Advertisement

ನೌಕರ ಸಂಘದ ಅಧ್ಯಕ್ಷರ ನಾಮಪತ್ರವೇ ತಿರಸ್ಕೃತ!

11:48 AM Jun 05, 2019 | Team Udayavani |

ಚಳ್ಳಕೆರೆ: ಸರ್ಕಾರಿ ನೌಕರರ ಸಂಘದ ಚಳ್ಳಕೆರೆ ಶಾಖೆಯ ನೂತನ ನಿರ್ದೇಶಕರ ಆಯ್ಕೆಗೆ ಜೂ. 13 ರಂದು ಚುನಾವಣೆ ನಡೆಯಲಿದ್ದು, ಮಂಗಳವಾರ ನಾಮಪತ್ರ ಪರಿಶೀಲನೆ ನಡೆಸಲಾಯಿತು. ಸಂಘದ ಹಾಲಿ ಅಧ್ಯಕ್ಷ ಬಿ.ಎಸ್‌. ಮಂಜುನಾಥ್‌ ಅವರ ನಾಮಪತ್ರ ತಿರಸ್ಕೃತವಾಗಿದ್ದು, ಉಳಿದ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಯಾಗಿರುವ ನಿವೃತ್ತ ಕಂದಾಯಾಧಿಕಾರಿ ಸಿ.ಡಿ.ಕೆ ಸ್ವಾಮಿ ತಿಳಿಸಿದ್ದಾರೆ.

Advertisement

ಯುಜಿಸಿ ಸೌಲಭ್ಯ ಪಡೆಯುವವರು ಚುನಾವಣೆಗೆ ಸ್ಪರ್ಧಿಸಲು ಅರ್ಹರಲ್ಲ ಎಂಬ ನಿಯಮವಿದೆ. ಬಿ.ಎಸ್‌. ಮಂಜುನಾಥ್‌ ಅವರು ಎಚ್ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಯುಜಿಸಿ ಸೌಲಭ್ಯ ಪಡೆಯುತ್ತಿದ್ದಾರೆ. ಆದ್ದರಿಂದ ಚುನಾವಣಾ ನಿಯಮಗಳ ಪ್ರಕಾರ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣಾಧಿಕಾರಿ ವಿರುದ್ಧ ಕಿಡಿ: ತಮ್ಮ ನಾಮಪತ್ರವನ್ನು ತಿರಸ್ಕೃತಗೊಳಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿ.ಎಸ್‌. ಮಂಜುನಾಥ್‌, ಸಂಘದ ರಾಜ್ಯಾಧ್ಯಕ್ಷರು ಕೇವಲ ಹೊಸದುರ್ಗ ತಾಲೂಕಿಗೆ ಈ ನಿಯಮವನ್ನು ಸೀಮಿತಗೊಳಿಸಿ ಸೂಚನೆ ನೀಡಿದ್ದಾರೆ. ಆದರೆ ನಿಖರ ಮಾಹಿತಿ ನೀಡದ ಚುನಾವಣಾಧಿಕಾರಿಗಳು ನನ್ನ ನಾಮಪತ್ರವನ್ನು ತಿರಸ್ಕೃತಗೊಳಿಸಿದ್ದಾರೆ. ಈ ಬಗ್ಗೆ ನನಗೆ ಇದುವರೆಗೂ ರಾಜ್ಯ ಘಟಕದ ಪದಾಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ. ರಾಜ್ಯದ ಬೇರೆ ತಾಲೂಕು ಕೇಂದ್ರಗಳಲ್ಲಿ ಯುಜಿಸಿ ಸೌಲಭ್ಯ ಪಡೆಯುವ ವಿವಿಧ ಕಾಲೇಜುಗಳ ಪ್ರಾಧ್ಯಾಪಕರ ನಾಮಪತ್ರಗಳು ಸಿಂಧುವಾಗಿದ್ದು, ನನ್ನ ನಾಮಪತ್ರ ತಿರಸ್ಕೃತಗೊಂಡಿರುವುದರ ಉದ್ದೇಶವೇ ತಿಳಿಯುತ್ತಿಲ್ಲ ಎಂದು ದೂರಿದರು.

ರಾಜಕೀಯ ಒತ್ತಡದಿಂದ ಚುನಾವಣಾಧಿಕಾರಿಗಳು ಈ ರೀತಿ ವರ್ತಿಸಿದ್ದಾರೆ. ಹಾಗಾಗಿ ನಾಮಪತ್ರ ತಿರಸ್ಕೃತಗೊಂಡ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದರು.

ಸರ್ಕಾರಿ ನೌಕರರ ಸಂಘದ ಚುನಾವಣಾಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸಂಘದ ನಿರ್ದೇಶನವನ್ನು ಪಾಲಿಸುತ್ತಿದ್ದೇನೆ. ಯುಜಿಸಿ ಸೌಲಭ್ಯ ಪಡೆಯುವವರು ಚುನಾವಣೆಗೆ ಸ್ಪರ್ಧಿಸಲು ಆರ್ಹರಲ್ಲ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಬಿ.ಎಸ್‌. ಮಂಜುನಾಥ್‌ ಅವರ ನಾಮಪತ್ರವನ್ನು ತಿರಸ್ಕೃತಗೊಳಿಸಲಾಗಿದೆಯೇ ವಿನಃ ಇದರಲ್ಲಿ ಯಾವುದೇ ರೀತಿಯ ರಾಜಕೀಯ ದುರುದ್ದೇಶ ಇಲ್ಲ.
ಸಿ.ಡಿ.ಕೆ ಸ್ವಾಮಿ,
ಚುನಾವಣಾಧಿಕಾರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next