Advertisement

ಚಳ್ಳಕೆರೆ: ಬಂದ್‌ಗೆ ಸಿಗ್ಲಿಲ್ಲ ಸಾರ್ವಜನಿಕರ ಉತ್ತಮ ಪ್ರತಿಕ್ರಿಯೆ

06:08 AM Jan 09, 2019 | Team Udayavani |

ಚಳ್ಳಕೆರೆ: ರಾಷ್ಟ್ರೀಯ ಕಾರ್ಮಿಕರ ಒಕ್ಕೂಟ ಕರೆ ನೀಡಿದ್ದ ಭಾರತ ಬಂದ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
ವ್ಯಕ್ತವಾಗಲಿಲ್ಲ.  ಮಂಗಳವಾರ ಬೆಳಿಗ್ಗೆಯಿಂದ ಕಾರ್ಮಿಕ ಸಂಘಟನೆಗಳ ಮುಖಂಡರು ನಗರದ ಬೀದಿ ಬೀದಿಗಳಲ್ಲಿ ಸಂಚರಿಸಿ ಬಂದ್‌ಗೆ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ಉದ್ಯೋಗ ಸೃಷ್ಟಿ ಭರವಸೆಯನ್ನು ಈಡೇರಿಸದೇ ಇರುವುದು, ಸಾರ್ವಜನಿಕ ಉದ್ಯೋಗಿಗಳ ಖಾಸಗೀಕರಣ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಗುತ್ತಿಗೆ ಮತ್ತು ಇನ್ನಿತರ ಕಾರ್ಮಿಕರ ಕಾಯಂ, ಕನಿಷ್ಠ ವೇತನ 18 ಸಾವಿರ ರೂ.ಗೆ ಹೆಚ್ಚಳ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.

Advertisement

ನೆಹರೂ ವೃತ್ತದಲ್ಲಿ ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ. ಶಿವರುದ್ರಪ್ಪ, ತಾಲೂಕು ಅಧ್ಯಕ್ಷ ತಿಪ್ಪೇರುದ್ರಪ್ಪ, ಉಪಾಧ್ಯಕ್ಷ ಪಿ.ಒ. ಬಸವರಾಜು ಮೊದಲಾದವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ ಗೆ ಸಹಕಾರ ನೀಡಬೇಕು, ಕಾರ್ಮಿಕ ವಿರೋಧಿ ನೀತಿಯನ್ನು ಎಲ್ಲರೂ ಧಿಕ್ಕರಿಸಬೇಕೆಂದು ಮನವಿ ಮಾಡುತ್ತಿದ್ದರು. ಸಿಐಟಿಯು ಜಿಲ್ಲಾ ಸಂಚಾಲಕ ಟಿ. ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಕೆ.ವಿ. ವೀರಭದ್ರಪ್ಪ, ಉಪಾಧ್ಯಕ್ಷ ನಾಗರಾಜ, ಖಜಾಂಚಿ ನಿಂಗಣ್ಣ ಮುಂತಾದವರು ಆಟೋದಲ್ಲಿ ಸಂಚರಿಸಿ ಬಂದ್‌ ಬೆಂಬಲಿಸುವಂತೆ ಮನವಿ ಮಾಡಿದರು.

ಪ್ರತಿಭಟನಾಕಾರರು ಗುಂಪು ಗುಂಪಾಗಿ ತೆರಳಿ ಬಂದ್‌ ಮಾಡುವಂತೆ ಒತ್ತಾಯ ಮಾಡುತ್ತಿದ್ದುದನ್ನು ಗಮನಿಸಿದ ಪಿಎಸ್‌ಐ ಕೆ. ಸತೀಶ್‌ ನಾಯ್ಕ ಪ್ರತಿಭಟನಾಕಾರರ ಬಳಿ ತೆರಳಿದರು. ಬಂದ್‌ ಮಾಡುವಂತೆ ಯಾವುದೇ ರೀತಿಯ ಒತ್ತಡ ಹೇರಬಾರದು, ಕೇವಲ ಮನವಿ ಮಾಡಬೇಕೆಂದು ತಾಕೀತು ಮಾಡಿದರು. ಅಲ್ಲದೆ ಬಲವಂತವಾಗಿ ಬಂದ್‌ ಮಾಡುವಂತೆ ಯಾರಾದರೂ ಒತ್ತಡ ಹೇರಿದರೆ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ತಾಲೂಕಿನಾದ್ಯಂತ ಯಾವುದೇ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಖಾಸಗಿ ಬಸ್‌ಗಳ ಸಂಚಾರ ಎಂದಿನಂತಿತ್ತು. ಆಟೋರಿಕ್ಷಾಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಿದವು, ಬ್ಯಾಂಕ್‌, ಅಂಚೆ ಕಚೇರಿ ಬಂದ್‌ ಆಗಿದ್ದವು. ಬಂದ್‌ ಇದ್ದಿದ್ದರಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಯುವಕರು ಕ್ರಿಕೆಟ್‌ ಆಡಿದರು.

 ಕೆಎಸ್‌ಆರ್‌ಟಿಸಿಯ ಚಳ್ಳಕೆರೆ ಘಟಕದಲ್ಲಿ 48 ಬಸ್‌ಗಳಿದ್ದು, 44 ಮಾರ್ಗಗಳಲ್ಲಿ ನಿತ್ಯ ಸೇವೆ ನೀಡಲಾಗುತ್ತಿದೆ. ಇಂದು ಕೇವಲ
ನಾಲ್ಕು ಮಾರ್ಗಗಳಲ್ಲಿ ಮಾತ್ರ ಬಸ್‌ಗಳು ಸಂಚರಿಸಿದ್ದು, ಅವುಗಳನ್ನು ಸಹ ಪ್ರತಿಭಟನೆ ಹಿನ್ನೆಲೆಯಲ್ಲಿ ವಾಪಾಸ್‌
ಪಡೆಯಲಾಯಿತು ಎಂದು ಡಿಪೋ ವ್ಯವಸ್ಥಾಪಕ ಪ್ರಭು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next