Advertisement

ಕಾರ್ಮಿಕರ ದುಸ್ಥಿತಿಗೆ ಸರ್ಕಾರವೇ ಕಾರಣ: ವೀರಭದ್ರಪ್ಪ

04:45 PM Jul 26, 2019 | Naveen |

ಚಳ್ಳಕೆರೆ: ಕಳೆದ ಹಲವಾರು ದಶಕಗಳಿಂದ ರಾಷ್ಟ್ರದ ಆರ್ಥಿಕ ಸುಧಾರಣೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಕೋಟ್ಯಂತರ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಅವರ ಪರಿಶ್ರಮದ ಫಲವಾಗಿ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಂಡಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಜೀವನ ಮಟ್ಟ ಸುಧಾರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಐಟಿಯು ತಾಲೂಕು ಅಧ್ಯಕ್ಷ ಕೆ.ವಿ. ವೀರಭದ್ರಪ್ಪ ಆರೋಪಿಸಿದರು.

Advertisement

ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಶ್ರಮಿಕರ ಭವನದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಸಿಐಟಿಯು ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಸ್ಥಿತಿಯನ್ನು ಅಧೋಗತಿಗೆ ತಂದಿವೆ. ಎಲ್ಲಾ ಕಾನೂನು ಹಾಗೂ ಯೋಜನೆಗಳು ಬಂಡವಾಳಶಾಹಿಗಳ ಪರವಾಗಿರುವುದು ಶ್ರಮಿಕ ವರ್ಗದ ದುಸ್ಥಿತಿಗೆ ಕಾರಣ ಎಂದರು.

ಕಾರ್ಮಿಕ ಸಮೂಹಕ್ಕೆ ಮೂಲ ಸೌಕರ್ಯಗಳನ್ನು ನೀಡುವಂತೆ ಒತ್ತಾಯಿಸಿ ಸಿಐಟಿಯು ನಿರಂತರವಾಗಿ ಹೋರಾಟ ಮಾಡುತ್ತಿದೆ. ಈ ಹೋರಾಟದಲ್ಲಿ ಜಯ ಗಳಿಸಬೇಕಾದಲ್ಲಿ ನಮ್ಮ ಸಂಘಟನೆ ಇನ್ನೂ ಹೆಚ್ಚು ಬಲಗೊಳ್ಳಬೇಕಿದೆ. ಕಾರ್ಮಿಕ ವರ್ಗ ಸಂಘಟನೆಯ ಮೇಲೆ ವಿಶ್ವಾಸವಿಟ್ಟು ಸಂಘಟನೆ ನೀಡುವ ಸಲಹೆ, ಸೂಚನೆಯನ್ನು ತಪ್ಪದೇ ಪಾಲಿಸಬೇಕು. ಕಾರ್ಮಿಕರು ಉತ್ತಮ ಸಹಕಾರ ನೀಡಿದಲ್ಲಿ ಮಾತ್ರ ನಮ್ಮ ಹೋರಾಟದಲ್ಲಿ ಗೆಲುವು ಕಾಣಲು ಸಾಧ್ಯ ಎಂದು ತಿಳಿಸಿದರು.

ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಟಿ. ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಚಳ್ಳಕೆರೆ ಎಪಿಎಂಸಿ ಆವರಣದಲ್ಲಿ ಕಳೆದ ಸುಮಾರು 30 ವರ್ಷಗಳಿಂದ ಸಾವಿರಕ್ಕೂ ಹೆಚ್ಚು ಕಾರ್ಮಿಕರು ನಿವೇಶನ, ಮನೆ ಇಲ್ಲದೆ ಬೀದಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಮಾರುಕಟ್ಟೆ ಆಡಳಿತ ಮಂಡಳಿ ಸುಳ್ಳು ಭರವಸೆ ನೀಡಿ ಕಾರ್ಮಿಕರು ನಿವೇಶನದಿಂದ ವಂಚಿತರಾಗುವಂತೆ ಮಾಡಿದ್ದಾರೆ. ಖಾಸಗಿ ಜಮೀನು ಖರೀದಿಸಿ ಎಲ್ಲಾ ಹಮಾಲರಿಗೆ ನಿವೇಶನ ಒದಗಿಸಬೇಕೆಂದು ಒತ್ತಾಯಿಸಿದರು.

ಸಿಐಟಿಯು ಖಜಾಂಚಿ ಟಿ. ನಿಂಗಣ್ಣ, ಸದಸ್ಯರಾದ ಡಿ.ಎಂ. ಮುನಿಯಪ್ಪ, ಈ. ನಾಗರಾಜ, ಎಸ್‌. ರಾಜಣ್ಣ, ಕೆ. ತಿಪ್ಪೇಸ್ವಾಮಿ. ಎಚ್.ಒ. ನಾಗರಾಜ, ನಾರಾಯಣ, ಬಿ. ಬೋರಮ್ಮ, ಎನ್‌. ಗಂಗಮ್ಮ, ಇಂದಿರಮ್ಮ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next