ಚಳ್ಳಕೆರೆ: ಸಂವಿಧಾನ ರೂಪಿಸಿರುವ ಎಲ್ಲಾ ಕಾನೂನುಗಳ ಉದ್ದೇಶ ಸಮಾನತೆಯೇ ಆಗಿದೆ. ಕಾನೂನು ಹಾಗೂ ಸಂವಿಧಾನ ಪರಸ್ಪರ ಪೂರಕವಾಗಿವೆ ಎಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾ ಧೀಶ ದೇವೇಂದ್ರ ಪಂಡಿತ್ ಹೇಳಿದರು.
ಇಲ್ಲಿನ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಸಂವಿಧಾನ ಬದ್ಧವಾಗಿರುವ ಎಲ್ಲಾ ಕಾನೂನುಗಳು ನಮ್ಮೆಲ್ಲರ ಬದುಕಿಗೆ ಗಟ್ಟಿಯಾದ ನೆಲೆಯನ್ನು ಒದಗಿಸಿವೆ. ಯಾರು ಕಾನೂನನ್ನು ಗೌರವಿಸುತ್ತಾರೋ ಅವರು ಯಾವುದೇ ಸಮಸ್ಯೆಗಳಿಲ್ಲದೆ ಮತ್ತು ಭಯವಿಲ್ಲದೆ ಉತ್ತಮ ಜೀವನ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಲ್ಲಿ ಮಾತ್ರ ಕಾನೂನಿನ ಬಗ್ಗೆ ಸ್ಪಷ್ಟ ಅರಿವಿದೆ ಎನ್ನಲಾಗುತ್ತಿದೆ. ಆದರೆ ಗ್ರಾಮೀಣ ಭಾಗಗಳ ಜನರು ಸಹ ಕಾನೂನಿನ ಪರಿಮಿತಿಗಳನ್ನು ಅರಿಯಲು ಹಾಗೂ ಅವುಗಳನ್ನು ಜಾರಿಗೊಳಿಸಲು ಬೇಕಾಗಿರುವ ಎಲ್ಲಾ ರೀತಿಯ ಅಂಶಗಳನ್ನು ಮನಗಂಡಿದ್ದಾರೆ. ನ್ಯಾಯಾಂಗ ಇಲಾಖೆ ಗ್ರಾಮೀಣ ಭಾಗಗಳಲ್ಲೂ ಸಹ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಜನರಿಗೆ ಕಾನೂನಿನ ಬಗ್ಗೆ ಹಲವಾರು ಉಪಯುಕ್ತ ಮಾಹಿತಿಯನ್ನು ನೀಡಿದೆ ಎಂದು ತಿಳಿಸಿದರು.
ಸಂವಿಧಾನ, ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಉಪನ್ಯಾಸ ನೀಡಿದ ಎಂ.ಪಿ. ಮಹೇಶ್, ಭಾರತೀಯ ಸಂವಿಧಾನ ನಮ್ಮೆಲ್ಲರ ಬದುಕಿನ ರಕ್ಷಣಾ ಕವಚವಾಗಿದೆ. ನಾವೆಲ್ಲರೂ ಸಮಾನ ರೀತಿಯ ಹಕ್ಕುಗಳನ್ನು ಪಡೆಯಲು ಅದರಿಂದ ಸಾಧ್ಯವಾಗಿದೆ. ಹಕ್ಕುಗಳನ್ನು ಪಡೆದ ರೀತಿಯಲ್ಲೇ ನಮ್ಮ ಪಾಲಿನ ಕರ್ತವ್ಯವನ್ನೂ ಪ್ರಾಮಾಣಿಕವಾಗಿ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು,ಉಪಾಧ್ಯಕ್ಷ ಡಿ.ಬಿ. ಬೋರಯ್ಯ, ಕಾರ್ಯದರ್ಶಿ ಕೆ. ಹನುಮಂತಪ್ಪ, ಹಿರಿಯ ವಕೀಲರಾದ ದೊಡ್ಡರಂಗಪ್ಪ, ಜಿ.ಎಸ್. ಶರಣಪ್ಪ, ಎಂ.ಪಿ. ಮಹೇಶ್, ಹನುಮಂತಪ್ಪ, ಕುಮಾರ್, ನಾಗರಾಜು, ಪೆನ್ನಪ್ಪ, ಪ್ರಭಾಕರ, ತಿಪ್ಪೇಸ್ವಾಮಿ ಮೊದಲಾದವರು ಭಾಗವಹಿಸಿದ್ದರು.