ಚಳ್ಳಕೆರೆ: ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಚಳ್ಳಕೆರೆ ನಗರವೂ ಒಂದು. ನಗರದ ವಿಸ್ತೀರ್ಣ ಹೆಚ್ಚಾಗಿದ್ದು ಹೊರಭಾಗದಲ್ಲೂ ಸಹ ಹಲವಾರು ಬಡಾವಣೆಗಳು ನಿರ್ಮಾಣವಾಗುತ್ತಿವೆ. ಪ್ರತಿನಿತ್ಯ ನಗರ ವ್ಯಾಪ್ತಿಯಲ್ಲಿ ಅಂದಾಜು 5 ಟನ್‌ಗೂ ಕಸ ಸಂಗ್ರಹಣೆಯಾಗುತ್ತಿದ್ದು, ಇದನ್ನು ಸಂಸ್ಕರಣೆ ಮಾಡುವ ಉದ್ದೇಶದಿಂದ ಶಾಸಕ ಟಿ. ರಘುಮೂರ್ತಿಯವರ ಮಾರ್ಗದರ್ಶನದಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ಕಸ ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ತಿಳಿಸಿದರು.
ನಗರದ ಬಳ್ಳಾರಿ ರಸ್ತೆಯ ನಗರಸಭೆಯ ಕಸ ಸಂಗ್ರಹ ಕೇಂದ್ರದ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿರುವ ಕಸ ಸಂಸ್ಕರಣಾ ಘಟಕದ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ಹಸಿ ಮತ್ತುಒಣ ಕಸವನ್ನು ಪತ್ಯೇಕವಾಗಿ ನಗರಸಭೆಯ ವಾಹನಗಳಲ್ಲಿ ಮನೆಗಳಿಂದ ಸಂಗ್ರಹಿಸಿ ಈ ಘಟಕದಲ್ಲಿ ದಾಸ್ತಾನು ಮಾಡಲಾಗುವುದು. ನಂತರ ಅವುಗಳನ್ನು ಸಂಸ್ಕರಣೆ ಮಾಡಲಾಗುವುದು ಎಂದರು.
ನಗರದ ಎಲ್ಲಾ ಮನೆಗಳಿಗೆ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸುವ ನೀಲಿ ಮತ್ತು ಹಸಿರು ಬಣ್ಣದ ಡಬ್ಬಗಳನ್ನು ಈಗಾಗಲೇ ವಿವಿಧ ವಾರ್ಡ್‌ಗಳಲ್ಲಿ ವಿತರಣೆ ಮಾಡಲಾಗಿದೆ. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲಾಗಿದೆ. ಈ ನಿಟ್ಟಿನಲ್ಲಿ ನಗರಸಭೆಯ ನೈರ್ಮಲ್ಯ ಇಂಜಿನಿಯರ್ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳ ತಂಡ ಹಾಗೂ ಸದಸ್ಯರ ಸಹಕಾರದೊಂದಿಗೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ನಗರದ ಹಲವಾರು ಬಡಾವಣೆಗಳಲ್ಲಿ ಕಸ ವಿಂಗಡಣೆಯನ್ನು ಮನೆಗಳ ಹಂತದಲ್ಲೇ ಮಾಡಲಾಗುತ್ತಿದೆ. ಇವುಗಳನ್ನು ನಗರಸಭೆ ಕಸದ ವಾಹನಗಳ ಮೂಲಕ ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಹಸಿ ಮತ್ತು ಒಣ ಕಸ ವಿಂಗಡಣೆಯನ್ನು ಮಾಡುವ ವಿಧಾನವನ್ನು ಜಾರಿಗೆ ತಂದಿದ್ದು, ನಾಗರಿಕರು ಈ ಯೋಜನೆಯ ಯಶಸ್ಸಿಗೆ ಸಹಕರಿಸಬೇಕು. ಮನೆಗಳ ಹಂತದಲ್ಲೇ ಕಸವನ್ನು ವಿಂಗಡಿಸಿ ನಗರಸಭೆ ವಾಹನಗಳಿಗೆ ನೀಡಬೇಕು ಎಂದು ಮನವಿ ಮಾಡಿದ್ಧಾರೆ.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಗಣೇಶ್, ತಿಪ್ಪೇಸ್ವಾಮಿ, ಹೊನ್ನೇಶ್ ಮತ್ತಿತರರು ಇದ್ದರು.