ಚಳ್ಳಕೆರೆ: ನಗರದ ಚಿತ್ರದುರ್ಗ ರಸ್ತೆ ಮತ್ತು ಖಾಸಗಿ ಬಸ್ ನಿಲ್ದಾಣದ ಬಳಿ ನಗರಸಭೆಯ ಒಟ್ಟು ಏಳು ಮಳಿಗೆಗಳು ಶಿಥಿಲಗೊಂಡಿದ್ದು, ಯಾವುದೇ ಸಂದರ್ಭದಲ್ಲಿ ಬೀಳುವ ಸ್ಥಿತಿಯಲ್ಲಿವೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶಿಫಾರಸು ಪರಿಗಣಿಸಿ ಶನಿವಾರ ಮಳಿಗೆಗಳ ಮಾಲೀಕರಿಗೆ ಮಾಹಿತಿ ನೀಡಿ ಮಳಿಗೆಗಳನ್ನು ಖಾಲಿ ಮಾಡಿಸಿ ಬೀಗ ಹಾಕಲಾಗಿದೆ ಎಂದು ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ತಿಳಿಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳ ಹಿಂದೆಯೇ ಸಂಬಂಧಪಟ್ಟ ಮಳಿಗೆಗಳ ಮಾಲೀಕರಿಗೆ ಮಾಹಿತಿ ನೀಡಿದ್ದರೂ ಮಳಿಗೆಗಳನ್ನು ತೆರವುಗೊಳಿಸಲಿಲ್ಲ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರವರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸ್ಪಷ್ಟವಾಗಿ ವರದಿ ನೀಡಿದ್ದು, ಏಳು ಮಳಿಗೆಗಳು ಯಾವ ಸಮಯದಲ್ಲಾದರೂ ಕುಸಿಯುವ ಸಂದರ್ಭವಿದೆ ಎಂದಿದ್ದಾರೆ. ಚಳ್ಳಕೆರೆ ನಗರದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಕೆಲವೆಡೆ ಗುಡಿಸಲುಗಳಿಗೆ ನೀರು ನುಗ್ಗಿದ್ದರೆ, ಕೆಲವೆಡೆ ಮಳಿಗೆಗಳು ಕುಸಿಯುವ ಹಂತ ತಲುಪಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರಸಭೆ ಕಂದಾಯಾಧಿಕಾರಿ ವಿ. ಈರಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ತೆರಳಿ ಮಳಿಗೆಯಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಿ ಬೀಗ ಹಾಕಿಸಿದ್ದಾರೆ ಎಂದರು.
ಮಳಿಗೆಗಳಿರುವ ರಸ್ತೆಯಲ್ಲಿ ಸದಾ ಕಾಲ ಸಾರ್ವಜನಿಕರು ಹಾಗೂ ವಾಹನಗಳು ನಿರಂತರವಾಗಿ ಓಡಾಡುತ್ತಿದ್ದು, ಮಳಿಗೆ ಕುಸಿದು ಬಿದ್ದರೆ ಪ್ರಾಣಾಪಾಯವಾಗುವ ಸಂದರ್ಭವಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಗದಲ್ಲಿ ನಾಮಫಲಕವನ್ನೂ ಹಾಕಲಾಗಿದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ನಗರಸಭೆ ಹಲವಾರು ಕಾರ್ಯ ಯೋಜನೆಗಳನ್ನು ರೂಪಿಸಲಾಗಿದೆ. ಸಾರ್ವಜನಿಕರು ನಗರಸಭೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಮಳಿಗೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅವರು ನ್ಯಾಯಾಲಯದ ಮೆಟ್ಟಿಲೇರಿ ಕಟ್ಟಡವನ್ನು ಕೆಡವದಂತೆ ಆದೇಶ ತಂದಿದ್ದಾರೆ. ಹಾಗಾಗಿ ಸಾರ್ವಜನಿಕರ ಪ್ರಾಣ ರಕ್ಷಣೆಗೋಸ್ಕರ ನಗರಸಭೆ ಆಡಳಿತ ನ್ಯಾಯಾಲಯದ ತೀರ್ಪನ್ನು ಗೌರವಿಸಿ ಕಟ್ಟಡವನ್ನು ಕೆಡವದೆ ಮಳಿಗೆಯಲ್ಲಿರುವ ವಸ್ತುಗಳನ್ನು ಹೊರಗಿಟ್ಟು ಮಳಿಗೆಗೆ ಬೀಗ ಹಾಕಿಸಿದೆ.
ಮಳಿಗೆ ಬಳಿ ಯಾರೂ ಓಡಾಡದಂತೆ ನಾಮಫಲಕವನ್ನೂ ಹಾಕಲಾಗಿದೆ ಎಂದರು. ಕಳೆದ ಕೆಲವು ವರ್ಷಗಳಿಂದ ಮಳಿಗೆ ಬಾಡಿಗೆದಾರರು ಹಾಗೂ ನಗರಸಭೆ ಮಧ್ಯೆ ಕಟ್ಟಡ ತೆರವುಗೊಳಿಸುವ ಬಗ್ಗೆ ತಿಕ್ಕಾಟ ನಡೆಯುತ್ತಿತ್ತು. ನಗರಸಭೆಯ ಆಡಳಿತ ನ್ಯಾಯಾಲಯದ ತೀರ್ಪನ್ನು ಗೌರವಿಸಿ ಕೆಲವು ವರ್ಷಗಳ ಕಾಲ ಬಾಡಿಗೆದಾರರಿಗೆ ಅವಕಾಶ ಕಲ್ಪಿಸಿತ್ತು. ಆದರೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರವರು ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಿಥಿಲಗೊಂಡ ಬಗ್ಗೆ ವರದಿ ನೀಡಿದ್ದರು. ಆ ವರದಿ ಅನ್ವಯ ನಗರಸಭೆ ಕ್ರಮ ಕೈಗೊಂಡಿದೆ.