ಚಳ್ಳಕೆರೆ: ತಾಲೂಕಿನ ನನ್ನಿವಾಳದ ಬೊಮ್ಮದೇವರಹಟ್ಟಿಯ ದೇವರ ಎತ್ತುಗಳ ಪೈಕಿ ಒಂದು ಎತ್ತು ನಿತ್ರಾಣಗೊಂಡು ಮೃತಪಟ್ಟಿತ್ತು. ಈ ವಿಷಯ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ದೇವರ ಎತ್ತುಗಳ ಸಂರಕ್ಷಣೆಗೆ ಮುಂದಾಗಿದೆ.
‘ದೇವರ ಪಾದ ಸೇರಿದ ಎತ್ತು’ ಶೀರ್ಷಿಕೆಯಡಿ ‘ಉದಯವಾಣಿ’ ಪತ್ರಿಕೆಯಲ್ಲಿ ಭಾನುವಾರ ವರದಿ ಪ್ರಕಟಗೊಂಡಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ತುಷಾರ್ ಬಿ. ಹೊಸೂರ್ ಅವರಿಗೆ ಸೂಚಿಸಿದ್ದರು. ಭಾನುವಾರ ಮಧ್ಯಾಹ್ನ ಒಂದು ಲೋಡ್ ಭತ್ತದ ಹುಲ್ಲನ್ನು ತಾವೇ ಸ್ವತಃ ಬೊಮ್ಮದೇವರ ಹಟ್ಟಿಗೆ ತೆಗೆದುಕೊಂಡು ಹೋದ ತಹಶೀಲ್ದಾರರು ಅದನ್ನು ಕಿಲಾರಿಗಳಿಗೆ ಹಸ್ತಾಂತರಿಸಿದರು. ಅಲ್ಲಿರುವ ಕುಡಿಯುವ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಸುಣ್ಣ ಹೊಡೆಸಿ ಗುಣಮಟ್ಟದ ನೀರಿನ ವ್ಯವಸ್ಥೆ ಮಾಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಜಿಲ್ಲಾಡಳಿತಕ್ಕೆ ಈ ಬಗ್ಗೆ ವರದಿ ನೀಡಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿತ್ತು. ಇಲ್ಲಿನ ಜಾನುವಾರುಗಳ ಆರೋಗ್ಯ ಸುಧಾರಣೆ ಹಾಗೂ ರಕ್ಷಣೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಜಾನುವಾರುಗಳ ಆರೋಗ್ಯ ತಪಾಸಣೆ ನಿರಂತರವಾಗಿ ನಡೆಯುತ್ತಿದ್ದು, ಪಶುವೈದ್ಯ ಇಲಾಖೆಯ ವೈದ್ಯರು ಇಲ್ಲಿಯೇ ಬೀಡು ಬಿಟ್ಟು ಈಗಾಗಲೇ ಎಲ್ಲಾ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿದ್ದಾರೆ ಎಂದರು.
ಕಿಲಾರಿಗಳ ಪರವಾಗಿ ಮಾತನಾಡಿದ ಪಾಲಯ್ಯ, ಜಿಲ್ಲಾಡಳಿತ ಮೊದಲೇ ಜಾಗೃತಿ ವಹಿಸಿ ಇಂದು ಸ್ಪಂದಿಸಿದ ರೀತಿಯಲ್ಲೇ ಸ್ಪಂದಿಸಿದ್ದರೆ ದೇವರ ಎತ್ತು ಸಾವನ್ನಪ್ಪುತ್ತಿರಲಿಲ್ಲ. ಇಲ್ಲಿನ ಎಲ್ಲಾ ಕಿಲಾರಿಗಳು ಜಾನುವಾರುಗಳ ವಿಷಯದಲ್ಲಿ ಕಾಳಜಿ ವಹಿಸುತ್ತಾರೆ. ತಮ್ಮ ಮನೆಗಳನ್ನು ತೊರೆದು ಅಡವಿಯಲ್ಲಿಯೇ ಜಾನುವಾರುಗಳೊಂದಿಗೆ ಬದುಕು ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಎಚ್ಚೆತ್ತುಕೊಂಡ ಬಗ್ಗೆ ಸಂತಸವಿದೆ. ಇದು ಹೀಗೆಯೇ ಮುಂದುವರೆಯಬೇಕು. ಇಲ್ಲವಾದಲ್ಲಿ ಮತ್ತೆ ಜಾನುವಾರುಗಳು ತಮ್ಮ ಬದುಕಿನ ಪಯಣವನ್ನು ಮುಗಿಸುವ ಸಂದರ್ಭ ಒದಗಿಬರಬಹುದುಎಂದು ಆತಂಕ ವ್ಯಕ್ತಪಡಿಸಿದರು.