ಚಳ್ಳಕೆರೆ: ಪ್ರಧಾನಮಂತ್ರಿಗಳ ಜನಪ್ರಿಯ ಯೋಜನೆಗಳಲ್ಲಿ ಒಂದಾದ “ಸರ್ವರಿಗೂ ಸೂರು’ ಯೋಜನೆಯಡಿ ಚಳ್ಳಕೆರೆ ನಗರಸಭೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಪ್ರಧಾನಮಂತ್ರಿಗಳ ವಸತಿ ಯೋಜನೆಯ ರಾಷ್ಟ್ರೀಯ ಪುರಸ್ಕಾರಕ್ಕೆ ಚಳ್ಳಕೆರೆ ನಗರಸಭೆ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ನಗರಸಭೆಯ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಯೋಜನಾ ನಿರ್ದೇಶಕ ಪಿ. ರಾಜಶೇಖರ್, 2015-16ನೇ ಸಾಲಿನಲ್ಲಿ ಚಳ್ಳಕೆರೆ ನಗರಸಭೆಯ ಅಂದಿನ ಪೌರಾಯುಕ್ತ ಜೆ.ಟಿ. ಹನುಮಂತರಾಜು ಸಮನ್ವಯಾಕಾರಿ ಪಿ. ಪಾಲಯ್ಯ ಮತ್ತು ಸಿಬ್ಬಂದಿ ವರ್ಗ ಒಂದೇ ಹಂತದಲ್ಲಿ 1643
ಮನೆಗಳ ಸಂಪೂರ್ಣ ದಾಖಲಾತಿಗಳನ್ನು ಗಣಕೀರಣಗೊಳಿಸಿದ್ದರು. ನಗರಸಭೆಯ ಕಾರ್ಯದಕ್ಷತೆಯನ್ನು ಮೆಚ್ಚಿ ಪ್ರಧಾನಮಂತ್ರಿ ವಸತಿ ಯೋಜನೆಯ ಅಧಿಕಾರಿಗಳು ರಾಷ್ಟ್ರೀಯ ಪುರಸ್ಕಾರಕ್ಕೆ ಚಳ್ಳಕೆರೆ ನಗರಸಭೆಯ ಹೆಸರನ್ನು ನಾಮನಿರ್ದೇಶನ ಮಾಡಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದರು.
ಪ್ರಸ್ತುತ ಚಿತ್ರದುರ್ಗ ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಜೆ.ಟಿ. ಹನುಮಂತರಾಜು ಮಾತನಾಡಿ, ಕಳೆದ ಸುಮಾರು 30 ವರ್ಷಗಳಿಂದ ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. ಚಳ್ಳಕೆರೆ ಪುರಸಭೆ ಮುಖ್ಯಾಧಿಕಾರಿಯಾಗಿ 2014ರಲ್ಲಿ ಕಾರ್ಯ ಪ್ರಾರಂಭಿಸಿದೆ. 2015ರಲ್ಲಿ ಪೌರಾಯುಕ್ತರಾಗಿ ಅಲ್ಲೇ ಸೇವೆ ಮಾಡುವ ಅವಕಾಶ ದೊರೆಯಿತು.
ಜಿಲ್ಲಾ ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿಗಳ ಸೂಚನೆಯಂತೆ ನಾನು ಎಲ್ಲರ ಸಹಕಾರದಿಂದ ಕಾರ್ಯನಿರ್ವಹಿಸಿದ್ದೇನೆ. ಇಂದು ಆ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗುತ್ತಿರುವುದು ಸಂತಸ ತಂದಿದೆ. ನನ್ನೊಂದಿಗೆ ಕೈಜೋಡಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸುವುದಾಗಿ ಹೇಳಿದರು.
ಚಳ್ಳಕೆರೆ ನಗರಸಭೆ ಪ್ರಧಾನಮಂತ್ರಿ ವಸತಿ ಯೋಜನೆಯ ರಾಷ್ಟ್ರೀಯ ಪುರಸ್ಕಾರಕ್ಕೆ ನಾಮನಿರ್ದೇಶನವಾದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶಾಸಕ ಟಿ. ರಘುಮೂರ್ತಿ, ಕೇವಲ ವಸತಿ ಯೋಜನೆಯಷ್ಟೇ ಅಲ್ಲದೆ ನಗರಾಭಿವೃದ್ಧಿ ಯೋಜನೆಯ ಹಲವಾರು ಕಾಮಗಾರಿಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿದ ಕೀರ್ತಿ ನಗರಸಭೆಗೆ ಸಲ್ಲುತ್ತದೆ. ರಾಷ್ಟ್ರೀಯ ಪುರಸ್ಕಾರ ಪಡೆಯುವ ಮೂಲಕ ಚಳ್ಳಕೆರೆ ಕ್ಷೇತ್ರದ ಖ್ಯಾತಿಯನ್ನು ರಾಷ್ಟ್ರೀಯ ಮಟ್ಟದಲ್ಲೂ ಪಸರಿಸುವ ಅವಕಾಶ ದೊರೆತಿದೆ. ಇದಕ್ಕೆ ಪ್ರಮುಖ ಕಾರಣಕರ್ತರಾದ ಪೌರಾಯುಕ್ತರಾದ ಜೆ.ಟಿ.ಹನುಮಂತರಾಜು, ಪಾಲಯ್ಯ ಹಾಗೂ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಸತಿ ಯೋಜನೆಯ ನಿಯಮಗಳ ಅನುಸಾರ 2015-16ನೇ ಸಾಲಿನಲ್ಲಿ 1043, ವಾಜಪೇಯಿ ವಸತಿ ಯೋಜನೆಯಡಿ 600, ಅಂಬೇಡ್ಕರ್ ವಸತಿ ಯೋಜನೆ ಸೇರಿದಂತೆ ಒಟ್ಟು 1643 ಮನೆಗಳ ಪಟ್ಟಿಯನ್ನು ಸಿದ್ಧಪಡಿಸಿ ಕಳುಹಿಸಿಕೊಟ್ಟಿದ್ದು, ಕೇಂದ್ರ ಸರ್ಕಾರ ಮಂಜೂರಾತಿ ನೀಡಿತ್ತು. ಬಹುತೇಕ ಮನೆಗಳು ಪೂರ್ಣಗೊಂಡಿದ್ದು ಫಲಾನುಭವಿಗಳು ಅಲ್ಲಿ ವಾಸ ಮಾಡುತ್ತಿದ್ದಾರೆ. ಜಿಲ್ಲಾ ಯೋಜನಾ ಅಧಿಕಾರಿಗಳು ರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನವಾಗಿರುವ ಮಾಹಿತಿ ನೀಡಿದ್ದಾರೆ. ಇದು ಚಳ್ಳಕೆರೆ ನಗರಕ್ಕೆ ಸಂದ ಗೌರವ.
ಪಿ. ಪಾಲಯ್ಯ,
ಚಳ್ಳಕೆರೆ ನಗರಸಭೆ ಪೌರಾಯುಕ್ತ