ಚಳ್ಳಕೆರೆ: ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಜೊತೆಗೆ ಇತರೆ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಮಾತ್ರ ಆ ಶಾಲೆ ಎಲ್ಲಾ ರೀತಿಯ ಗೌರವ ಮತ್ತು ವಿಶ್ವಾಸ ಗಳಿಸುತ್ತದೆ. ಶಾಲಾ ಚಟುವಟಿಕೆಗಳ ಬಗ್ಗೆ ಸಮಾಜದಲ್ಲಿ ಚರ್ಚೆ ನಡೆದಾಗ ಮಾತ್ರ ಅಂತಹ ಶಾಲೆ ಜನರ ಮನದಲ್ಲಿ ಆಳವಾಗಿ ಬೇರೂರಲು ಸಾಧ್ಯ ಎಂದು ನಗರಂಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ ಸಣ್ಣಬೋರಣ್ಣ ಹೇಳಿದರು.
ಇಲ್ಲಿನ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಸಪ್ರಶ್ನೆ ಮತ್ತು ಬ್ಯಾಗ್ ರಹಿತ ದಿನಾಚರಣೆ (ಬ್ಯಾಗ್ ಲೆಸ್ ಡೇ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆ ಪ್ರಾರಂಭವಾಗಿ ಈಗಾಗಲೇ ಎರಡು ತಿಂಗಳು ಕಳೆದಿದೆ. ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಜ್ಞಾನಾರ್ಜನೆಯನ್ನು ಈ ಸಂಸ್ಥೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕ ಜಿ.ಕೆ. ಶ್ರೀನಿವಾಸ್, ಶಾಲೆಯ ಹಳೆ ವಿದ್ಯಾರ್ಥಿಗಳು ಆದರ್ಶ ಅರಸರು ವಿಷಯದ ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಅವರ ಮಾರ್ಗದರ್ಶನ ಪಡೆಯಲಾಗುತ್ತಿದೆ. ಪ್ರತಿ ನಿತ್ಯ ವಿದ್ಯಾರ್ಥಿಗಳು ಭಾರವಾದ ಬ್ಯಾಗ್‌ಗಳೊಂದಿಗೆ ಶಾಲೆಗೆ ಆಗಮಿಸುತ್ತಾರೆ. ಇಂದು ಯಾವುದೇ ವಿದ್ಯಾರ್ಥಿ ಬ್ಯಾಗ್ ಇಲ್ಲದೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದರು.
ವಿದ್ಯಾರ್ಥಿಗಳಾದ ರಚನಾ, ಸೃಷ್ಟಿ, ಪ್ರಿಯಾಂಕ, ಸೃಜನಾ, ಕೃತಿಕಾ, ಮಾನಸಾ, ಸಚಿನ್ ರೆಡ್ಡಿ, ಯಶವಂತ್, ದಿನೇಶ್, ತಿಪ್ಪೇಸ್ವಾಮಿ, ಶ್ರವಣ್, ಬಸವೇಶ್ವರ ಸಜ್ಜನ್, ಎಸ್‌ಡಿಎಂಸಿ ಸದಸ್ಯ ಮಂಜುನಾಥ, ಗ್ರಾಮದ ಮುಖಂಡ ರಾಮು, ಶಿಕ್ಷಕ ವಿ.ಕೆ. ಮಂಜುನಾಥ ಮಾತನಾಡಿದರು. ಶಿಕ್ಷಕರಾದ ಎಲ್. ರುದ್ರಮುನಿ, ಭಾವನಾ, ಪಿ.ಎಂ. ವೀರಭದ್ರಪ್ಪ, ಸುಮಯ್ಯ ಕೌಸರ್, ರಾಜೀವ್ ರಾಥೋಡ್, ಬೊಮ್ಮಲಿಂಗಪ್ಪ, ಮಠಪತಿ, ಸದಾಶಿವಯ್ಯ, ಸಿ.ಆರ್. ವೀರೇಶ್, ಶಾಂತಕುಮಾರ್, ರೇಖಾ ಮತ್ತಿತರರು ಇದ್ದರು.