ಚಳ್ಳಕೆರೆ: 40 ವರ್ಷಗಳ ಹೋರಾಟದ ಫಲವಾಗಿ ಚಳ್ಳಕೆರೆ ಕ್ಷೇತ್ರಕ್ಕೆ ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಬಿಡುವ ಕಾರ್ಯಕ್ಕೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಜಲಸಂಪನ್ಮೂಲ ಸಚಿವರೇ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ನೀರು ಚಳ್ಳಕೆರೆ ಕ್ಷೇತ್ರಕ್ಕೆ ತಲುಪುವ ಮೊದಲೇ ಹಿರಿಯೂರು ಕ್ಷೇತ್ರದ ಶಾಸಕಿ ಲಕ್ಷಾಂತರ ರೈತರ ಕನಸನ್ನು ಭಗ್ನಗೊಳಿಸಿದ್ದಾರೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಇಲ್ಲಿನ ಶಾಸಕರ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಆದೇಶ ನೀಡಿದ ನಂತರವೂ ಈ ರೀತಿ ಏಕಾಏಕಿ ನೀರು ಹರಿಸುವಿಕೆಯನ್ನು ತಡೆಯುವ ಅಧಿಕಾರವನ್ನು ಶಾಸಕಿ ನೀಡಿದವರ್ಯಾರು ಎಂದು ಪ್ರಶ್ನಿಸಿದರು. 1980ರಿಂದ ರೈತ ಸಂಘ ನೀರಿಗಾಗಿ ಹೋರಾಟ ನಡೆಸಿದೆ. ಎಲ್ಲರ ಪರಿಶ್ರಮ ಹಾಗೂ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಸಂಸದ ಎ. ನಾರಾಯಣಸ್ವಾಮಿ ಈ ಭಾಗಕ್ಕೆ ನೀರು ನೀಡುವ ನಿಟ್ಟಿನಲ್ಲಿ ಶ್ರಮ ವಹಿಸಿದ್ದಾರೆ. ಸರ್ಕಾರ ಕೂಡಲೇ ತನ್ನ ಆದೇಶಕ್ಕೆ ಬದ್ದವಾಗಿ ನೀರು ಬಿಡದೇ ಇದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸರ್ಕಾರಕ್ಕೆ ಸವಾಲು ಹಾಕುವ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಆದೇಶಕ್ಕೆ ಗೌರವ ಕೊಡದ ಶಾಸಕಿ ಜನಸೇವೆ ಮಾಡಲು ಸಾಧ್ಯವೇ, ಎರಡೂ ತಾಲೂಕುಗಳ ರೈತರ ಹಿತವನ್ನು ಕಾಪಾಡುವ ಚಿಂತನೆ ಅವರಲ್ಲಿ ಇರದೇ ಇರುವುದು ಖಂಡನಿಯ ಎಂದರು.
ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಮಾತನಾಡಿ, ಸರ್ಕಾರ ಆದೇಶ ನೀಡಿ ನೀರು ಬಿಟ್ಟು ನಾಲ್ಕು ದಿನಗಳಾದ ಚಳ್ಳಕೆರೆ ಗಡಿಗೂ ನೀರು ಬರುವ ಹಂತದಲ್ಲೇ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ವಿವಿ ಸಾಗರಕ್ಕೆ ತೆರಳಿ ಗೇಟ್ ಮುಚ್ಚುವ ಮೂಲಕ ಲಕ್ಷಾಂತರ ರೈತರಿಗೆ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಅವರು ಮೊದಲೇ ಸರ್ಕಾರದೊಂದಿಗೆ ಚರ್ಚಿಸಬೇಕಿತ್ತು. ನೀರು ಬಿಟ್ಟ ನಂತರ ಹಿರಿಯೂರು ಕ್ಷೇತ್ರದ 80 ಗ್ರಾಮಗಳಿಗೆ ನೀರಿನ ಸೌಲಭ್ಯ ದೊರಕಿದೆ. ಇದನ್ನು ಮರೆತು ಚಳ್ಳಕೆರೆ ಕ್ಷೇತ್ರಕ್ಕೆ ನೀರು ಬಿಡುವುದಿಲ್ಲವೆಂಬ ಅವರ ವಾದ ಹಾಸ್ಯಸ್ಪದವೆಂದರು. ಜಿಪಂ ಮಾಜಿ ಸದಸ್ಯ ರಂಗಸ್ವಾಮಿ, ಜಯಕುಮಾರ್, ಚನ್ನಕೇಶವ, ಎಸ್.ಎಚ್. ಸೈಯ್ಯದ್, ಆರ್. ಪ್ರಸನ್ನಕುಮಾರ್ ಇತರರು ಇದ್ದರು.