Advertisement

ಗಿರಿಜನ ಸಂಸ್ಕೃತಿ-ಸಂಸ್ಕಾರ ಅಳವಡಿಸಿಕೊಳ್ಳಿ

06:37 PM Dec 14, 2019 | Team Udayavani |

ಚಳ್ಳಕೆರೆ: ವಿದೇಶಿಗರೂ ಗೌರವಿಸುವಂತಹ ಸಂಸ್ಕೃತಿ ಮತ್ತು ಸಂಸ್ಕಾರ ಭಾರತದಲ್ಲಿದ್ದು, ಇದಕ್ಕೆ ಮೂಲ ಕಾರಣ ಪೂರ್ವಜರು ನೀಡಿದ ಮಾರ್ಗದರ್ಶನ ಎಂದು ಜಿಪಂ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ ತಿಳಿಸಿದರು.

Advertisement

ನನ್ನಿವಾಳ ಗ್ರಾಪಂ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಗಿರಿಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದಲೇ ಪೂರ್ವಜರು ತಮ್ಮದೆಯಾದ ಬುಡಕಟ್ಟು ಸಂಸ್ಕೃತಿ ರೂಢಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಇಂದಿಗೂ ಸಹ ಈ ಸಂಸ್ಕೃತಿಯ ವೈಭವ ಕಡಿಮೆಯಾಗಿಲ್ಲ. ಈ ಭಾಗದ ಸುತ್ತಮುತ್ತ ಸುಮಾರು 35 ಹಟ್ಟಿಗಳಲ್ಲಿ ಬುಡಕಟ್ಟು ಸಂಸ್ಕೃತಿಯ ಆರಾಧಕರಿದ್ದು, ಗಿರಿಜನ ಉತ್ಸವದ ಮೂಲಕ ಇವರೆಲ್ಲರಲ್ಲೂ ಆತ್ಮವಿಶ್ವಾಸ ಹುಟ್ಟಿಸುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದೆ ಎಂದರು.

ಗಿರಿಜನ ಉತ್ಸವದ ಮೂಲ ಉದ್ದೇಶ ಶಿಕ್ಷಣ ಹಾಗೂ ಇತರೆ ಸೌಲಭ್ಯಗಳಿಂದ ದೂರ ಉಳಿದಿರುವ ಈ ಜನರಿಗೆ ಸರ್ಕಾರದ ಸವಲತ್ತು ನೀಡುವ ಬಗ್ಗೆ ಇಂತಹ ಕಾರ್ಯಕ್ರಮದ ಮೂಲಕ ಜಾಗೃತಿಗೊಳಿಸಲಾಗುತ್ತಿದೆ ಎಂದರು.

ಗಿರಿಜನ ಬಂಧುಗಳು ತಮ್ಮ ಸಂಪ್ರದಾಯ ಮತ್ತು ಪದ್ಧತಿ ಪಾಲಿಸುವುದರೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾಗಬೇಕು ಎಂದರು. ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಮಾತನಾಡಿ, ತಾಲೂಕು ಹಾಗೂ ಹೋಬಳಿ ಮಟ್ಟ ಕೇಂದ್ರಗಳಲ್ಲಿ ಇಂತಹ ಜನಪರ ಉತ್ಸವ ನಡೆಸುವ ಮೂಲಕ ಗಿರಿಜನ ಬಂಧುಗಳಿಗೆ ಆತ್ಮವಿಶ್ವಾಸ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿ ಉತ್ಸವ ಕೈಗೊಳ್ಳುವ ಮೂಲಕ ಆ ಭಾಗದ ಜನರನ್ನು ಜಾಗೃತಗೊಳಿಸಲಾಗುತ್ತಿದೆ ಎಂದರು.

ನನ್ನಿವಾಳ ತಾಪಂ ವ್ಯಾಪ್ತಿಯಲ್ಲಿ ಗಿರಿಜನರ ಸಂಖ್ಯೆ ಹೆಚ್ಚಿದ್ದು, ಅವರೆಲ್ಲರಿಗೂ ಸರ್ಕಾರದಿಂದ ನಿಯಮಾನುಸಾರ ನೀಡಬೇಕಾದ ಸೌಲಭ್ಯ ನೀಡಲಾಗುವುದು ಎಂದರು.

Advertisement

ಗ್ರಾಪಂ ಅಧ್ಯಕ್ಷೆ ಛಾಯಮ್ಮ ತಿಪ್ಪೇಸ್ವಾಮಿ ಮಾತನಾಡಿ, ನನ್ನಿವಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಿರಿಜನ ಬಂಧುಗಳು ಅಧಿಕ ಸಂಖ್ಯೆಯಲ್ಲಿದ್ದು, ಇಂದಿಗೂ ಸಹ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್ಯಕ್ರಮ ಎಲ್ಲೆಡೆ ಏರ್ಪಡಿಸುವ ಮೂಲಕ ಗಿರಿಜನರ ಬದುಕಿಗೆ ನೆರವಾಗಬೇಕು ಎಂದರು.

ಡಾ.ಎಚ್‌.ಗುಡ್ಡದೇಶ್ವರಪ್ಪ, ದೊರೆ ಅಪ್ಪಣ್ಣ, ರಾಜಣ್ಣ, ನಾಗರಾಜು, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ, ಪಿಡಿಒ ಇಯಾತ್‌ ಪಾಷಾ, ನೃತ್ಯ ನಿಕೇತನ ಸಂಚಾಲಕ ಯು. ಎಸ್‌.ವಿಷ್ಣುಮೂರ್ತಿರಾವ್‌, ಪ್ರಾಚಾರ್ಯೆ ಸುಧಾಮೂರ್ತಿ, ಆರ್‌.ದ್ಯಾಮಯ್ಯ, ಶಿವರಾಜ್‌ ಹುಲ್ಲೆಹಾಳ್‌ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next