Advertisement

ಗ್ರಾಮೀಣ ಜನರ ಸಮಸ್ಯೆಗೆ ಸ್ಪಂದಿಸಿ

05:01 PM Apr 26, 2019 | Naveen |

ಚಳ್ಳಕೆರೆ: ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ನಡುವೆಯೂ ತಾಲೂಕಿನ ಜನತೆ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ. ಈಗ ಚುನಾವಣಾ ಕಾರ್ಯಗಳು ಮುಗಿದಿರುವುದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಉಪವಿಭಾಗಾಧಿಕಾರಿ ವಿಜಯಕುಮಾರ್‌ ಸೂಚಿಸಿದರು.

Advertisement

ಬರಗಾಲದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಸುಮಾರು ಎರಡು ತಿಂಗಳುಗಳಿಂದ ರೈತರಿಗೆ ಅವಶ್ಯಕವಾಗಿರುವ ನೀರು, ಗೊಬ್ಬರ ಹಾಗೂ ಸಬ್ಸಿಡಿ ದೊರಕಿಸಿಕೊಡಲು ಸಾಧ್ಯವಾಗಿಲ್ಲ. ಮಳೆ ಸಮರ್ಪಕವಾಗಿ ಆಗದೇ ಇರುವುದರಿಂದ ಗ್ರಾಮೀಣ ಭಾಗಗಳಲ್ಲಿ ಹಲವಾರು ಸಮಸ್ಯೆಗಳು ಕಂಡು ಬಂದಿವೆ. ಗ್ರಾಮೀಣ ಜನರು ಜೀವನ ಮಾಡುವುದು ಕಷ್ಟಕರವಾಗಿದ್ದು, ಬದುಕು ಸಾಗಿಸಲು ಅನಿವಾರ್ಯವಾಗಿ ವಲಸೆ ಹೋಗಬೇಕು ಅಥವಾ ಗ್ರಾಮೀಣ ಭಾಗದಲ್ಲೇ ಕೆಲಸ ಮಾಡಬೇಕಿದೆ. ಅದ್ದರಿಂದ ಪ್ರತಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಸಲಹೆ ಪಡೆದು ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು. ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರ್‌ ಮಾತನಾಡಿ, ಗ್ರಾಮೀಣ ಭಾಗಗಳ ನೈಜ ಪರಿಸ್ಥಿತಿ ಮತ್ತು ಅಲ್ಲಿನ ಸಮಸ್ಯೆಗಳ ಬಗ್ಗೆ

ಅಧಿಕಾರಿಗಳಿಗೆ ಸಾಕಷ್ಟು ಮಾಹಿತಿ ಇದೆ. ವಿಶೇಷವಾಗಿ ಗ್ರಾಮೀಣ ಭಾಗಗಳ ಕುಡಿಯುವ ನೀರು, ಸ್ವಚ್ಛತೆ ಬಗ್ಗೆ ಪಿಡಿಒಗಳು ಗಮನ ಹರಿಸಬೇಕಿದೆ. ಗ್ರಾಮೀಣ ಪ್ರದೇಶದ ಬಡವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ನೆರವಾಗಬೇಕಿದೆ. ಜನರ ಸಮಸ್ಯೆಗಳ ನಿವಾರಣೆಗೆ ಎಲ್ಲಾ ಹಂತದಲ್ಲೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್‌. ಚಂದ್ರಶೇಖರ್‌ ಮಾತನಾಡಿ, ತಾಲೂಕಿನ ಸುಮಾರು 35 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಅದರಲ್ಲಿ 16 ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್‌ಗಳ ಮೂಲಕ ಪ್ರತಿನಿತ್ಯ ಎರಡು ಬಾರಿ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ನೀರು ಸರಬರಾಜು ಮಾಡುವ ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಸಲು ನಿರ್ದೇಶನ ನೀಡಲಾಗಿದೆ. ದುರಸ್ತಿಯಾಗಬೇಕಿರುವ ಕೊಳವೆಬಾವಿ, ಶುದ್ಧ ನೀರಿನ ಘಟಕಗಳ ಪಟ್ಟಿ ಸಿದ್ಧಪಡಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ| ಎನ್‌. ಮಾರುತಿ, ಗ್ರಾಮೀಣ ಕುಡಿಯುವ ನೀರು ಯೋಜನೆಯ ಕಿರಣ್‌ ನಾಯಕ, ತೋಟಗಾರಿಕೆ ಇಲಾಖೆ ಅಧಿಕಾರಿ ವಿರೂಪಾಕ್ಷಪ್ಪ, ಪಶು ವೈದ್ಯಾಧಿಕಾರಿ ಡಾ| ಹನುಮಪ್ಪ, ಕಂದಾಯಾಧಿಕಾರಿಗಳಾದ ಶರಣಬಸಪ್ಪ, ಶಾಂತಪ್ಪ, ರಫೀ ಸಾಬ್‌, ಗ್ರಾಮಲೆಕ್ಕಿಗರಾದ ರಾಜೇಶ್‌, ದಿವಾಕರ ಮತ್ತಿತರರು ಭಾಗವಹಿಸಿದ್ದರು.

Advertisement

ತಾಲೂಕಿನ ಎಲ್ಲಾ 40 ಗ್ರಾಮ ಪಂಚಾಯತ್‌ಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಆರಂಭಿಸಬೇಕು. ಕಾಮಗಾರಿ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ಸಂಬಂಧಪಟ್ಟ ಪಿಡಿಒ ಸಿದ್ಧಪಡಿಸಿರಬೇಕು. ಗ್ರಾಮೀಣ ಭಾಗಗಳ ಕಾಮಗಾರಿಗಳಿಗೆ ಮಾನವ ದಿನಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತೆ ಕೂಲಿ ನೀಡುವ ಕಾಮಗಾರಿಗೆ ಆದ್ಯತೆ ನೀಡಬೇಕು. ಯಾವುದೇ ಹಂತದಲ್ಲೂ ಹತಾಶೆಗೆ ಒಳಗಾಗದೆ ಕೆಲಸ ಮಾಡಬೇಕು.
•ವಿಜಯಕುಮಾರ್‌,
ಉಪವಿಭಾಗಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next