ಚಳ್ಳಕೆರೆ: ಜನಸ್ಪಂದನ ಕಾರ್ಯಕ್ರಮದಿಂದ ಸಾರ್ವಜನಿಕರು ಸರ್ಕಾರಕ್ಕೆ ಸಂಬಂಧಪಟ್ಟ ಯಾವುದೇ ದಾಖಲಾತಿಗಳು, ಇನ್ನಿತರೆ ವಿಚಾರಗಳ ಬಗೆಹರಿಯದೇ ಇದ್ದಲ್ಲಿ ಸಭೆಯಲ್ಲಿಯೇ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳುವಂತೆ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ತಿಳಿಸಿದರು.
ತಳಕು ಹೋಬಳಿಯ ದೊಣೆಹಳ್ಳಿ ಗ್ರಾಮದಲ್ಲಿ ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಚಳ್ಳಕೆರೆ ತಾಲೂಕಿನ ಈ ಹೋಬಳಿ ಕೇಂದ್ರದ ಬಹುತೇಕ ಗ್ರಾಮಗಳು ಆಂಧ್ರ ಪ್ರದೇಶದ ವ್ಯಾಪ್ತಿಗೆ ಬರುತ್ತಿದ್ದು, ಅಲ್ಲಿನ ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಹಿಂಜರಿಯದೆ ನೇರವಾಗಿ ಸಭೆಯಲ್ಲಿ ಭಾಗವಹಿಸಿ ಸಮಸ್ಯೆ ತಿಳಿಸಿದಲ್ಲಿ ಇಲ್ಲಿರುವ ಅಧಿಕಾರಿಗಳ ಸಹಕಾರ ಪಡೆದು ಪರಿಹಾರ ನೀಡಲಾಗುವುದು. ಈ ಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿ ಕಾರಿಗಳು ಸಹ ಇದ್ದು, ಇದು ಜನರಿಗೆ ಹೆಚ್ಚಿನ ರೀತಿಯಲ್ಲಿ ಉಪಯುಕ್ತವಾಗುತ್ತದೆ ಎಂದರು.
ಸಭೆಯಲ್ಲಿ ಗ್ರಾಮದ ವೃದ್ಧಾಪ್ಯ ವೇತನವೂ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪ್ರತಿ ನೀಡಲಾಯಿತು. ತಾಲೂಕು ಆಡಳಿತವೇ ನಿಮ್ಮ ಗ್ರಾಮಕ್ಕೆ ಬಂದಿದ್ದು, ಇದರ ಪೂರ್ಣ ಪ್ರಮಾಣದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಸದಸ್ಯ ತಿಮ್ಮಾರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರು ತಾಲೂಕು ಕಚೇರಿ ಹಾಗೂ ಇತರೆ ಕಚೇರಿಗೆ ಭೇಟಿ ನೀಡಿದರೆ, ಅಧಿಕಾರಿಗಳು ಸಿಗುವುದಿಲ್ಲವೆಂಬ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಸಿಬ್ಬಂದಿ ವರ್ಗವೂ ಸಹ ಸ್ಪಂದಿಸುತ್ತಿಲ್ಲವೆಂಬ ಮಾಹಿತಿ ಇದೆ. ಇಂದಿನ ಸಭೆಯಲ್ಲಿರುವ ಎಲ್ಲಾ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ವಿಚಾರದಲ್ಲಿ ಸದಾ ಜಾಗೃತರಾಗಿರಬೇಕು. ಕಾರಣ, ಗ್ರಾಮೀಣ ಭಾಗದಲ್ಲಿ ಹೆಚ್ಚು ತೊಂದರೆಯಲ್ಲಿರುವ ಬಡವರೇ ಕಚೇರಿಗಳಿಗೆ ಅಲೆಯುತ್ತಾರೆ. ಇವರ ಕಷ್ಟಗಳ ಬಗ್ಗೆ ಪರಿಹಾರ ಹುಡುಕುವುದು ಎಲ್ಲಾ ಅಧಿಕಾರಿಗಳ ಆದ್ಯ ಕರ್ತವ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಂದಾಯಾ ಧಿಕಾರಿ ಮಹಮ್ಮದ್ ರಫೀ, ಇಂದಿನ ಸಭೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ನಿವೇಶನ, ಮನೆ, ರಸ್ತೆ ಮುಂತಾದ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ಜಮೀನುಗಳ ಖಾತೆ ಹಾಗೂ ವರ್ಗಾವಣೆ ಸಂಬಂಧಪಟ್ಟಂತೆ ಕೆಲವೊಂದು ಸ್ಪಷ್ಟ ಮಾಹಿತಿ ನೀಡಬೇಕು. ಬೆಳೆ ವಿಮೆ ಸಂಬಂಧಪಟ್ಟಂತೆ ತಿದ್ದುಪಡಿ ಇದ್ದಲ್ಲಿ ಅದನ್ನು ಪರಿಶೀಲಿಸಲಾಗುವುದು ಎಂದರು.
ಪ್ರಭಾರ ಸಿಡಿಪಿಒ ಮೋಹನ್‌ಕುಮಾರಿ, ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ಲೋಕೋಪಯೋಗಿ ಇಂಜಿನಿಯರ್ ಸತ್ಯಪ್ಪ, ಪರಿಶಿಷ್ಟ ವರ್ಗದ ಕಲ್ಯಾಣಾಧಿ ಕಾರಿ ಮಾಲತಿ, ಕೃಷಿ ಅಧಿಕಾರಿ ಮೋಹನ್‌ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು