Advertisement

ಮೊಬೈಲ್‌, ಇಂಟರ್ನೆಟ್‌ನಿಂದ ಅಂತರವಿರಲಿ: ಡಾ|ಭಂಡಾರಿ

09:00 PM Apr 30, 2019 | Sriram |

ಉಡುಪಿ: ಮೊಬೈಲ್‌, ಟಿ.ವಿ, ಇಂಟರ್‌ನೆಟ್‌ ಇತ್ಯಾದಿಗಳು ಅಗತ್ಯವಿರುವ ಕೆಟ್ಟ ಸಾಧನವಾಗಿದೆ. ವಿಶೇಷವಾಗಿ ಮಕ್ಕಳು ಮತ್ತು ದೊಡ್ಡವರೂ ಇದನ್ನು ಬಳಸುವಾಗ ಅಂತರ ಕಾಪಾಡಿಕೊಳ್ಳಬೇಕು ಎಂದು ಮನೋವೈದ್ಯ ಡಾ| ಪಿ.ವಿ. ಭಂಡಾರಿ ಎಚ್ಚರಿಸಿದ್ದಾರೆ.

Advertisement

ಮಣಿಪಾಲದ ಡಾ| ಟಿಎಂಎ ಪೈ ಆ್ಯಂಪಿಥಿಯೇಟರ್‌ನಲ್ಲಿ ಮಣಿಪಾಲ ಗ್ರೂಪ್‌ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ “ಚೈತ್ರ ಚಿತ್ತಾರ- 2019’ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂತಹ ಸಾಮಗ್ರಿಗಳು ಅಗತ್ಯವೂ ಆಗಿರುತ್ತವೆ, ಕೆಟ್ಟ ಪರಿಣಾಮಗಳನ್ನೂ ಬೀರುತ್ತವೆ ಎಂದರು.

ಸುಪ್ತ ಕಲೆ ಅರಿತು ಪ್ರೋತ್ಸಾಹಿಸಿ
ಹೆತ್ತವರು ಮಕ್ಕಳ ಬೇಕು-ಬೇಡದ ಕುರಿತು ಗಮನ ಹರಿಸಬೇಕು. ಮಕ್ಕಳನ್ನು ಇತರೆ ಜತೆ ಹೋಲಿಕೆ ಮಾಡಬಾರದು. ನಿಮ್ಮ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಮಕ್ಕಳು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಪೋಷಕರಿಗೆ ಕರೆ ನೀಡಿದರು.

ಬಡಗಬೆಟ್ಟು ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಅಂಕ ಕೇವಲ ಜ್ಞಾನವನ್ನು ಆಳೆಯುವ ಮಾಪನ. ಮಕ್ಕಳಲ್ಲಿ ಅಡಗಿರುವ ಕಲೆ ಗುರುತಿಸುವಲ್ಲಿ ಮಕ್ಕಳ ಬೇಸಿಗೆ ಶಿಬಿರ ಚೈತ್ರ ಚಿತ್ತಾರದಂತಹ ಶಿಬಿರಗಳು ಸಹಾಯಕ ಎಂದು ಅಭಿಪ್ರಾಯಪಟ್ಟರು.

ಮಣಿಪಾಲ ಗ್ರೂಪ್‌ ಎಚ್‌ಆರ್‌ ವಿಭಾಗದ ಉಪಾಧ್ಯಕ್ಷ ಎಂ.ಎಸ್‌ ಕೃಷ್ಣ ಮಾತನಾಡಿ, ಜ್ಞಾನ ಹಾಗೂ ಕೌಶಲಗಳನ್ನು ಅಗತ್ಯಕ್ಕೆ ತಕ್ಕಂತೆ ಕಲಿಯ ಬಹುದು. ಆದರೆ ಧನಾತ್ಮಕ ಮನೋಭಾವನೆಯನ್ನು ಬಾಲ್ಯದಲ್ಲಿ ಆಳವಡಿಸಿಕೊಳ್ಳಬೇಕು. ಆಗ ಮಾತ್ರ ಭವಿಷ್ಯ ಅಡಿಗಲ್ಲು ಭದ್ರವಾಗಿರುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಲ್ಲಿ ಧನಾತ್ಮಕ ಮನೋಭಾವನೆ ಬೆಳೆಸಿ ಎಂದರು.

Advertisement

ಶಿಬಿರದ ನಿರ್ದೇಶಕ ಜೆ.ಪಿ. ಪ್ರಭಾಕರ್‌ ತುಮರಿ ಅವರನ್ನು ಸಮ್ಮಾನಿಸಿದರು. ಶಿಬಿರದಲ್ಲಿ ಭಾಗವಹಿಸಿದ 45 ಮಕ್ಕಳಿಗೆ ಶಿಬಿರದ ಪ್ರಮಾಣ ಪತ್ರ ವಿತರಿಸಲಾಯಿತು. ಶಿಬಿರಾರ್ಥಿಗಳಾದ ಖುಷಿ, ಶ್ರೇಯಸ್‌ ಶಿಬಿರದ ಕುರಿತು ಅನುಭವ ಹಂಚಿಕೊಂಡರು.

ನಿವೃತ್ತ ಪ್ರಾಂಶುಪಾಲ ಮೇಟಿ ಮುದಿಯಪ್ಪ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕ ಜೆ.ಪಿ. ಪ್ರಭಾಕರ್‌ ತುಮರಿ ಸ್ವಾಗತಿಸಿ, ಮಣಿಪಾಲ ಗ್ರೂಪ್‌ ಎಚ್‌ಆರ್‌ನ ಉಷಾ ರಾಣಿ ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು.

ಗುಡ್‌, ಬ್ಯಾಡ್‌ ಸ್ಪರ್ಶಗಳ ಅರಿವು ಮೂಡಿಸಿ
ದೇಶದಲ್ಲಿ ಶೇ. 50ರಷ್ಟು ಮಕ್ಕಳ ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಪೋಷಕರು ಮಕ್ಕಳಿಗೆ ಗುಡ್‌ ಹಾಗೂ ಬ್ಯಾಡ್‌ ಸ್ಪರ್ಶಗಳ ಬಗ್ಗೆ ಅರಿವು ಮೂಡಿಸಬೇಕು. ಮನೆಯಿಂದ ಹೊರಗೆ ಆಡುವ ಆಟಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕ.
– ಡಾ| ಪಿ.ವಿ. ಭಂಡಾರಿ, ಮನೋವೈದ್ಯ

Advertisement

Udayavani is now on Telegram. Click here to join our channel and stay updated with the latest news.

Next