾಮಚಂದ್ರಪ್ಪ, ಆರ್‌. ರಾಜಣ್ಣ, ಜಯಶೀಲರಾವ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next