ಚಳ್ಳಕೆರೆ: ರಾಜ್ಯದಲ್ಲಿ ಶತಮಾನ ಪೂರೈಸಿದ 100 ಶಾಲೆಗಳಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿ ಆಚರಿಸಲು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಚಿತ್ರದುರ್ಗ ಜಿಲ್ಲೆಯ ಮೂರು ಶಾಲೆಗಳು ಶತಮಾನೋತ್ಸವ ಆಚರಿಸಲಿದ್ದು, ಅದರಲ್ಲಿ ಮೊಟ್ಟ ಮೊದಲನೆಯದಾಗಿ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶಪ್ಪ ಹೇಳಿದರು.
ಹಿರೇಹಳ್ಳಿ ಶಾಲೆಯಲ್ಲಿ ಶನಿವಾರ ನಡೆದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಶಾಲೆ 1881ರಲ್ಲಿ ಪ್ರಾರಂಭವಾಗಿದ್ದು, 138 ವರ್ಷಗಳನ್ನು ಪೂರೈಸಿದೆ. ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ, ಚಿತ್ರದುರ್ಗ ತಾಲೂಕಿನ ಗುಡ್ಡದರಂಗವ್ವನಹಳ್ಳಿಯ ಶಾಲೆಗಳೂ ಶತಮಾನೋತ್ಸವ ಸಂಭ್ರಮಾಚರಣೆಗೆ ಆಯ್ಕೆಯಾಗಿವೆ. ಶತಮಾನೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಶಿಕ್ಷಣ ಇಲಾಖೆ ಸಹಕಾರ ನೀಡಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ಮಾತನಾಡಿ, ನಾನು ಕಲಿತ ಶಾಲೆಯಲ್ಲೇ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡುವ ಅವಕಾಶ ದೊರತಿದ್ದಕ್ಕೆ ಸಂತಸವಾಗಿದೆ. ಇನ್ನೂ ನೂರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಭ್ಯಾಸ ಮಾಡಿ ಉನ್ನತ ಹುದ್ದೆ ಪಡೆದಿದ್ದಾರೆ. ಅವರೆಲ್ಲರನ್ನೂ ಸಂಪರ್ಕಿಸಿ ಶತಮಾನೋತ್ಸವ ಆಚರನೆಗೆ ಸಹಕಾರ ನೀಡುವಂತೆ ಕೋರಬೇಕು. ಶತಮಾನೋತ್ಸವ ಕಾರ್ಯಕ್ರಮ ಶಿಕ್ಷಣ ಇಲಾಖೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟರು.
ಶಾಲಾ ಮುಖ್ಯ ಶಿಕ್ಷಕ ವೈ. ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಈ ಕಾರ್ಯಕ್ರಮವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲು ಚಿಂತನೆ ನಡೆಸಿದ್ದಾರೆ. ಇದೇ ತಿಂಗಳ 31ರಂದು ಮತ್ತೂಮ್ಮೆ
ಸಭೆ ಕರೆಯಲಾಗಿದೆ. ಅಂದು ಹಳೆ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು, ಶಾಲೆಯ ಹಿತೈಷಿಗಳು ಆಗಮಿಸಿ ಸಲಹೆ-ಸೂಚನೆ ನೀಡಬೇಕು. ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಮತ್ತು ನಾಡಿನ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಉದ್ದೇಶವಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಆರ್.ಟಿ. ಬಸವರಾಜು, ಎಸ್‌ಡಿಎಂಸಿ ಅದ್ಯಕ್ಷ ಕೆ.ಒ. ತಿಪ್ಪೇಸ್ವಾಮಿ, ಹಳೇ ವಿದ್ಯಾರ್ಥಿ ವೀರೇಶ್, ಸಿಆರ್‌ಪಿ ಎನ್. ಮಾರಣ್ಣ, ಶಿಕ್ಷಕರಾದ ತಿಪ್ಪೇಸ್ವಾಮಿ, ಸಿದ್ದೇಶಪ್ಪ, ವಿಷ್ಣುವದರ್ನ್, ಬಿ. ನಿಜಲಿಂಗಪ್ಪ, ಟಿ.ವಿ. ತಿಪ್ಪೇಸ್ವಾಮಿ, ಭಾರತಿ, ಫೌಜಿಯಾ ಬೇಗಂ, ಎಲ್. ಸ್ಮಿತಾ, ಕೆ.ಬಿ. ತಿಪ್ಪಮ್ಮ, ದಿವ್ಯಜ್ಯೋತಿ, ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.