ಚಳ್ಳಕೆರೆ: ಶಿಶು ಮತ್ತು ಬಾಣಂತಿ ಮರಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ನಡೆಸುತ್ತಾ ಬಂದಿದೆ. ಶಿಶು ಜನಿಸಿದ ಅರ್ಧ ಗಂಟೆಯಲ್ಲಿ ತಾಯಿ ಎದೆಹಾಲನ್ನು ನೀಡಿದರೆ ಮಾತ್ರ ಅಂತಹ ಮಗು ಆರೋಗ್ಯವಂತ ಮಗುವಾಗಿ ಬೆಳೆಯುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ.ಎಲ್. ಪಾಲಾಕ್ಷ ಹೇಳಿದರು.
ಇಲ್ಲಿನ ರೋಟರಿ ಬಾಲಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕು ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಣಂತಿ ಮತ್ತು ಶಿಶು ಆರೋಗ್ಯದ ಕುರಿತಂತೆ ಆರೋಗ್ಯ ಇಲಾಖೆ ವತಿಯಿಂದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾರ್ಗದರ್ಶನ ಮಾಡಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಶಿಶು ಮತ್ತು ಬಾಣಂತಿ ಮರಣ ಹೆಚ್ಚಾಗುತ್ತಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಗಮನ ನೀಡಬೇಕು. ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ ಮಾತನಾಡಿ, ನಾವೆಲ್ಲರೂ ನಮ್ಮ ಬದುಕನ್ನು ನಮ್ಮ ಪೂರ್ವಜರ ಪರಂಪರೆ ಹಾಗೂ ಪದ್ಧತಿಗಳಂತೆ ಇಂದಿಗೂ ನಡೆಸುತ್ತಿದ್ದೇವೆ. ಈ ಹಿಂದೆ ತಾಯಿ ಎದೆಹಾಲು ನೀಡುವ ವಿಚಾರದಲ್ಲಿ ಅನೇಕ ಅಪನಂಬಿಕೆಗಳು ಉಂಟಾಗಿ ಶಿಶುವಿನ ಮರಣ ಉಂಟಾಗುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಆರೋಗ್ಯ ಇಲಾಖೆ ಎಲ್ಲಾ ಹಂತದಲ್ಲೂ ಗರ್ಭಿಣಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ| ಎನ್.ಪ್ರೇಮಸುಧಾ ಮಾತನಾಡಿ, ಸ್ತನ್ಯಪಾನ ಸಪ್ತಾಹ ಸಾಂಕೇತಿಕವಾಗಿ ಉದ್ಘಾಟನೆಯಾಗಿದೆ. ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ಶ್ರೀನಿವಾಸ್, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಬಸವರಾಜು, ಮಕ್ಕಳ ತಜ್ಞ ಡಾ| ಜಿ. ತಿಪ್ಪೇಸ್ವಾಮಿ, ಆರೋಗ್ಯ ಇಲಾಖೆಯ ಎಸ್.ಬಿ.ತಿಪ್ಪೇಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.