Advertisement

ಇಂದಿರಾ ಕ್ಯಾಂಟೀನ್‌ ಆರಂಭ

01:30 PM Aug 16, 2019 | Team Udayavani |

ಚಳ್ಳಕೆರೆ: ಸಮಾಜದಲ್ಲಿ ಎರಡು ಹೊತ್ತಿನ ಊಟವನ್ನು ಮಾಡುವ ಸ್ಥಿತಿ ಇಲ್ಲ. ಬಡತನ ಸಂಕಷ್ಟಕ್ಕೆ ಸಿಲುಕಿಸಿದ್ದು, ನಾನಾ ಕಾರಣಗಳಿಂದಾಗಿ ಹಸಿವು ಮತ್ತು ಬಡತನ ಸದಾ ಕಾಲ ಬೆನ್ನ ಹಿಂದೆ ಸುತ್ತುತ್ತಿರುತ್ತದೆ. ಇಂತಹ ಜನರಿಗೆ ಕಡೇ ಪಕ್ಷ ಕಡಿಮೆ ದರದಲ್ಲಾದರೂ ಊಟ ಒದಗಿಸುವ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿದೆ ಎಂದು ಸಂಸದ ಎ. ನಾರಾಯಣಸ್ವಾಮಿ ಹೇಳಿದರು.

Advertisement

ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್‌ ಅನ್ನು ಗುರುವಾರ ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು. ಗುಣಮಟ್ಟ ಹಾಗೂ ಸ್ವಚ್ಚತೆಯಿಂದ ಕೂಡಿದ ಆಹಾರವನ್ನು ಜನತೆಗೆ ನೀಡಬೇಕು. ಈ ನಿಟ್ಟಿನಲ್ಲಿ ನಗರಸಭೆ ಪೌರಾಯುಕ್ತರು ಸೂಕ್ತ ಗಮನ ಹರಿಸಬೇಕು. ಆಗ ಹಸಿದ ಹೊಟ್ಟೆಗೆ ಉತ್ತಮ ಆಹಾರ ನೀಡಿದ ಸಂತೃಪ್ತಿ ದೊರೆಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಇಂದಿರಾ ಕ್ಯಾಂಟೀನ್‌ ಮೂಲಕ ನಗರದಲ್ಲಿರುವ ಸಾವಿರಾರು ಕೂಲಿ ಕಾರ್ಮಿಕರು ಹಾಗೂ ಬಡವರು ತಮಗೆ ಬರುವ ಅಲ್ಪ ಹಣದಲ್ಲೇ ಉಪಹಾರ ಮತ್ತು ಊಟವನ್ನು ಮಾಡುವ ಮೂಲಕ ತಮ್ಮ ಹಸಿವನ್ನು ನೀಗಿಸಿಕೊಳ್ಳಬೇಕು. ಗುಣಮಟ್ಟಕ್ಕೆ ಸಂಬಂಧಪಟ್ಟಂತೆ ಜಾಗರೂಕತೆ ವಹಿಸಲಾಗುವುದು. ಯಾವುದೇ ಹಂತದಲ್ಲೂ ವ್ಯಕ್ತಿ ಅನ್ನವಿಲ್ಲದೆ ಹಸಿವಿನಿಂದ ಕೊರಗಿ ರೋಗಿಯಾಗಿ ನರಳುವ ಪರಿಸ್ಥಿತಿ ಉಂಟಾಗದಂತೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಮಾತನಾಡಿ, ಸಂಸದರು ಮತ್ತು ಶಾಸಕರು ನೀಡಿರುವ ಎಲ್ಲಾ ಸಲಹೆ-ಸೂಚನೆಗಳನ್ನು ಪಾಲಿಸಲಾಗುವುದು. ಯಾವುದೇ ಹಂತದಲ್ಲೂ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು. ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜು, ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ, ಡಿವೈಎಸ್ಪಿ ರೋಷನ್‌ ಜಮೀರ್‌, ತಾಲೂಕು ಪಂಚಾಯತ್‌ ಅಧ್ಯಕ್ಷೆ ವಿಜಯಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಗಿರಿಯಪ್ಪ, ತಾಪಂ ಸದಸ್ಯರಾದ ಎಚ್. ಆಂಜನೇಯ, ಜಿ. ವೀರೇಶ್‌, ನಗರಸಭಾ ಸದಸ್ಯರಾದ ಎಸ್‌. ಜಯಣ್ಣ, ಶಿವಕುಮಾರ್‌, ಪಾಲಮ್ಮ, ಸುಜಾತಾ, ನಿರ್ಮಲಾ, ನಾಗಮಣಿ, ಜಿಪಂ ಮಾಜಿ ಸದಸ್ಯ ಜಯಪಾಲಯ್ಯ, ಆರ್‌. ಜಗದೀಶ್‌, ಮೋಹನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next