Advertisement

ಶಿಕ್ಷಣದಿಂದಷ್ಟೇ ಉತ್ತಮ ಭವಿಷ್ಯ

02:46 PM Aug 28, 2019 | Naveen |

ಚಳ್ಳಕೆರೆ: ಶಿಕ್ಷಣದಿಂದ ಮಾತ್ರ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯ. ಕ್ರೀಡೆಯಿಂದ ಸಹ ಅತ್ಯುತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶವಿದೆ ಎಂದು ತಾಲೂಕು ಪಂಚಾಯತ್‌ ಅಧ್ಯಕ್ಷೆ ವಿಜಯಲಕ್ಷ್ಮೀ ನಾಗಭೂಷಣ ಹೇಳಿದರು.

Advertisement

ಇಲ್ಲಿನ ಬಿ.ಎಂ, ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಮಂಗಳವಾರ ಕಸಬಾ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯಾವುದೇ ಹಂತದಲ್ಲೂ ಕ್ರೀಡಾ ಸ್ಫೂರ್ತಿಯನ್ನು ಮರೆಯದೆ ಉತ್ತಮವಾಗಿ ಆಟವಾಡುವ ಮೂಲಕ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ ಎಂಬುದನ್ನು ಮರೆಯಬಾರದು ಎಂದರು.

ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳು ಎಲ್ಲಾ ರಂಗದಲ್ಲೂ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಚಳ್ಳಕೆರೆ ತಾಲೂಕಿನಲ್ಲೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಸಾಧನೆ ಮಾಡುವ ಮೂಲಕ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂತಹ ಗೌರವ ಎಲ್ಲಾ ಕ್ರೀಡಾಪಟುಗಳಿಗೂ ಸಿಗುವಂತಾಗಲಿ ಎಂದು ಆಶಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್‌. ವೆಂಕಟೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ 35 ಶಾಲೆಗಳ 850ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಸಹ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸುವ ಸಲುವಾಗಿ ಇಲಾಖೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಯಾವುದೇ ಕ್ರೀಡೆ ಇರಲಿ, ಅದು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾಗಿರುತ್ತದೆ ಎಂದರು.

ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ತಾಲೂಕು ಪಂಚಾಯತ್‌ ಸದಸ್ಯ ಜಿ. ವೀರೇಶ್‌, ಕ್ರೀಡೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನವಾಗುತ್ತದೆ. ಸಮಾಜ ಕ್ರೀಡಾಪಟುಗಳ ಬಗ್ಗೆ ಹೆಚ್ಚು ಗೌರವವನ್ನು ಹೊಂದಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಎಚ್.ಆರ್‌.ಎನ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಜ್ಞಾನಧಾರ ಪ್ರೌಢಶಾಲೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಶ್ರೀವತ್ಸ ಮಾತನಾಡಿ, ವಿದ್ಯಾರ್ಥಿಗಳು ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಲು ಹಲವಾರು ರೀತಿಯ ಪ್ರಯತ್ನ ಮಾಡುತ್ತಾರೆ. ಅದೇ ರೀತಿ ಕ್ರೀಡೆಯಲ್ಲೂ ಸಾಮರ್ಥ್ಯವನ್ನು ಪ್ರದರ್ಶಿಸಲು ಅನೇಕ ಕ್ರೀಡೆಗಳಲ್ಲಿ ಪರಿಣಿತಿ ಹೊಂದಬೇಕಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಜನಪ್ರಿಯವಾದ ಅನೇಕ ಕ್ರೀಡೆಗಳು ಇಂದಿಗೂ ಮೌಲ್ಯ ಕಳೆದುಕೊಂಡಿಲ್ಲ. ಪ್ರತಿಯೊಬ್ಬ ಕ್ರೀಡಾಪಟು ಸಮಾಜದ ಆಸ್ತಿ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ವಿ. ಶ್ರೀನಿವಾಸಮೂರ್ತಿ ಹಾಗೂ ಗಟ್ಟಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್‌ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಗಿರಿಯಪ್ಪ, ಸದಸ್ಯೆ ರಂಜಿತಾ, ನಗರಸಭಾ ಸದಸ್ಯ ವೈ. ಪ್ರಕಾಶ್‌, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಟಿ. ವೀರಭದ್ರಪ್ಪ, ಜ್ಞಾನಧಾರ ವಿದ್ಯಾಸಂಸ್ಥೆ ಕಾರ್ಯದರ್ಶಿ ಲಕ್ಷ್ಮೀ ಶ್ರೀವತ್ಸ, ಮುಖ್ಯೋಪಾಧ್ಯಾಯರಾದ ಸಂಪತ್‌ಕುಮಾರ್‌, ಜೆ.ಕೆ. ಶ್ರೀನಿವಾಸಮೂರ್ತಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್‌.ಒ. ತಿಪ್ಪೇಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next