ಚಳ್ಳಕೆರೆ: ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳು ನಿಯಮಬದ್ಧವಾಗಿ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಹೇಳಿದರು.
ತಾಲೂಕಿನ ತಳಕು ಗ್ರಾಮದ ವಾಲ್ಮೀಕಿ ಭವನದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಅರಿತು ಪರಿಹಾರ ನೀಡುವ ನಿಟ್ಟಿನಲ್ಲಿ ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಪ್ರತಿಯೊಂದು ಹಂತದಲ್ಲೂ ನಿರ್ಲಕ್ಷ್ಯ ತಾಳಿರುವುದು ಎದ್ದು ಕಾಣುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಅಸಮರ್ಪಕ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲಾಗುವುದು. ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಾಗದೇ ತಿಂಗಳುಗಟ್ಟಲೆ ಗ್ರಾಮೀಣ ಭಾಗದ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ಬೇಸರ ತರಿಸಿದೆ. ಸರ್ಕಾರ ಕುಡಿಯುವ ನೀರಿಗಾಗಿ ಎಷ್ಟು ಹಣ ಬೇಕಾದರೂ ನೀಡಲು ಸಿದ್ಧವಿದೆ. ಅದನ್ನು ಬಳಸಿಕೊಂಡು ಗ್ರಾಪಂಗಳು ಪಾರದರ್ಶಕವಾಗಿ ಆಡಳಿತ ನಡೆಸಬೇಕು ಎಂದು ತಾಕೀತು ಮಾಡಿದರು.
ಗ್ರಾಮೀಣ ಭಾಗಗಳ ಸ್ವತ್ಛತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬರುವಂತಾಗಿದೆ. ಕೂಡಲೇ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ವ್ಯಾಪ್ತಿಯ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಸ್ವತ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.
ತಳಕು ಮತ್ತು ಬೇಡರೆಡ್ಡಿಹಳ್ಳಿ ಆಸ್ಪತ್ರೆ ಸೇರಿದಂತೆ ಇನ್ನಿತರ ಆಸ್ಪತ್ರೆಗಳಲ್ಲಿ ರಾತ್ರಿ ವೇಳೆಯಲ್ಲಿ ವೈದ್ಯರು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಬೇಡರೆಡ್ಡಿಹಳ್ಳಿ ವೈದ್ಯರು ಬೆಳಿಗ್ಗೆ 11 ಗಂಟೆಗೆ ಬಂದು ಮಧ್ಯಾಹ್ನ ಹೊರಟು ಹೋಗುತ್ತಾರೆಂಬ ದೂರು ಸಾರ್ವಜನಿಕರಿಂದ ಕೇಳಿಬಂದಿದೆ. ತಳಕು ಪ್ರಾಥಮಿಕ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರು, ಸಿಬ್ಬಂದಿ ಇರುವುದಿಲ್ಲವೆಂಬ ಆರೋಪವಿದೆ. ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ತ್ವರಿತಗತಿಯಲ್ಲಿ ಚಿಕಿತ್ಸೆ ದೊರಕಿದರೆ ಗಾಯಾಳುವನ್ನು ರಕ್ಷಿಸಬಹುದು. ಆದರೆ ಪ್ರತಿಯೊಂದಕ್ಕೂ ಚಳ್ಳಕೆರೆ ಆಸ್ಪತ್ರೆಗೆ ಹೋಗಬೇಕಾಗಿದೆ. ತಳಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆಯಲ್ಲಿ ವೈದ್ಯರು ಕಾರ್ಯ ನಿರ್ವಹಿಸುವಂತಾಗಬೇಕೆಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿ ಕಾರಿ ಡಾ| ಎನ್. ಪ್ರೇಮಸುಧಾ, ಪ್ರಸ್ತುತ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿದ್ದಾರೆ. ಹೆಚ್ಚಿನ ಸಂಖ್ಯೆಯ ರೋಗಿಗಳು ಆಗಮಿಸುತ್ತಿರುವುದರಿಂದ ಹೆಚ್ಚುವರಿ ವೈದ್ಯರನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ರೈತರಿಗೆ ಸಕಾಲದಲ್ಲಿ ಸಬ್ಸಿಡಿ ಹಣ ದೊರೆಯುವಂತೆ ಮಾಡಬೇಕು. ಕೃಷಿ ಇಲಾಖೆಯಿಂದ ರೈತರು ಬಯಸುವ ಸಾಮಗ್ರಿಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಸೂಚನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಆರ್. ಸೂರಮ್ಮ ಮಾತನಾಡಿ, ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸಲು ಜನಸಂಪರ್ಕ ಸಭೆ ನಡೆಸಲಾಗಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಲ್ಲಾ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕೆಂದರು. ಜನಸಂಪರ್ಕ ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ| ಶ್ರೀಧರ ಎಸ್.ಬಾರಕೇರ್, ತಾಪಂ ಸದಸ್ಯರಾದ ಈ. ರಾಮ ರೆಡ್ಡಿ, ತಿಪ್ಪಮ್ಮ, ನಾರಾಯಣ ರೆಡ್ಡಿ, ಮಂಜುನಾಥ, ಓಬಣ್ಣ, ಕೋಡಿಹಳ್ಳಿ ಸೋಮಶೇಖರ್, ಲಿಂಗಾರೆಡ್ಡಿ ಮೊದಲಾದವರು ಭಾಗವಹಿಸಿದ್ದರು.