ಚಳ್ಳಕೆರೆ: ಸಮಾಜದ ಎಲ್ಲಾ ವರ್ಗಗಳನ್ನು ಸಮಾನತೆಯಿಂದ ಕಾಣುವ ಅವಕಾಶವನ್ನು ಕಾನೂನು ಕಲ್ಪಿಸಿಕೊಟ್ಟಿದೆ. ಸುಖೀ ಜೀವನಕ್ಕೆ ಕಾನೂನು ಅಡಿಪಾಯ ಎಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧಿಧೀಶ ದೇವೇಂದ್ರ ಪಂಡಿತ್ ಹೇಳಿದರು.
ತಾಲೂಕಿನ ಹೆಗ್ಗೆರೆ ಗ್ರಾಮದ ಪ್ರಕಾಶ್ ಸ್ಪಾಂಜ್ ಐರನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಆವರಣದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಪಾಲನೆ ಮಾಡದೆ ನಿರ್ಲಕ್ಷಿಸುವವರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು, ಕಾರ್ಮಿಕರನ್ನು ಮತ್ತು ಶಾಲಾ ಮಕ್ಕಳನ್ನು ಕರೆದೊಯ್ಯಬಾರದು. ಮೋಟಾರು ವಾಹನ ಕಾಯ್ದೆ ಪ್ರಕಾರ ಸರಕು ಸಾಗಾಣಿಕೆ ವಾಹನಗಳನ್ನು ಸರಕು ಸಾಗಾಣಿಕೆಗಾಗಿ ಮಾತ್ರ ಉಪಯೋಗಿಸಬೇಕು. ಕಾರ್ಮಿಕರನ್ನು ಮತ್ತು ಮಕ್ಕಳನ್ನು ಇಂತಹ ವಾಹನಗಳಲ್ಲಿ ಕರೆತರುವುದು ಕಾನೂನು ಬಾಹಿರ. ಯಾವುದೇ ರೀತಿ ಅಪಘಾತ ಉಂಟಾದಲ್ಲಿ ನೊಂದವರು ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.
ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಮಾತನಾಡಿ, ಯಾವುದೇ ಹಂತದಲ್ಲಿ ಕಾನೂನು ತನ್ನ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಕಾನೂನನ್ನು ವ್ಯವಸ್ಥಿತವಾಗಿ ಪರಿಪಾಲನೆ ಮಾಡಿದರೆ ಅದರ ಮೌಲ್ಯ ಹೆಚ್ಚಾಗುತ್ತದೆ. ಸರಕು ಸಾಗಾಣಿಕೆ ವಾಹನಗಳು ಕೇವಲ ಸಾಮಗ್ರಿಗಳನ್ನು ಸಾಗಿಸಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಆದರೆ ಕೆಲವೊಮ್ಮೆ ಚಾಲಕರು ಹಣದಾಸೆಗಾಗಿ ಪ್ರಯಾಣಿಕರನ್ನು ಕರೆದ್ಯೊಯುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರೇ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಶೇಖ್ ಶಫೀವುಲ್ಲಾ ಮಾತನಾಡಿ, ಕಾರ್ಮಿಕರ ಸೌಲಭ್ಯಕ್ಕಾಗಿ ಅನೇಕ ನಿಯಮಗಳನ್ನು ಕಾರ್ಮಿಕ ಇಲಾಖೆ ಜಾರಿಗೆ ತಂದಿದೆ. ಪ್ರತಿಯೊಬ್ಬ ಕಾರ್ಮಿಕ ಇಲಾಖೆಯ ಗುರುತಿನ ಚೀಟಿಯನ್ನು ಪಡೆದರಷ್ಟೇ ಸೌಲಭ್ಯ ಪಡೆಯಲು ಅರ್ಹನಾಗುತ್ತಾನೆ. ಪ್ರಸ್ತುತ ಜಾರಿಯಲ್ಲಿರುವ ಎಲ್ಲಾ ಕಾನೂನುಗಳು ಕಾರ್ಮಿಕರ ಹಿತರಕ್ಷಣೆಯನ್ನು ಕಾಪಾಡುವುದರಲ್ಲಿ ಯಶಸ್ವಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ನಾಗರಾಜು, ಕಾರ್ಯದರ್ಶಿ ತಿಪ್ಪೇಸ್ವಾಮಿ, ಹನುಮಂತಪ್ಪ, ಪ್ರಕಾಶ್ ಸ್ಪಾಂಜ್ ಐರನ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ರಾಜೇಂದ್ರಕುಮಾರ್ ಭಾಗವಹಿಸಿದ್ದರು.