ಮೈಸೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಹಲವಾರು ಮಂದಿಗೆ ವಂಚಿಸಿದ್ದು, ಸುಮಾರು 185 ಕೋಟಿ ರೂಪಾಯಿ ವ್ಯವಹಾರ ನಡೆದಿರುವುದಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದ್ದಾರೆ.
ಇದನ್ನೂ ಓದಿ:Rohith Sharma: ರೋಹಿತ್ ಪಾಸ್‌ಪೋರ್ಟ್ ಮರೆತರೆ? ವಿಚಾರ ಬಹಿರಂಗಪಡಿಸಿದ ಕೊಹ್ಲಿ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಂಚನೆ ಪ್ರಕರಣದಲ್ಲಿ ಒಟ್ಟು 17 ಜನರು ಮೋಸ ಹೋಗಿದ್ದಾರೆ. 23 ಜನಕ್ಕೆ ಟಿಕೆಟ್ ಕೊಡಿಸುವುದಾಗಿ ಅವರಿಂದ ಹಣ ಪಡೆದಿದ್ದು, ಅಂದಾಜು 185 ಕೋಟಿ ರೂ. ವ್ಯವಹಾರ ನಡೆದಿದೆ. ಆಕೆ ಯಾರ ಬಳಿ ಹಣ ಪಡೆದಿದ್ದಾಳೆ, ಯಾರಿಗೆಲ್ಲಾ ಹಣ ಸಂದಾಯವಾಗಿದೆ ಎನ್ನುವುದನ್ನು ಸಿಸಿಬಿ ಪೊಲೀಸರು ಇನ್ನು ಎರಡು ದಿನಗಳಲ್ಲಿ ಬಹಿರಂಗಪಡಿಸಲಿದ್ದಾರೆ ಎಂದು ದೂರಿದರು.
ಮೈಸೂರು ಭಾಗದಲ್ಲೂ ಇಬ್ಬರು ರಾಜಕಾರಣಿಗಳು ಹಣ ಕಳೆದುಕೊಂಡಿದ್ದಾರೆ. 9 ಜನರ ತಂಡದಿಂದ ಈ ವಂಚನೆ ಘಟನೆ ನಡೆದಿದ್ದು, ಇವರೆಲ್ಲಾ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮುಖಂಡ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಜೊತೆ ಚೈತ್ರಾ ಕುಂದಾಪುರ ಸಂಬಂಧವೇನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಲಕ್ಷ್ಮಣ ತಿಳಿಸಿದ್ದಾರೆ.