ಚಳ್ಳಕೆರೆ: ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದಾಗ ಸಿಗುವ ತೃಪ್ತಿ ಯಾವುದೇ ಕ್ಷೇತ್ರದಲ್ಲೂ ಸಿಗದು. ಶಿಕ್ಷಣದಿಂದ ಅಭಿವೃದ್ಧಿ ಹೊಂದಿದ ಪ್ರತಿಯೊಬ್ಬರೂ ತಮಗೆ ಶಿಕ್ಷಣ ನೀಡಿದ ಗುರುವಿನ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುತ್ತಾರೆ ಎಂದು ಬಿ.ಎಂ. ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಸಂಪತ್‌ಕುಮಾರ್ ಹೇಳಿದರು.
ಸೇವಾ ನಿವೃತ್ತಿ ಹೊಂದಿದ ಇಲ್ಲಿನ ಎಚ್ಟಿಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಚ್. ರಾಜಣ್ಣ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಮಾರು 30 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಎಚ್. ರಾಜಣ್ಣ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಗುರು-ಹಿರಿಯರನ್ನು ಹಾಗೂ ವಿದ್ಯೆ ಕಲಿಸಿದವರನ್ನು ಎಂದಿಗೂ ಮರೆಯಬಾರದು ಎಂದರು.
ಆದರ್ಶ ಶಾಲೆ ಮುಖ್ಯಾಧ್ಯಾಪಕ ಶ್ರೀನಿವಾಸ್ ಮಾತನಾಡಿ, ಇಂದಿನ ಶಿಕ್ಷಣದಲ್ಲಿ ಹಲವಾರು ನೂತನ ಆವಿಷ್ಕಾರಗಳನ್ನು ಜಾರಿಗೆ ತರಲಾಗಿದೆ. ಅವು ಶಿಕ್ಷಣ ಇಲಾಖೆಗೆ ಹೆಚ್ಚು ಮೆರಗು ನೀಡಿವೆ. ಈ ಹಿಂದೆ ಶಿಕ್ಷಕರ ಪರಿಶ್ರಮ ಹೆಚ್ಚಾಗಿರುತ್ತಿತ್ತು. ಇಂದಿಗೂ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಹಿಂದೆ ಬಿದಿಲ್ಲ. ಕೆಲವೊಂದು ಮಾಹಿತಿಯನ್ನು ಗಣಕಯಂತ್ರದ ಮೂಲಕ ಪಡೆಯುತ್ತಿದ್ದು, ಇದು ಸಹ ಶಿಕ್ಷಣದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯಾಧ್ಯಾಪಕ ಎಚ್. ರಾಜಣ್ಣ, ನಾನು ರಾಜ್ಯದ ಹಲವಾರು ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ನನ್ನ ಸೇವೆಯ ಕಡೆಯ ಎರಡು ವರ್ಷ ಈ ಶಾಲೆಯಲ್ಲಿ ಸೇವೆ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿತು. ಹೆಣ್ಣುಮಕ್ಕಳೇ ಇರುವ ಈ ಶಾಲೆಯಲ್ಲಿ ನನಗೆ ಎಲ್ಲಾ ರೀತಿಯ ಸಹಕಾರ ದೊರಕಿದೆ. ಹಾಗಾಗಿ ಪ್ರಸ್ತುತ ವರ್ಷದ ಎಸ್‌ಎಸ್‌ಎಲ್ಸಿ ಫಲಿತಾಂಶವನ್ನು ಉತ್ತಮ ಪಡಿಸಲು ಸಾಧ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಕೌಶಲ್ಯ ಮುಖ್ಯಶಿಕ್ಷಕರಿಗೆ ಇರಬೇಕು ಎಂದರು.
ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ ರೆಡ್ಡಿ, ತಾಲೂಕು ಅಧ್ಯಕ್ಷ ಜಿ.ಟಿ. ವೀರಭದ್ರ ನಾಯಕ, ಶಿಕ್ಷಕರಾದ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಆರ್. ಮಾರುತೇಶ್, ಪಾಲಯ್ಯ, ಶಿಕ್ಷಕರಾದ ರಾಜಣ್ಣ, ಪ್ರಾಣೇಶ್, ರೆಹನಾ, ಉಮಾ, ಪೂರ್ಣಿಮಾ, ಶ್ರೀನಿವಾಸ್, ಬಿ. ರಾಜಕುಮಾರ್ ಇತರರು ಇದ್ದರು.